• ಮುಖಪುಟ
  • ಸಿನಿಮಾ
  • ದೇಗುಲ ಸರಣಿ
  • ರಾಜಕೀಯ
  • ಭಾಷೆ
  • ಸಾಹಿತ್ಯ
  • ಪರಿಸರ
  • ರಂಗ ಕಲೆ
  • ಮಾಧ್ಯಮ
  • ಪ್ರವಾಸ
  • ಜೀವನಶೈಲಿ
  • ನನ್ನ ಬಗ್ಗೆ
  • ಸಂಪರ್ಕಿಸಿ

ಸಾಮಾಜಿಕ ಕಾರಣಗಳಿಗಾಗಿ ಮುಖ್ಯ ಆಗುವ ಬಾಹುಬಲಿ

ಭಾರತೀಯ ಸಂದರ್ಭದಲ್ಲಿ ಮಹಿಳೆಯರು ಕೂಡ ದಲಿತರಷ್ಟೆ ಶೋಷಣೆಗೆ ಒಳಗಾದವರು. ಆದರೆ ಎಲ್ಲ ಕಾಲಘಟ್ಟದಲ್ಲಿಯೂ ಹೀಗೆ ಇತ್ತೆ ? ಖಂಡಿತ ಇದ್ದಿರಲಿಕ್ಕಿಲ್ಲ. ಭಾರತ ಉಪಖಂಡ ಅನೇಕ ಭಾಗಗಳು ನಿಜ ಅರ್ಥದಲ್ಲಿ ಮಾತೃ ಪ್ರಧಾನ ವ್ಯವಸ್ಥೆ ಹೊಂದಿತ್ತು. ಮನೆತನ ಮುನ್ನೆಡೆಸುವಂತೆ ಸಂಸ್ಥಾನ, ರಾಜ್ಯ, ದೇಶಗಳನ್ನು ಮುನ್ನಡೆಸಿದ್ದಾರೆ. ಇನ್ನು ದಲಿತರು ರಾಜ್ಯ ರಕ್ಷಣೆಯ ಆಧಾರಸ್ತಂಭಗಳಾಗಿದ್ದರು. ಬಾಹುಬಲಿ ಸಿನೆಮಾದಲ್ಲಿ ಈ ಅಂಶಗಳು ಪ್ರಧಾನವಾಗಿವೆ.

ಕಾಲ್ಪನಿಕವಾದ ಈ ಸಿನೆಮಾ ಚಿತ್ರಕಥೆ ಅಂತಃಸತ್ವ ಇರುವುದು ಬಾಹುಬಲಿ, ಬಲ್ಲಾಳದೇವ, ಕಾಲಕೇಯ ಪಾತ್ರಗಳಲ್ಲಿ ಅಲ್ಲ. ಶಿವಗಾಮಿ, ಸಂಗಾ, ಆವಂತಿಕಾ, ದೇವಸೇನಿ ಮತ್ತು ಕಟ್ಟಪ್ಪ ಪಾತ್ರಗಳಲ್ಲಿ. ಕಥೆಯ ಬಹುಮುಖ್ಯ ಆಧಾರಸ್ತಂಭಗಳಾದ ಪಾತ್ರಗಳಿವು. ಇವುಗಳ ಪೋಷಣೆಯನ್ನು ಬಹಳ ಸಮರ್ಥವಾಗಿ ಮಾಡಲಾಗಿರುವುದು ಗಮನಾರ್ಹ.
ನಿರಾಯಾಸವಾಗಿ ತನ್ನ ಮಗ ಬಲ್ಲಾಳದೇವನೇ ಮಹಿಷ್ಮತಿ ರಾಜ್ಯದ ಸಿಂಹಾಸನರೂಢ ಆಗುವ ಸಾಧ್ಯತೆ ಇದ್ದರೂ ಶಿವಗಾಮಿ ಅದಕ್ಕೆ ಮನಸು ಮಾಡುವುದಿಲ್ಲ. ತನ್ನ ಕ್ರೂರ ಪತಿ ಪಿಂಗಳದೇವನ್ ಪ್ರಬಲ ಒತ್ತಡ ತಂದರೂ ಮಣಿಯುವುದಿಲ್ಲ. ಇದಕ್ಕೂ ಮೊದಲು ಮಹಾರಾಜ ಅಂತ್ಯವಾದ ಸಂದರ್ಭದಲ್ಲಿ ಮತ್ತು ಮಹಾರಾಣಿ ಮಗುವಿಗೆ ಜನ್ಮನೀಡಿ ಕಣ್ಮುಚಿದಾಗ ಸಿಂಹಾಸನಕ್ಕಾಗಿ ಉಂಟಾದ ಆಂತರಿಕ ಕ್ಷೋಭೆಯನ್ನು ಕೂಡ ಬಹಳ ಸಮರ್ಥವಾಗಿ ಹತ್ತಿಕ್ಕಿ ರಾಜ್ಯ ಉಳಿಸಿಕೊಳ್ಳುತ್ತಾಳೆ.
ತಂದೆ-ತಾಯಿ ಇಲ್ಲದೆ ಅನಾಥವಾದ ಅಮರೇಂದ್ರ ಬಾಹುಬಲಿ ಮತ್ತು ತನ್ನ ಸ್ವಂತ ಮಗು ಬಲ್ಲಾಳದೇವನ ನಡುವೆ ಯಾವುದೇ ಬೇಧಭಾವ ತೋರದೆ ಸಮನಾದ ಪ್ರೀತಿ-ವಾತ್ಸಲ್ಯ ತೋರಿ ರಣಕಲಿಗಳನ್ನಾಗಿ ಮಾಡುವುದು ಬಹಳ ದೊಡ್ಡಗುಣ. ಇವರಿಬ್ಬರೂ ದೊಡ್ಡವರಾದ ಮೇಲೆ ಯುಕ್ತಸ್ಥಾನಗಳಿಗೆ ನಿಯೋಜಿಸುವುದರಲ್ಲಿಯೂ ಈಕೆ ತೋರುವ ಕೆಚ್ಚು ಅಪಾರ. ತನ್ನ ಮಗ ಬಲ್ಲಾಳದೇವನನ್ನು ಸೇನಾಪತಿಯಾಗಿಯೂ, ಭಾವನ ಮಗ ಅಮರೇಂದ್ರ ಬಾಹುಬಲಿಯನ್ನು ಮಹಾರಾಜನನ್ನಾಗಿಯೂ ಮಾಡುತ್ತಾಳೆ. ಈ ಎಲ್ಲ ಸಂದರ್ಭಗಳಲ್ಲಿಯೂ ಈಕೆ ಆತ್ಮವಿಶ್ವಾಸದ ಖನಿಯಾಗಿ ಹೇಳುವ ಹೇಳುವ 'ನನ್ನ ಮಾತೇ ಶಾಸನ' ರೋಮಾಂಚನ ಉಂಟು ಮಾಡುತ್ತದೆ.
ಪ್ರಾಣತ್ಯಾಗ
ಅಮರೇಂದ್ರ ಬಾಹುಬಲಿ ಆಕಸ್ಮಿಕ ಮರಣಾ ನಂತರ ಆತನ ಕುಡಿಯನ್ನು ರಕ್ಷಿಸುತ್ತಾಳೆ. ಈ ಸಂದರ್ಭದಲ್ಲಿ ಈಕೆ ಮಗುವನ್ನು ರಭಸವಾಗಿ ಹರಿಯುವ ನದಿಯಲ್ಲಿ ಈಜುತ್ತಾ ಮಗುವನ್ನು ರಕ್ಷಿಸುವ ಪರಿ ಅದ್ಬುತ. ಇದನ್ನು ಪರಿಣಾಮಕಾರಿಯಾಗಿ ಚಿತ್ರಿಸಲಾಗಿದೆ. ಸಿಂಹಾಸನದ ನಿಜ ವಾರಸುದಾರ ಅನ್ನುವುದಕ್ಕಿಂತಲೂ ಹೆಚ್ಚಾಗಿ ಒಂದು ಜೀವ ರಕ್ಷಿಸುವ ಸಲುವಾಗಿ ತನ್ನ ಪ್ರಾಣತ್ಯಾಗ ಕೂಡ ಮಾಡುವುದು ಭಾವುಕಗೊಳಿಸುತ್ತದೆ.
ಸಂಗಾ:
ಆದಿವಾಸಿಗಳ ಒಡೆಯನ ಪತ್ನಿ ಈಕೆ. ಮಕ್ಕಳಿಲ್ಲದ ಈಕೆ ನದಿಯಲ್ಲಿ ಆಕಸ್ಮಿಕವಾಗಿ ದೊರೆತ ಮಗುವಿಗೆ ಅಕ್ಕರೆಯಿಂದ ತಾಯಿ ಆಗುತ್ತಾಳೆ. ಮಗುವನ್ನು ಸಾಕಿಕೊಳ್ಳುವ ಬಗ್ಗೆ ಸ್ವತಃ ಪತಿ ಅನುಮಾನದ ಸ್ವರ ಎತ್ತಿದರೂ ಅದನ್ನು ಅಡಗಿಸಿ ರಹಸ್ಯದ್ವಾರವನ್ನು ಮುಚ್ಚಲು ಖಚಿತ, ಗಟ್ಟಿಯಾದ ಸ್ವರದಲ್ಲಿ ಅಜ್ಞೆ ಮಾಡುವುದು ಗಮನ ಸೆಳೆಯುತ್ತದೆ. ಮಗುವನ್ನು ಸಮರ್ಥವಾಗಿ ಬೆಳೆಸುವುದರಲ್ಲಿಯೂ ಈಕೆಯ ಪಾತ್ರ ಅನನ್ಯ.
ಆವಂತಿಕಾ
ರಾಜ್ಯವನ್ನು, ಅಮರೇಂದ್ರ ಬಾಹುಬಲಿ ಪತ್ಮಿ ಮಹಾರಾಣಿ ದೇವಸೇನಿಯನ್ನು ಬಂಧಮುಕ್ತಗೊಳಿಸಲು ಯತ್ನಿಸುತ್ತಲೇ ಇರುವ ಗುಪ್ತಸೇನೆ ಯುವ ಸದಸ್ಯಳೀಕೆ. ತನ್ನೆಲ್ಲ ಸುಖ-ಶಾಂತಿಗಳನ್ನು ತ್ಯಾಗ ಮಾಡಿರುವಾಕೆ. ಪ್ರತಿಕ್ಷಣ ಬಲ್ಲಾಳದೇವನ ಕ್ರೂರ ಸೈನಿಕರಿಂದ ನಡೆಯುತ್ತಲೇ ಇರುವ ದಾಳಿಗಳಿಗೆ ತಿರುಗೇಟು ನೀಡುವ ಧೈರ್ಯಗಾತಿ. ಈಕೆಯ ಸಾಹಸ-ಛಲಗಳಿಂದಾಗಿಯೇ ಬಲ್ಲಾಳದೇವಮ ಸೆರೆಯಿಂದ ಮಹಾರಾಣಿ ದೇವಸೇನಿಯನ್ನು ರಕ್ಷಿಸುವ ಹೊಣೆಗಾರಿಕೆಯನ್ನು ನೀಡಲಾಗಿರುತ್ತದೆ.

ದೇವಸೇನಿ:
ಪತಿ, ಮಹಾರಾಜ ಅಮರೇಂದ್ರ ಬಾಹುಬಲಿ ದುರ್ಮರಣ, ತಾನು ಹೆತ್ತ ಕುಡಿ ಕೂಡ ಬೇರ್ಪಡುವಿಕೆ ಜೊತೆಗೆ ತಾನು ಕ್ರೂರಿ ಬಲ್ಲಾಳದೇವನ ಸೆರೆಯಲ್ಲಿದ್ದರೂ ಮಾನಸಿಕವಾಗಿ ಕಂಗೆಡದ ಛಲಗಾತಿ ಈಕೆ. ಮಾನಸಿಕವಾಗಿ, ದೈಹಿಕವಾಗಿ ದಶಕಗಳ ಕಾಲ ಅಮಾನವೀಯ ಶಿಕ್ಷೆಗೊಳಗಾದರೂ ತಲೆಬಾಗಿಸದ ಹೆಣ್ಣುಮಗಳೀಕೆ. ತನ್ನ ಮಗ ಬದುಕಿದ್ದಾನೆ, ತನ್ನನ್ನು ಮತ್ತು ಮಹಿಷ್ಮತಿ ರಾಜ್ಯವನ್ನು ಉಳಿಸಲು ಬಂದೇ ಬರುತ್ತಾನೆ ಎಂಬ ನಂಬಿಕೆಯಿಂದಲೇ ಬದುಕಿರುತ್ತಾಳೆ. ಈ ಪಾತ್ರ ನಿಜಕ್ಕೂ ಅತ್ಯದ್ಬುತ

ಕಟ್ಟಪ್ಪ
ಮಹಿಷ್ಮತಿ ರಾಜ್ಯದ ಆಧಾರಸ್ತಂಭ ಕಟ್ಟಪ್ಪ. ರಾಜ್ಯ ಉಳಿಸಿಕೊಳ್ಳಲು ಶಿವಗಾಮಿಗೆ ನೆರವಾಗುವ ವೀರ. ಈತನಿಲ್ಲದಿದ್ದರೆ ಮಹಿಷ್ಮತಿ ರಾಜ್ಯ ಎಂದೋ ಕೈತಪ್ಪಿ ಹೋಗುತ್ತಿತ್ತು ಎನ್ನುವ ಅರಿವು ರಾಜಮನೆತನದ ಪ್ರತಿಯೊಬ್ಬರಿಗೂ ಇದೆ. ಈತ ದಲಿತ. ಇದರಿಂದಲೇ ಎಷ್ಟೇ ವೀರನಾಗಿದ್ದರೂ ದೊರೆಯಬೇಕಾದ ತಕ್ಕ ಸ್ಥಾನಮಾನ ದೊರಕಿರುವುದಿಲ್ಲ. ಜೊತೆಗೆ ಪಂಕ್ತಿಭೇದ. ತಾನೋರ್ವ ದಲಿತ, ಮೇಲು ವರ್ಗದವರ ಜೊತೆ ಸರಿಸಮನಾಗಿ ಕುಳಿಯುಕೊಳ್ಳಲಾರೆ ಎಂಬ ಕೊರಗು ಬಾಧಿಸುತ್ತಿದ್ದರೂ ಬೇಸರಿಸಿಕೊಳ್ಳದೆ ಸಿಂಹಾಸನಕ್ಕೆ ನಿಷ್ಠನಾಗಿರುತ್ತಾನೆ. ಆಮಿಷಗಳು ಬಂದರೂ ಈತನ ನಿಷ್ಠೆ ಕದಲುವುದಿಲ್ಲ.

ಈ ಐದು ಪಾತ್ರಗಳಿಗೂ ಸೂಕ್ತವಾಗುವ ನಟಿಯರನ್ನು ಮತ್ತು ನಟನನ್ನು ನಿರ್ದೇಶಕ ರಾಜಮೌಳಿ ಆಯ್ಕೆ ಮಾಡಿದ್ದಾರೆ. ರಮ್ಯಕೃಷ್ಣ, ರೋಹಿಣಿ, ತಮ್ಮನ್ನಾ, ಅನುಷ್ಕಾ ಶೆಟ್ಟಿ ಮತ್ತು ಸತ್ಯರಾಜ್ ತಮ್ಮ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿ ನಟಿಸಿದ್ದಾರೆ.
ಇಂಥ ಆದರ್ಶ ಮತ್ತು ಅದ್ಬುತ ಎನ್ನುವಂಥ ಪಾತ್ರಗಳನ್ನು ಸೃಷ್ಟಿಸಿದ ಕಥೆಗಾರ ವಿಜಯೇಂದ್ರ ಪ್ರಸಾದ್ ಮತ್ತು ಚಿತ್ರಕಥೆ ಹಂತಗಳಲ್ಲಿಯೂ ಈ ಪಾತ್ರಗಳು ಮೊನಚು ಕಳೆದುಕೊಳ್ಳದಂತೆ ಎಚ್ಚರ ವಹಿಸಿರುವ ಮದನ್ ಕರ್ಕಿ, ರಾಹುಲ್ ಕೊಡ, ನಿರ್ದೇಶಕ ರಾಜಮೌಳಿ ಅಭಿನಂದನೀಯರು. ಚಿತ್ರಕಥೆ ಬೇಡುವ ಅಂಶಗಳನ್ನು ಈಡೇರಿಸಿರುವ ನಿರ್ದೇಶಕ ರಾಜಮೌಳಿ ಪರಿಶ್ರಮ ವಿಶೇಷ ಮೆಚ್ಚುಗೆಗೆ ಪಾತ್ರವಾಗುತ್ತದೆ.

No comments:

Post a Comment