ತೇಜಸ್ವಿ; ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ವಿಶಿಷ್ಟ ಕೃತಿಗಳನ್ನು ನೀಡುವುದರ ಮೂಲಕ ಓದುಗರ ಮನೋಭಿತ್ತಿಯಲ್ಲಿ
ಎಂದಿಗೂ "ಪೂರ್ಣಚಂದ್ರ" 'ಸಾಹಿತ್ಯದಿಂದ ಕ್ರಾಂತಿ ಮಾಡೋಕೆ ಆಗುತ್ತೇನ್ರೀ' ಎಂದು ರಾಗ ಎಳೆಯುವವರಿಗೆ
ಸಾಹಿತ್ಯದಿಂದಲೂ ಪರಿಸರ ಅರಿವು - ಜಾಗೃತಿ - ಕಾಳಜಿ ಮೂಡಿಸಲು ಸಾಧ್ಯ ಎಂದು ತೋರಿಸಿದವರು. ಕರ್ವಾಲೋ ಕೃತಿ ಮೂಲಕ ಅಪಾರ
ಸಂಖ್ಯೆಯ ವಿದ್ಯಾರ್ಥಿಗಳ ಮನದೊಳಗೆ ಹೊಕ್ಕವರು.
ಕರ್ವಾಲೋ ಸದ್ದಿಲ್ಲದೆ
ಮಾಡಿದ ಪರಿಸರ ಕ್ರಾಂತಿ ಅಪಾರ. ವಿದ್ಯಾರ್ಥಿಗಳಲ್ಲದೆ ಎಲ್ಲ ವಯೋಮಾನದ ಓದುಗರಿಗೂ ಇಷ್ಟವಾದ ಕೃತಿ.
ಜೀವವಿಜ್ಞಾನವನ್ನು ಸಾಹಿತ್ಯದ ಪರಿಭಾಷೆಯ ಮೂಲಕ ಸ್ವಾರಸ್ಯಕರವಾಗಿ ದಾಟಿಸಬಹುದು ಎನ್ನುವುದನ್ನು ತೋರಿದವರು.
ಮಿಲೇನಿಯಂ ಸರಣಿಯ ಇವರ ಅನುವಾದಿತ ಕೃತಿಗಳೂ ಕನ್ನಡದ ನೆಲೆಯಲ್ಲಿ ಪರಿಸರ ಜ್ಞಾನದ ಎಲ್ಲೆಯನ್ನು ವಿಸ್ತರಿಸಿಕೊಳ್ಳಲು ಕಾರಣವಾಗಿವೆ. ಮೂಡಿಗೆರೆಯಂಥ ಪುಟ್ಟ ಊರಿನಲ್ಲಿ ಕುಳಿತು ಜಗತ್ತಿನ ವಿದ್ಯಮಾನಗಳೆಲ್ಲವನ್ನೂ ಎಚ್ಚರದಿಂದಲೇ ನಿರೂಕಿಸುತ್ತಲೇ ಮಹತ್ವ ಎನಿಸಿದ ಸಂಗತಿಗಳನ್ನು ಕನ್ನಡದ ಓದುಗರಿಗೆ ದಾಟಿಸುವಲ್ಲಿ ಶ್ರಮ ವಹಿಸುತ್ತಿದ್ದರು.
"ಅಬಚೂರಿನ ಪೋಸ್ಟಾಫೀಸು",
"ಹುಲಿಯೂರಿನ ಸರಹದ್ದು","ಕಿರಗೂರಿನ ಗಯ್ಯಾಳಿಗಳು".
"ಚಿದಂಬರ ರಹಸ್ಯ", "ಜುಗಾರಿ ಕ್ರಾಸ್",
"ಮಾಯಾಲೋಕ-೧" ಹೀಗೆ ಒಂದಕ್ಕಿಂತ ಒಂದು ಭಿನ್ನವಾದ ಕೃತಿಗಳನ್ನು ನೀಡಿದ್ದಾರೆ. ''ತಬರನ ಕಥೆ' ಮೂಲಕ
ಸರ್ಕಾರಿ ಕೆಂಪುಪಟ್ಟಿಯಲ್ಲಿ ಅದೆಷ್ಟು ಜನ ಒದ್ದಾಡುತ್ತಿದ್ದಾರೆ ಎಂದು ಹೇಳಿದ ತೇಜಸ್ವಿ, 'ಕುಬಿ
ಮತ್ತು ಇಯಾಲ'ದ ಮೂಲಕ ಮೌಢ್ಯ ಉಂಟು ಮಾಡುವ ತಲ್ಲಣಗಳ ಬಗ್ಗೆಯೂ ಎಚ್ಚರ ಮೂಡಿಸಿದ್ದಾರೆ.
ಇಂಥ
ತೇಜಸ್ವಿ ಜೊತೆ ಸಂವಾದಿಸುವ ಕ್ಷಣಗಳನ್ನ ನಾನು ಎಂದೂ ಕಳೆದುಕೊಂಡಿಲ್ಲ. ಮೈಸೂರಿನ ಮಹಾರಾಜ ಕಾಲೇಜು
ವಿದ್ಯಾರ್ಥಿಯಾದ ಕಾರಣ ತೇಜಸ್ವಿ ಅವರನ್ನು ಆಗಾಗ್ಗೆ ಕಾಣುವ ಅವಕಾಶ ಒದಗುತ್ತಿತ್ತು. ಶತಮಾನೋತ್ಸವ ಭವನದ
ನೆಬೆ (ನೆಳಲು-ಬೆಳಕು) ಕಟ್ಟೆಯಲ್ಲಿ ಕುಳಿತು ತೇಜಸ್ವಿ-ಲಂಕೇಶ್ ಕೃತಿಗಳನ್ನು ಓದಿದ್ದಿದೆ.
ಕಾಲೇಜಿನಲ್ಲಿ
ಕನ್ನಡ ಮೇಷ್ಟ್ರಾಗಿದ್ದ ರಾಮದಾಸ್ ಮತ್ತು ತೇಜಸ್ವಿ ಗೆಳೆತನದ ಬಗ್ಗೆ ಎಲ್ಲರಿಗೂ ತಿಳಿದಿದೆ. ಓದಿನ
ಜೊತೆಗ ಪ್ರಗತಿಪರ ಚಟುವಟಕೆಗಳು, ಕಾಲೇಜು ರಂಗಭೂಮಿಯಲ್ಲಿ ಸಕ್ರಿಯವಾಗಿದ್ದ ಕಾರಣ ರಾಮದಾಸ್ ಅವರ
ವಿಶ್ವಾಸವೂ ಲಭ್ಯವಾಗಿತ್ತು. ಇವರನ್ನು ಭೇಟಿ ಮಾಡಲು ತೇಜಸ್ವಿ ಬಂದಿದ್ದಾರೆಂಬ ಸುದ್ದಿ ಕಿವಿಗೆ
ಬಿದ್ದೊಡನೆ ಗೆಳೆಯರ ಗುಂಪು ಚುರುಕಾಗಿ ಅತ್ತ ಓಡುತ್ತಿದ್ದೆವು. ನಾನು ಮೈಸೂರಿನಲ್ಲಿ ಇದ್ದಷ್ಟು
ದಿನವೂ ತೇಜಸ್ವಿ ಅಪರೂಪಕ್ಕೆ ಭಾಗವಹಿಸುತ್ತಿದ್ದ ಯಾವುದೇ ಸಭೆ-ಸಮಾರಂಭಗಳನ್ನು
ತಪ್ಪಿಸಿಕೊಂಡಿರಲಿಲ್ಲ.
ಮಹಾರಾಜ
ಕಾಲೇಜಿನ ಶತಮಾನೋತ್ಸವ ಭವನದಲ್ಲಿ "ಲಂಕೇಶ್-60" ಅಭಿನಂದನಾ ಕಾರ್ಯಕ್ರಮ ಏರ್ಪಾಡಾಗಿತ್ತು. ಅದ್ಬುತವಾಗಿ
ನಡೆದ ಕಾರ್ಯಕ್ರಮ. ಬಿಡುವಿನ ಮಧ್ಯೆ ನೆಚ್ಚಿನ ಸಾಹಿತಿಗಳೊಂದಿಗೆ ಚರ್ಚಿಸುವ ಅವಕಾಶ. ಭವನದ
ಹೊರಗೆ ತೇಜಸ್ವಿ ಬಂದ ಕೂಡಲೇ ಅಭಿಮಾನಿಗಳ ಮುತ್ತಿಗೆ. ಮಾತು-ಕಥೆ. ಓದುಗರ ಪ್ರಶ್ನೆಗಳಿಗೆ
ಬೇಸರಿಸದೆ ಉತ್ತರಿಸುವ ಸೌಜನ್ಯ. ಆಗ ತೇಜಸ್ವಿ, ಜೀಪಿನಲ್ಲಿ ಬಂದಿದ್ದ ನೆನಪು. ಆ ಜೀಪು ಕೂಡ
ದೊಡ್ಡ ಆಕರ್ಷಣೆ.
ಹೀಗೆಂಥ
ಹಬ್ಬಾನ್ರಿ
ಬೆಂಗಳೂರಿನಲ್ಲಿ
ಅರ್ಕಾವತಿ-ಕುಮುದ್ವತಿ ನದಿಗಳ ಪುನಶ್ಚೇತನ ಹೋರಾಟ ಸಮಿತಿ 2005ರಲ್ಲಿ "ಮುಂಗಾರು ಮಳೆ ಹಬ್ಬ" ಮಾಡಬೇಕೆಂದು ಯೋಜಿಸಿತು. ಸಮಿತಿ ಸಂಚಾಲಕ ಹೆಚ್.ಆರ್. ಜಯರಾಮ್ (ಗ್ರೀನ್ ಫಾಥ್, ಬೆಂಗಳೂರು) ಮತ್ತು ಸದಸ್ಯರು ಉತ್ಸವವನ್ನು
ಅರ್ಥಪೂರ್ಣವಾಗಿ ಮಾಡಬೇಕೆಂದು ನಿರ್ಧರಿಸಿದ್ದರು. ಈ ಸಂದರ್ಭದಲ್ಲಿ "ಕುಮುದ್ವತಿ ಪತ್ರಿಕೆ" ವಿಶೇಷ
ಸಂಚಿಕೆ ರೂಪಿಸುವ ಹೊಣೆ ನನ್ನ ಹೆಗಲಿಗೆ ಬಿತ್ತು. ಸಂಚಿಕೆಯನ್ನು ತೇಜಸ್ವಿ ಅವರಿಂದಲೆ ಲೋಕಾರ್ಪಣೆ
ಮಾಡಿಸೋಣ ಎನ್ನುವ ನನ್ನ ಪ್ರಸ್ತಾಪಕ್ಕೆ ಸಮಿತಿ ಸಂತೋಷದಿಂದ ಒಪ್ಪಿಗೆ ಸೂಚಿಸಿತ್ತು.
ಬೆಳಗ್ಗೆ
ಕರೆ ಮಾಡಿದರೆ ತೋಟ-ಸುತ್ತಾಟದಲ್ಲಿ ಇರುತ್ತಾರೆ; ಸಂಜೆ ಕರೆ ಮಾಡೋಣ ಎಂದು ನಿರ್ಧರಿಸಿ
ಮೂಡಿಗೆರೆಗೆ ಪೋನಾಯಿಸಿದೆ. ಪೋನ್ ಎತ್ತಿಕೊಂಡ ತೇಜಸ್ವಿ ಸಮಾರಂಭದ ಎಲ್ಲ ವಿವರಗಳನ್ನು ಕೇಳಿದರು.
ನಂತರ 'ಮಳೆಗಾಲವೇ (ಅಕ್ಟೋಬರ್ ನಲ್ಲಿ ಸಮಾರಂಭ ಯೋಜಿತವಾಗಿತ್ತು) ಮುಗಿದು ಹೋಗ್ತಾ ಇದೆ. ಹೀಗೆಂಥ
ಮಳೆಹಬ್ಬಾನೋ ಮಾರಾಯ' ಎಂದು ತಮ್ಮದೆ ಧಾಟಿಯಲ್ಲಿ ಹಾಸ್ಯ ಮಾಡಿ, 'ಒಳ್ಳೆ ಕೆಲ್ಸ ಮಾಡ್ತಿದ್ದೀರಿ, ಮಾಡಿ. ಬೆಂಗಳೂರಿನ ಹೆಚ್ಚಿನ ಜನ ಮಳೆಗೂ-ಬೆಳೆಗೂ ನಮಗೂ ಸಂಬಂಧವೇ ಇಲ್ಲ ಅಂತ ಸುಮ್ನವ್ರೆ. ಅವರಿಗೂ
ಅರಿವು ಮೂಡಿಸುವಂತಾದರೆ ಇಂಥ ಶ್ರಮ ಎಲ್ಲ ಸಾರ್ಥಕ' ಎಂದರು. ಸಮಾರಂಭಕ್ಕೆ ನೀವು ಬರಲೇಬೇಕು ಎಂದು
ಒತ್ತಾಯಿಸಿದಾಗ 'ಈ ಟೈಮ್ ನಲ್ಲಿ ಮೂಡಿಗೆರೆಯಿಂದ ಎಲ್ಲಿಯೂ ಬರಲಿಕ್ಕೆ ಆಗೋಲ್ಲ ಮಾರಾಯ. ಹಬ್ಬ
ಚೆನ್ನಾಗಿ ಮಾಡಿ' ಎನ್ನುತ್ತಾ ಪೋನ್ ಇಟ್ಟರು.
ತೇಜಸ್ವಿ
ಆಶಯ-ಆಶೀರ್ವಾದದಂತೆ ಮಳೆಹಬ್ಬ ಚೆನ್ನಾಗಿ ಆಯಿತು. ಈ ನಂತರ ಗೆಳೆಯರಾದ ಪ್ರಕಾಶ್ ನಾಯ್ದು,
ಪುಟ್ಟಸ್ವಾಮಿ, ಸಮಿತಿಯ ಕರುಣಾಕರ ಮತ್ತು ನಾನು ಚಾರ್ಮಾಡಿ ಘಾಟಿಯಲ್ಲಿ ಚಾರಣ ಮಾಡುವುದೆಂದು
ನಿರ್ಧರಿಸಿ ಅಕ್ಟೋಬರ್ ತಿಂಗಳಿನಲ್ಲಿ ಹೊರಟೆವು. ಸಂಜೆ ತಡವಾಗಿ ಹೊರಟ ಕಾರಣ ಬೇಲೂರಿನಲ್ಲಿ
ರಾತ್ರಿ ಉಳಿದೆವು. ಮುಂಜಾನೆ ಬಸ್ ಹಿಡಿದು ಕೊಟ್ಟಿಗೆಹಾರ ತಲುಪಿದೆವು. ಇಲ್ಲಿಂದ ಘಾಟಿಯ
ಹಾದಿ ಆರಂಭ.
ಚುಮುಚುಮು
ಬೆಳಕು. ಚಳಿ. ಇಬ್ಬನಿ. ಕೊಟ್ಟಿಗೆಹಾರದಲ್ಲಿ ಕಾಫಿ ಕುಡಿದು ನಮ್ಮ ನಡಿಗೆ ಆರಂಭ. ಇಲ್ಲಿದ ಘಾಟಿ ತಳದಲ್ಲಿರುವ ಚಾರ್ಮಾಡಿ ಎಂಬ ಪುಟ್ಟ ಗ್ರಾಮಕ್ಕೆ 27 ಕಿಲೋಮೀಟರ್ ದೂರ. ದಾರಿಯುದ್ದಕ್ಕೂ ಕಂಡ ಮರಗಳ ವಿಶಿಷ್ಟತೆ ಬಗ್ಗೆ ವರ್ಣನೆ. ಉದ್ದಕ್ಕೂ ಬೆಟ್ಟಗಳಿಂದ ಧುಮ್ಮಿಕ್ಕುವ ಜಲಧಾರೆ. ಈ ನೀರಿನ ಸವಿಯನ್ನು ಕುಡಿದೇ ಅನುಭವಿಸಬೇಕು. ಕಾಡಿನ
ನಡುವೆ, ಗಿಡಮೂಲಿಕೆಗಳ ಮೇಲೆ ಹರಿದು ಬರುವ ನೀರಿಗೆ ನಮ್ಮ ಆಯಾಸ ಪರಿಹರಿಸಿ, ಮತ್ತಷ್ಟು
ಉಲ್ಲಾಸ-ಹುಮ್ಮಸ್ಸು ಮೂಡಿಸುವ ಶಕ್ತಿ ಇದೆ.
ಘಾಟಿ
ಹಾದಿಯಲ್ಲಿ 7 ಕಿಲೋಮೀಟರ್ ಕ್ರಮಿಸುತ್ತಿದ್ದಂತೆ ಪುಟ್ಟಸ್ವಾಮಿ ಮತ್ತು ನಾಯ್ದು ಸ್ವಲ್ಪ
ಕಾಲು ನೋಯುತ್ತಿದೆ ಎಂದು ಕುಳಿತವರು ಬೇಗನೆ ಎದ್ದೇಳಲಿಲ್ಲ. ಮಿನಿ ಲಾರಿಯೊಂದಕ್ಕೆ ಕೈ ಅಡ್ಡ ಹಾಕಿ
ನಿಲ್ಲಿಸಿ 'ಉಜಿರೆಯಲ್ಲಿ ಭೇಟಿಯಾಗೋಣ' ಎಂದು ಹೇಳಿ ಹೊರಟ ಅವರನ್ನು ಬೀಳ್ಕೊಟ್ಟು ಕರುಣಾಕರ ಮತ್ತು ನಾನು ನಡಿಗೆ
ಮುಂದುವರಿಸಿದೆವು.
ಘಾಟಿ
ಹಾದಿಕ್ಕೂ ನಮ್ಮನ್ನು ನೇವರಿಸಿಕೊಂಡು ಹೋಗುವ ಗಾಳಿ, ಆಗಾಗ ಬಂದು ಹೋಗುವ ತುಂತುರು ಮಳೆಯಲ್ಲಿ ಹಾದಿ
ಕ್ರಮಿಸುವುದು ತಿಳಿಯಲಿಲ್ಲ. ಬೆಳ್ತಂಗಡಿ ರೇಂಜ್ ಶುರುವಾದ ನಂತರ ವಾತಾವರಣದಲ್ಲಿ ಮಾರ್ಪಾಡು. ಚಳಿ
ಮಾಯವಾಗಿ ಸೆಕೆ ಶುರು. ಆಗಾಗ್ಗೆ ಸುಳಿಯುವ ತುಂತುರು ಮಳೆ ನಡುವೆಯೂ ಸೆಕೆ !
ಅಲ್ಲಲ್ಲಿ
ನಿಂತು, ಕುಳಿತು ಪೋಟೋ ತೆಗೆಯುತ್ತಾ ಚಾರ್ಮಾಡಿ ತಲುಪಿದಾಗ ಮುಸ್ಸಂಜೆ. ಅಲ್ಲಿಯ ಹೋಟೆಲ್ನಲ್ಲಿ ಬಿಸಿಬಿಸಿ ಚಪಾತಿ ಮತ್ತು ಮೀನಿನ ಊಟ ಬಾರಿಸಿದೆವು. ಬಸ್ಸು ಹಿಡಿದು ಉಜಿರೆ
ತಲುಪಿದೆವು. ಹೋಟೆಲ್ ರೂಮಿನಲ್ಲಿ ಅಡ್ಡಾಗುವ ಮುನ್ನ ತೇಜಸ್ವಿ ಅವರಿಗೆ ಪೋನಾಯಿಸಿದೆ.
ವೃತ್ತಾಂತವನ್ನೆಲ್ಲ ಹೇಳಿ 'ವಾಪ್ಪಸ್ಸು ಹೋಗುವ ದಾರಿಯಲ್ಲಿ ನಿಮ್ಮನ್ನು ಭೇಟಿಯಾಗುತ್ತೇವೆ' ಎಂದೆ. 'ಬೇಡ ಅಂದ್ರೆ ನೀವೆಲ್ಲ ಎಲ್ಲಿ ಕೇಳ್ತೀರಾ, ಬೆಳಿಗ್ಗೆ ಬನ್ನಿ' ಎಂದರು.
ವಕೀಲ ಕರುಣಾಕರ
ಅವರಿಗೂ ತೇಜಸ್ವಿ ನೋಡುವ, ಮಾತನಾಡುವ ಹಂಬಲ. ಬೆಳಕು ಹರಿದಿದ್ದೆ ತಡ ಸಿದ್ಧವಾಗಿ ಸಿಕ್ಕ ಬಸ್ಸು
ಏರಿದೆವು. ಘಾಟಿಯ ಏರುಹಾದಿ. ಚಾಲಕ ಬಯಲುಸೀಮೆಯವನು. ಘಾಟಿ ಹಾದಿ ಚಾಲನೆಗೆ ಹೊಸಬ ಎಂದು ಅವನ ಡ್ರೈವಿಂಗ್ ಸ್ಟೈಲ್ನಿಂದ ಗೊತ್ತಾಗುತ್ತಿತ್ತು. ಹೇರ್ ಪಿನ್ ತಿರುವಿನಲ್ಲಿ ಸರಿಯಾಗಿ ತಿರುಗಿಸಲಾಗದೆ ಉದ್ದನೆ ಬಾಡಿಯ ಬಸ್ಸು
ಹಿಂದೆ ಸರಿಯುತ್ತಿತ್ತು. ಹಿಂದೆ ನುಂಗಲು ಸಿದ್ಧವಿದಂತೆ ಕಾಣುವ ಪ್ರಪಾತ. ನೋಡಿದರೆ ಜೀವ ದಢಕ್.
ನಿರ್ವಾಹಕ ತಕ್ಷಣ ಇಳಿದು ಚಕ್ರಕ್ಕೆ ಕಲ್ಲು ಅಡ್ಡಕೊಟ್ಟ. ಮತ್ತೆಮತ್ತೆ ಇದೇ ಪುನರಾವರ್ತನೆ.
ಪ್ರಯಾಣಿಕರಲ್ಲಿ ಆತಂಕ ಹೆಚ್ಚಾಯಿತು. ಒಬ್ಬರಂತೂ ಎದ್ದುನಿಂತು ‘ನೀನು ಬಸ್ ಓಡಿಸ್ಬೇಡ ನಿಲ್ಸು.
ನಮ್ಗೆಲ್ಲ ಗತಿ ಕಾಣಿಸ್ತಿಯಾ’ ಎಂದು ಜಗಳಕ್ಕೆ ನಿಂತರು.
ನನಗೂ ಭಾರಿ
ಪುಕ್ಕಲಾಗಿತ್ತು. ಆದರೂ ತೋರಿಸಿಕೊಳ್ಳದೆ ಗಲಾಟೆ ಮಾಡುತ್ತಿದ್ದ ಹಿರಿಯರಿಗೆ ಸಮಾಧಾನ ಹೇಳಿ,
ಚಾಲಕರಿಗೆ ನಿಧಾನವಾಗಿ ಹೋಗುವಂತೆ ತಿಳಿಸಿ ಢವಗುಟ್ಟುತ್ತಿದ್ದ ಎದೆ ಮೇಲೆ ಕೈ ಇಟ್ಟು ಮುಂದೆಯೇ
ಕುಳಿತೆ ! ಅಂತೂ ಬಸ್ಸು ಘಾಟಿ ಹಾದಿ ದಾಟಿದ ನಂತರ ಎಲ್ಲರಿಗೂ ಸಮಾಧಾನ.
ಮೂಡಿಗೆರೆ
ಹ್ಯಾಂಡ್ ಪೋಸ್ಟ್ನಲ್ಲಿ ಇಳಿದು ತೇಜಸ್ವಿ ಮನೆಯತ್ತ ಹೋದೆವು. ‘ನಿರುತ್ತರ’ ದ ಗೇಟು ತೆಗೆಯುವಾಗ
ಮಾರುತಿ ಓಮ್ನಿಯಲ್ಲಿ ತೇಜಸ್ವಿ ಆತ್ಮೀಯರಾದ ಜನ್ನಾಪುರ ರಾಘವೇಂದ್ರ ಬಂದರು. ಪರಸ್ಪರ ಪರಿಚಿತರಾದೆವು. ನಾವು
ಎಷ್ಟು ಬೇಗ ಆತ್ಮೀಯರಾದೆವು ಎಂದರೆ ಆಶ್ವರ್ಯವಾಗುತ್ತದೆ. ರಾಘು ಅವರ ಸ್ನೇಹ-ವಿಶ್ವಾಸ ಇಂದಿಗೂ
ಇದೆ. ಚಾರಣಗಳಲ್ಲಿ ಮತ್ತೆಮತ್ತೆ ಭೇಟಿಯಾಗುತ್ತಿರುತ್ತೇವೆ.
ತೇಜಸ್ವಿ
ವರಾಂಡದಲ್ಲಿ ನಿಂತಿದ್ದರು. ನಮಸ್ಕರಿಸಿದೆವು. ಒಳಗೆ ಕರೆದುಕೊಂಡು ಹೋದರು. ಬಿದಿರಿನ ಆರಾಮ
ಕುರ್ಚಿಯಲ್ಲಿ ಕುಳಿತ ನಂತರ ಮುಂಗಾರು ಹಬ್ಬ ನಡೆದ ಬಗ್ಗೆ ತಿಳಿಸಿದೆವು. ಮಳೆ ಹುಯ್ಯವ ಪ್ರಮಾಣ
ಕಡಿಮೆಯಾಗದಿದ್ದರೂ ಹಂಚಿಕೆ ಅನಿರ್ದಿಷ್ಟವಾಗುತ್ತಾ ಹೋಗುತ್ತಿರುವುದರ ಬಗ್ಗೆ ಮಾತನಾಡಿದರು.ಚಾರಣದ
ಬಗ್ಗೆ ಹೇಳಿದ ನಂತರ 'ಸೋಮನಕಾಡಿಗೆ ಹೋಗಿದ್ರಾ' ಎಂದರು. 'ಇಲ್ಲ' ಎಂದು ಉತ್ತರಿಸಿದಾಗ 'ಮತ್ತೆ
ಸಾಧ್ಯವಾದರೆ ಹೋಗಿ ಬನ್ನಿ 'ಎಂದ ತೇಜಸ್ವಿ ಒಮ್ಮೆ ಜೋರಾಗಿ ನಿಟ್ಟುಸಿರು ಬಿಟ್ಟು 'ಮೊದಲಿನಂತೆ ಈಗ ಚಾರ್ಮಾಡಿ
ಕಾಡು ಉಳಿದಿಲ್ಲ. ಕೇರಳ ಮೂಲದವರು ಅಲ್ಲಿ ಕಾಡು ಸವರಿ
ತೋಟಗಳನ್ನು ಮಾಡಿದ್ದಾರೆ. ಕೆಲವರು ಅಕ್ರಮ ನಾಟಾ ದಂಧೆಯಲ್ಲಿಯೂ ತೊಡಗಿದ್ದಾರೆ. ಕಾಡು
ನಾಶವಾಗಿದೆ. ಇನ್ನು ಕೆಲವೇ ವರ್ಷಗಳಲ್ಲಿ ಚಾರ್ಮಾಡಿಯೂ ಬೋಳುಬೋಳಾಗುತ್ತದೆ' ಎಂದು ಹಳಹಳಿಸಿದರು.
(ಇತ್ತೀಚೆಗೆ ಸೋಮನಕಾಡಿನಲ್ಲಿ ನಾನು ಚಾರಣ ಮಾಡಿದ ಸಂದರ್ಭದ ಚಿತ್ರ. ಅಲ್ಲಿ ಕಾಡು ನಾಶವಾಗುವ ಹಾದಿಯನ್ನು ಸಾಕಷ್ಟು ಕ್ರಮಿಸಿದೆ)
ಅಷ್ಟರಲ್ಲಿ ರಾಜೇಶ್ವರಿ ಮೇಡಂ ಕಾಫಿ ತಂದರು. ಆ ದೊಡ್ಡ ಲೋಟ ನೋಡುತ್ತಿದಂತೆ ಕರುಣಾಕರ ಅವರಿಗೆ ತುಸು ಗಾಬರಿ. 'ಅಯ್ಯಯ್ಯೋ ಅಷ್ಟೊಂದು ಕಾಫಿ ಬೇಡ' ಎಂದರು. ಕೂಡಲೇ ತೇಜಸ್ವಿ 'ರೀ ಸುಮ್ನೆ ಕುಡಿರ್ರಿ… ಅಷ್ಟಷ್ಟು ದೊಡ್ಡ ಬಾಟಲಿನ ಬಿಯರ್ ಕುಡಿತೀರಿ,,, ಇಷ್ಟುದ್ದ ಲೋಟದ ಕಾಫಿ ಕುಡಿಯೋಕೆ ಅಳ್ತಿರಲ್ರಿ' ಎಂದು ಪ್ರೀತಿಯಿಂದ ಹೇಳಿದ್ದು ಇನ್ನೂ ಕಿವಿಯಲ್ಲಿ ಗುಯ್ ಗುಟ್ಟುತ್ತಿದೆ.
ಇಂದು ತೇಜಸ್ವಿ ಅವರ 78ನೇ ಹುಟ್ಟುಹಬ್ಬ. ಭೌತಿಕವಾಗಿ ಅಷ್ಟೆ ಅವರು ನಮ್ಮನ್ನು ಅಗಲಿದ್ದಾರೆ. ತಮ್ಮ ಪುಸ್ತಕಗಳ ಮೂಲಕ ಅವರು ಅಮರ. ಪುಸ್ತಕ ಹಿಡಿದೊಡನೆ ತೇಜಸ್ವಿ ನಮ್ಮೊಂದಿಗೆ ಮಾತನಾಡಲು ತೊಡಗುತ್ತಾರೆ. ಈ ಮಾತುಕಥೆಗೆ ಎಂದೂ ಕೊನೆಯಿಲ್ಲ...
ಅಲ್ಲಲ್ಲಿ ನಿಂತು, ಕುಳಿತು ಪೋಟೋ ತೆಗೆಯುತ್ತಾ ಚಾರ್ಮಾಡಿ ತಲುಪಿದಾಗ ಮುಸ್ಸಂಜೆ. ಅಲ್ಲಿಯ ಹೋಟೆಲ್ನಲ್ಲಿ ಬಿಸಿಬಿಸಿ ಚಪಾತಿ ಮತ್ತು ಮೀನಿನ ಊಟ ಬಾರಿಸಿದೆವು. ಬಸ್ಸು ಹಿಡಿದು ಉಜಿರೆ ತಲುಪಿದೆವು. ಹೋಟೆಲ್ ರೂಮಿನಲ್ಲಿ ಅಡ್ಡಾಗುವ ಮುನ್ನ ತೇಜಸ್ವಿ ಅವರಿಗೆ ಪೋನಾಯಿಸಿದೆ. ವೃತ್ತಾಂತವನ್ನೆಲ್ಲ ಹೇಳಿ 'ವಾಪ್ಪಸ್ಸು ಹೋಗುವ ದಾರಿಯಲ್ಲಿ ನಿಮ್ಮನ್ನು ಭೇಟಿಯಾಗುತ್ತೇವೆ' ಎಂದೆ. 'ಬೇಡ ಅಂದ್ರೆ ನೀವೆಲ್ಲ ಎಲ್ಲಿ ಕೇಳ್ತೀರಾ, ಬೆಳಿಗ್ಗೆ ಬನ್ನಿ' ಎಂದರು.
ಅಷ್ಟರಲ್ಲಿ ರಾಜೇಶ್ವರಿ ಮೇಡಂ ಕಾಫಿ ತಂದರು. ಆ ದೊಡ್ಡ ಲೋಟ ನೋಡುತ್ತಿದಂತೆ ಕರುಣಾಕರ ಅವರಿಗೆ ತುಸು ಗಾಬರಿ. 'ಅಯ್ಯಯ್ಯೋ ಅಷ್ಟೊಂದು ಕಾಫಿ ಬೇಡ' ಎಂದರು. ಕೂಡಲೇ ತೇಜಸ್ವಿ 'ರೀ ಸುಮ್ನೆ ಕುಡಿರ್ರಿ… ಅಷ್ಟಷ್ಟು ದೊಡ್ಡ ಬಾಟಲಿನ ಬಿಯರ್ ಕುಡಿತೀರಿ,,, ಇಷ್ಟುದ್ದ ಲೋಟದ ಕಾಫಿ ಕುಡಿಯೋಕೆ ಅಳ್ತಿರಲ್ರಿ' ಎಂದು ಪ್ರೀತಿಯಿಂದ ಹೇಳಿದ್ದು ಇನ್ನೂ ಕಿವಿಯಲ್ಲಿ ಗುಯ್ ಗುಟ್ಟುತ್ತಿದೆ.
ಇಂದು ತೇಜಸ್ವಿ ಅವರ 78ನೇ ಹುಟ್ಟುಹಬ್ಬ. ಭೌತಿಕವಾಗಿ ಅಷ್ಟೆ ಅವರು ನಮ್ಮನ್ನು ಅಗಲಿದ್ದಾರೆ. ತಮ್ಮ ಪುಸ್ತಕಗಳ ಮೂಲಕ ಅವರು ಅಮರ. ಪುಸ್ತಕ ಹಿಡಿದೊಡನೆ ತೇಜಸ್ವಿ ನಮ್ಮೊಂದಿಗೆ ಮಾತನಾಡಲು ತೊಡಗುತ್ತಾರೆ. ಈ ಮಾತುಕಥೆಗೆ ಎಂದೂ ಕೊನೆಯಿಲ್ಲ...
ತೇಜಸ್ವಿ ಅವರ ಕುರಿತು ಅರ್ಥಪೂರ್ಣ ಸ್ಮರಣೆ...😊
ReplyDeleteಒಳ್ಳೆಯ ಬರಹ ರೈತರೆ, ನಿಮ್ಮ ಚಾರ್ಮಾಡಿ ಚಾರಣದ ಅನುಭವವೂ ಅದ್ಭುತ. ತೇಜಸ್ವಿಯವರ ಸಹವಾಸಕ್ಕೆ ಸಿಕ್ಕಿದ ನೀವು ಧನ್ಯರು.
ReplyDeleteತೇಜಪೂರ್ಣ ಬರಹ. ತೇಜಸ್ವಿ ಇನ್ನಿಲ್ಲ ಅನ್ನೋ ಸುದ್ದಿ ಈಟಿವಿಯಲ್ಲಿರೋವಾಗ ಏನೋ ಸಂಕಟ ತಂದಿತ್ತು. ಜಿಎನ್ ವಾಯ್ಸ್ ವೋವರ್ ಕೋಡೋಕೆ ಕರೆದು ಕೋಡಿಸಿದ್ರು.ಆದಿನದ ಸ್ಕರಿಪ್ಟ್ ಗಳು ನೆನಪಿನಾಳದಲ್ಲಿ ಅಮರ...ಸವಿ ನೆನಪಿಗೆ ಧನ್ಯವಾದ
ReplyDelete