• ಮುಖಪುಟ
  • ಸಿನಿಮಾ
  • ದೇಗುಲ ಸರಣಿ
  • ರಾಜಕೀಯ
  • ಭಾಷೆ
  • ಸಾಹಿತ್ಯ
  • ಪರಿಸರ
  • ರಂಗ ಕಲೆ
  • ಮಾಧ್ಯಮ
  • ಪ್ರವಾಸ
  • ಜೀವನಶೈಲಿ
  • ನನ್ನ ಬಗ್ಗೆ
  • ಸಂಪರ್ಕಿಸಿ

ಸಂವೇದನಾಶೀಲ ಮನಸಿನ ‘ಮೀಡಿಯಾ ಡೈರಿ ‘

ಲೈಮ್ ಲೈಟಿನಲ್ಲಿ ಇರುವ ವ್ಯಕ್ತಿಗಳ ಒಡನಾಟದಲ್ಲಿರುವ ಪತ್ರಕರ್ತರಿಗೆ ನೋಡುವ ‘ದೃಷ್ಟಿ’ ಮಬ್ಬಾಗುವ ಸಾಧ್ಯತೆ ಇರುತ್ತದೆ. ಈ  ಅಪಾಯ ಮೀರಿದಾಗ ಮಾತ್ರ ಹೊಳಹುಗಳುಳ್ಳ ‘ಅಂತರದೃಷ್ಟಿ’ ವರದಿ ಸಮುದಾಯಕ್ಕೆ ದಕ್ಕುತ್ತದೆ. ಶ್ರೀನಿವಾಸ ಗೌಡ ಅವರ ‘ಮೀಡಿಯಾ ಡೈರಿ’ ಕೃತಿ ಇಂಥ ಸಂವೇದನಾಶೀಲ ಬರಹಗಳನ್ನು ಒಳಗೊಂಡಿದೆ. ಹಿರಿಯ ಪತ್ರಕರ್ತ ಜಿ.ಎನ್. ಮೋಹನ್ ಅವರ ಸಂಪಾದಕತ್ವದ ಮೀಡಿಯಾ ಮಾಲಿಕೆಯಡಿ ಬಂದಿರುವ ಎರಡನೇ ಪುಸ್ತಕವಿದು. ಅಂಕಿತ ಪ್ರಕಾಶನ ಇದನ್ನು ಹೊರ ತಂದಿದೆ.

2008 ರಿಂದ ‘ಖಾಸಗಿ ಡೈರಿ’ ಹೆಸರಿನ ಬ್ಲಾಗಿನಲ್ಲಿ ಶ್ರೀನಿವಾಸ ಗೌಡ ಅವರು ಪತ್ರಿಕೋದ್ಯಮದ ಪರಿಧಿಯಲ್ಲಿರುವ ಲೇಖನಗಳನ್ನು ಬರಿಯುತ್ತಿದ್ದಾರೆ. ಈ ಬ್ಲಾಗಿನಲ್ಲಿ ಪ್ರಕಟವಾದ ಮೊದಲ ಲೇಖನದಿಂದ 2011 ರ ಮೇ ತನಕ ಪ್ರಕಟವಾದ ಬರಹಗಳೆಲ್ಲವನ್ನೂ ನಾನು ಓದಿದ್ದೇನೆ. ಮೇ ನಂತರ ಯಾಕೋ ಹೊಸ ಲೇಖನಗಳು ಪ್ರಕಟವಾಗುತ್ತಿಲ್ಲ. ಈ ಬ್ಲಾಗಿನ ಖಾಯಂ ಓದುಗನಾಗಲು ಕಾರಣಗಳೆಂದರೆ ವಿಷಯಗಳನ್ನು ಪೂರ್ವಾಗ್ರಹಪೀಡಿತವಿಲ್ಲದೆ ನಿರೂಪಿಸುವುದು. ಜೊತೆಗೆ ಪ್ರಶ್ನೆಗಳನ್ನು ಎತ್ತುವ ಶೈಲಿ. ಇಂಥ ಲೇಖನಗಳೆ ‘ಮೀಡಿಯಾ ಡೈರಿ’ ಹೆಸರಿನಲ್ಲಿ ಸಂಕಲನವಾಗಿವೆ. ಮುಖ್ಯವಾಗಿ ಇದು ನಾಳೆ  ಪುಸ್ತಕವಾಗಿ ಬರಬೇಕೆಂಬ ಯಾವುದೇ ಐಡಿಯಾ ಇಟ್ಟುಕೊಂಡು ಬರೆದ ಲೇಖನಗಳ ಸಂಗ್ರಹವಲ್ಲ !

ಕೆಲಸ ಮಾಡಿದ ಕಡೆ ಮನಸಿಗೆ ಬಲವಾಗಿ ತಟ್ಟಿದ ವಿಷಯಗಳೇ ಇಲ್ಲಿ ಮೂಡಿವೆ. ‘ನಾನು ದಿಲ್ಲಿಗೆ ಬಂದೆ’ ಅಧ್ಯಾಯದಲ್ಲಿ ಅಲ್ಲಿನ ಪ್ರಮುಖ ಪರಂಪಾರಿಕ ಕಟ್ಟಡಗಳನ್ನು ಕಟ್ಟಿದವರಾರು ಎಂಬ ಮಾಹಿತಿ ಓದಗಿಸುತ್ತಾರೆ. ಬೇರೆ ಬೇರೆ ಸಂಗತಿಗಳಿಗೆ ಸಂಬಂಧಿಸಿದಂತೆ  ಇಂಥ ಮಾಹಿತಿ ನೀಡುವಿಕೆ ಮುಂದುವರಿಯುತ್ತಲೇ ಸಾಗುತ್ತದೆ. ಆದರಿದು ಕೇವಲ ‘ಟಚ್ ಅಂಡ್ ಗೋ’ ಮಾದರಿಯದಲ್ಲ. ವಿದ್ಯಮಾನದ ಆಳಕ್ಕೆ ಸಾಧ್ಯವಾದಷ್ಟು ಇಳಿದು ಕಟ್ಟಿಕೊಡುವ ಮಾಹಿತಿ. ‘ಡಾನ್ ಆಫ್ ಪಾವರ್ಟಿ’  ‘ ಥ್ರೀ ಸೆವೆಂಟಿ ಸೆವೆನ್’  ‘ರಿಯಾಕ್ಷನ್ ಫಾರ್ ರಿಯಾಕ್ಷನ್ ಜರ್ನಲಿಸಂ’  ‘ಲೆವೆಲ್ ಪ್ಲೇಯಿಂಗ್ ಫೀಲ್ಡ್ ಎಲ್ಲಿ’  ‘ಗುರಾಣಿ ಪತ್ರಕರ್ತೆ’  ‘ಗಣಿ ರೆಡ್ಡಿಗಳ ಮುಂದೆ ಹೈ ಕಮಾಂಡ್ ನಂಗಾ ನಾಚ್’  ‘ಸ್ವಯಂ ಸೇವಕ ಪತ್ರಕರ್ತರು’ ಮತ್ತು ‘ಗೋಲಿ ಹೊಡೆವ ಹುಡುಗ’ ಇವೆಲ್ಲ ತಳಸ್ಪರ್ಶಿ ನೋಟವಿರುವ ಅಧ್ಯಾಯಗಳು.

ಸಲಿಂಗಿಗಾಮಿಗಳ ಬಗ್ಗೆ ಭಾರತೀಯ ಸಮಾಜಕ್ಕೆ ಜಿಗುಪ್ಸೆಯ ದೃಷ್ಟಿಕೋನ. ಇಂಥ ಸಂದರ್ಭದಲ್ಲಿ ದೆಹಲಿಯ ಕೋರ್ಟ್ ಕೊಟ್ಟ ತೀರ್ಪು ಸಂಚಲನವನ್ನೇ ಉಂಟು ಮಾಡಿತು. ಅದರ ಚಲನೆಯಿನ್ನೂ ನಿಂತಿಲ್ಲ. ಈ ತೀರ್ಪನ ಬಗ್ಗೆ ಒಂದು ಎ.ವಿ. ಅಥವಾ ಎ.ಬಿ. ಕೊಟ್ಟು ಕೈ ತೊಳೆದುಕೊಳ್ಳುವ ಜಾಯಮಾನಕ್ಕೆ ಹೋಗದೆ ಘಟನೆಯ ಹಿಂದಿನ ವಿದ್ಯಮಾನ-ಹೋರಾಟಗಳ ಬೆನ್ನು ಹತ್ತುತ್ತಾರೆ. ಈ ಸಂದರ್ಭದಲ್ಲಿ ನೀಡುವ ವಿವರಗಳು ಮನ ಕಲಕುತ್ತವೆ. ಭಾರತೀಯ ದಂಡ ಸಂಹಿತೆಯ ಕಲಂ 377 ಏನೆಲ್ಲ ಮಾಡಬಲ್ಲದಾಗಿತ್ತು. ಇದರ ವಿರುದ್ಧ ಏಕಾಗಿ ಕಾನೂನಾತ್ಮಕ ಹೋರಾಟ ನಡೆಯಿತು ಎಂಬ ವಿವರಗಳನ್ನು ಕಟ್ಟಿಕೊಡುತ್ತಾರೆ.

ರಾಜಕೀಯದ ಆಯಸ್ಕಾಂತೀಯ ಶಕ್ತಿ ಕೇಂದ್ರ ಆಕಸ್ಮಿಕವಾಗಿ ಯಾರನ್ನೂ ಎಳೆದುಕೊಂಡು ಅವರ ಸುತ್ತ ಪ್ರಭಾ ವಲಯ ನಿರ್ಮಿಸಬಲ್ಲದು. ಇಂಥ ಘಟನೆ ಬಗ್ಗೆ ‘ಸಿಂಗ್ ಈಸ್ ಕಿಂಗ್’ ಅಧ್ಯಾಯದಲ್ಲಿ ವಿವರಗಳನ್ನು ನೀಡುತ್ತಾರೆ. ದಕ್ಷಿಣ ಭಾರತದ ರಾಜಕಾರಣಿಗಳ ಬಗ್ಗೆ ಉತ್ತರದ ಮುಖ್ಯವಾಗಿ ದೆಹಲಿಯ ಪತ್ರಕರ್ತರಿಗೆ ಇರುವ ಪೂರ್ವಾಗ್ರಹಪೀಡಿತ ಭಾವನೆಗಳ ಬಗ್ಗೆ ತಿಳಿಸುತ್ತಾರೆ. ರಾಜಕಾರಣಿ ಮೆದುವಾಗಿ ಕಂಡರೆ ಆತನನ್ನು ಅವರು ಹೇಗೆ ಅಟ್ಯಾಕ್ ಮಾಡುತ್ತಾರೆ. ದೇವೇಗೌಡರಂಥವರು ಇದಕ್ಕೆ ಹೇಗೆ ತಿರುಗೇಟು ನೀಡುತ್ತಾರೆ ಎಂಬುದನ್ನೆಲ್ಲ ದಾಖಲಿಸುತ್ತಾರೆ. ದಲಿತ ರಾಜಕಾರಣಿಗಳ ಬಗ್ಗೆ ದೆಹಲಿಯ ರಾಜಕೀಯ ವಲಯದಲ್ಲಿ ಇರುವ ನೋಟವನ್ನು ‘ಅಕ್ಕ ಮಾಯಾವತಿಯ ಬೆವರಿನ ವಾಸನೆ’ ಅಧ್ಯಾಯದಲ್ಲಿ ಬಹಳ ಸೂಕ್ಷ್ಮವಾಗಿ ಮಾಹಿತಿ ನೀಡುತ್ತಾ ಮೂತಿ ತಿರುವಿದವರು ಮರೆಯಾಗಿ ಹೋದ ಸಂಗತಿ ತಿಳಿಸುತ್ತಾರೆ. ನಮ್ಮ ನಡುವೆ ಇದ್ದು ಕೂಡ ಹೆಚ್ಚಿನ ಜನಕ್ಕೆ ಅಪರಿಚಿತವಾಗಿಯೆ ಉಳಿದ ರಾಜಕಾರಣಿಗಳ ಸಕಾರಾತ್ಮಕ ಅಂಶಗಳು ಕೂಡ ಅರಿವಾಗುತ್ತವೆ.

ಓದುತ್ತಾ ಹೋದಂತೆಲ್ಲ ತಿಳಿ ನಗೆ ಮೂಡಿಸುವ ಬರಹದ ಮಾದರಿಗಳು ಇಲ್ಲಿವೆ. ‘ಟ್ರೆಂಡ್ ಏನಿದೆ ಗೌಡ್ರೆ’  ‘ಪತ್ರಕರ್ತರನ್ನ ಬೆಳಿಸ್ತಾ ಇದ್ದೀನಿ, ಅದಕ್ಕಂತ ಸಪ್ರೇಟ್ ಬಜೆಟ್ ಇಕ್ಕಿದ್ದೀನಿ’ ಎಂಬ ಅಧ್ಯಾಯಗಳನ್ನು ಓದಲು ತೊಡಗಿದಂತೆ ಗಂಭೀರವಾದ ಬರಹಗಳ ದೆಶೆಯಿಂದ ಬಿಗಿದುಕೊಂಡಿದ್ದ ಮುಖದ ಸ್ನಾಯುಗಳು ಸಡಿಲವಾಗುವಂತೆ ನಗೆ ಮೂಡುತ್ತದೆ. ಇದನ್ನು ಓದಿಯೇ ಸವಿಯಬೇಕು. ರಾಜ್ಯದಲ್ಲಿ ಎಂಥೆಂಥ  ರಾಜಕಾರಣಿಗಳು ನಮ್ಮನ್ನು ಆಳುತ್ತಿದ್ದಾರೆ ಎನ್ನುವುದು ತಿಳಿಯುತ್ತದೆ !

ಗಂಭೀರವಾದ ಪ್ರಶ್ನೆಗಳನ್ನ ಎತ್ತುವ ಬರಹಗಳೂ ಇವೆ. ‘ಉಳ್ಳವರು ಆಗುವರೆನಯ್ಯಾ’ ಅಧ್ಯಾಯದಲ್ಲಿ ಪತ್ರಕರ್ತರ ವೃತ್ತಿ ಅವಲಂಬಿಸುವವರ್ಯಾರು, ಮಿಕ್ಕವರೇಕೆ ಇಲ್ಲಿಗೆ ಬರುವುದಿಲ್ಲ ಎಂಬುದನ್ನು ಚರ್ಚಿಸಲಾಗಿದೆ. ‘ ಮಲ್ಯನ ಆತ್ಮಕ್ಕೆ ಶಾಂತಿ ಸಿಗಲಿ’ ! ಅಧ್ಯಾಯದಲ್ಲಿ ರೈತರಿಗೆ ಸಂಬಂಧಿಸಿದ ವಿಚಾರಗಳನ್ನೆತ್ತುತ್ತಾರೆ. ಪ್ರಸ್ತುತ ಭಾರತೀಯ ಪತ್ರಿಕೋದ್ಯಮ ಅದರಲ್ಲಿಯೂ ಮುಖ್ಯವಾಗಿ ಟಿವಿ ಪತ್ರಿಕೋದ್ಯಮ ಯಾವ ಹಂತದಲ್ಲಿ ನಿಂತಿದೆ. ‘ಜನರಿಗೆ ಬೇಕಾದನ್ನು ಕೊಡುತ್ತೇವೆ’ ಎನ್ನುವುದರಲ್ಲಿ ಎಂಥ ಅಪಾಯ ಅಡಗಿದೆ ಎಂಬುದನ್ನು ಸೂಕ್ಷ್ಮವಾಗಿ ವಿವೇಚಿಸಲಾಗಿದೆ

ಈ ಕೃತಿಯಲ್ಲಿ ಲೇಖಕ ಆಡುವ ಮಾತೊಂದು ಹೀಗಿದೆ. ‘ I am journalist. Because I Enjoy more Democracy within Democrasy ‘ ಎನ್ನುವುದು ಪತ್ರಕರ್ತ ಹುದ್ದೆ ವ್ಯಕ್ತಿತ್ವವನ್ನೇ ವರ್ಣಿಸುತ್ತದೆ ಅಲ್ಲವೆ...

No comments:

Post a Comment