• ಮುಖಪುಟ
  • ಸಿನಿಮಾ
  • ದೇಗುಲ ಸರಣಿ
  • ರಾಜಕೀಯ
  • ಭಾಷೆ
  • ಸಾಹಿತ್ಯ
  • ಪರಿಸರ
  • ರಂಗ ಕಲೆ
  • ಮಾಧ್ಯಮ
  • ಪ್ರವಾಸ
  • ಜೀವನಶೈಲಿ
  • ನನ್ನ ಬಗ್ಗೆ
  • ಸಂಪರ್ಕಿಸಿ

ಮೌಲ್ಯಗಳ 'ತಿಥಿ'

ಸಾಮಾಜಿಕ ಒಪ್ಪಿತ ಮೌಲ್ಯಗಳ ನಡುವೆ ಬದುಕು ನಡೆಯುತ್ತದೆ. ಸಂಬಂಧಗಳ ಪರಸ್ಪರ ಗೌರವ, ಸುಮಧುರತೆಗಾಗಿ ಇದು ಅತ್ಯಂತ ಅವಶ್ಯಕ. ಕೆರೆ, ನದಿ, ಪರಿಸರ ಕಾಪಾಡುವಿಕೆಗೂ ಕಟ್ಟುಪಾಡುಗಳಿವೆ. ಇವು ಕೂಡ ಮೌಲ್ಯಗಳ ಪರಿಧಿಯಲ್ಲಿಯೇ ಬರುವಂಥದ್ದು. ಮೂಲತಃ ಪ್ರಾಣಿಯಾದ ಇವೆಲ್ಲವನ್ನೂ ಅರಿತು ವಿವೇಚನಾಪೂರ್ಣವಾಗಿ ವಿಧಿಸಿಕೊಂಡಿದ್ದು. ಹೀಗೆ ಆದಾಗಲೇ ಬದುಕು ಸಹ್ಯವಾಗುತ್ತದೆ. ಸಂವೇದಿಯಾಗುತ್ತದೆ. ಆದರೆ ಇಂಥ ರೂಢಿಗತ ಮೌಲ್ಯಗಳು ತಲೆಮಾರುಗಳ ನಡುವೆ ಹೇಗೆ ಅಪಮೌಲ್ಯಗೊಂಡಿದೆ, 'ಸಂಬಂಜ ಅನ್ನೋದು ದೊಡ್ದು ಕನಾ' ಎಂಬ ನಂಬಿಕೆ ತಿಥಿ ಆಗಿದೆ, ಆಗುತ್ತಿದೆ ಎಂಬುದನ್ನು 'ತಿಥಿ' ಚಿತ್ರ ಬಹುಸ್ಪಷ್ಟವಾಗಿ ಹೇಳುತ್ತದೆ.

'ತಿಥಿ' ಮೂಲಧಾತು ಸೆಂಚುರಿಗೌಡ. ಈತನದು ಅನ್ವರ್ಥಕನಾಮ ಅಡ್ಡನಾಮ. ಸಾರ್ವಜನಿಕ ಬದುಕು ಹೇಗಿರಬೇಕು ಎಂಬುದನ್ನು ಗ್ರಾಮೀಣ ಆಡುಮಾತುಗಳು, ಗಾದೆಗಳು ಹೇಳುತ್ತವೆ. ಇದು ಕೂಡ ಸಾಮಾಜಿಕ ಶಿಕ್ಷಣದ ಭಾಗವೇ ಆಗಿದೆ. ಮಕ್ಕಳು ಮಾತನಾಡಬಾರದನ್ನು ಮಾತನಾಡಿದರೆ ಅವರ ಬಾಯಿಮೇಲೆ ಹೊಡೆದು ಬುದ್ಧಿ ಹೇಳುವ ಪರಿಪಾಠವಿದೆ. ವಯಸ್ಕರು ಕೂಡ ಬೇರೆಯವರ ತಪ್ಪುಗಳನ್ನೇ ಹೇಳುತ್ತಿದ್ದರೆ 'ಮಾಡಿದವರ ಪಾಪ, ಹಾಡಿದವರ ಬಾಯಲ್ಲಿ' ಎಂದು ಹೇಳಿ ಸುಮ್ಮನಾಗಿಸುತ್ತಾರೆ. ಆದರೆ ತಾನು ಇದೆಲ್ಲವನ್ನೂ ಧಿಕ್ಕರಿಸಿದವನು, ಸಾಮಾಜಿಕ ಸಂಸ್ಕಾರವೇ ಇಲ್ಲದವನು ಎಂಬುದನ್ನು ಸೆಂಚುರಿಗೌಡ ತನ್ನ ಮಾತುಗಳಿಂದಲೇ ತೋರಿಸಿಕೊಳ್ಳುತ್ತಾನೆ. ರಸ್ತೆಯಲ್ಲಿ ಕುಳಿತು ತನಗೆ ಸಂಬಂಧವೇ ಇಲ್ಲದೇ ಇರುವುದರ ಬಗ್ಗೆಯೆಲ್ಲ ಮಾತನಾಡುತ್ತಾನೆ. ಹೀಗೆ ಮಾತನಾಡುತ್ತಾ ಮಾತನಾಡುತ್ತಾ ಸತ್ತೂ ಹೋಗುತ್ತಾನೆ. ಆದರೆ ಈತನ ಸ್ವಭಾವದ ಕರಿನೆರಳು ಮಾತ್ರ ಸಾಯುವುದಿಲ್ಲ. ಅದು ಚಾಚಿಕೊಳ್ಳುತ್ತಲೇ ಹೋಗುತ್ತದೆ.

ತಂದೆ ಅಂತ್ಯಕ್ರಿಯೆ ನೆರವೇರಿಸಬೇಕಾದ್ದು ಮಕ್ಕಳ ಕರ್ತವ್ಯ. ಅದರಲ್ಲಿಯೂ ಹಿರಿಯ ಮಗನ ಜವಾಬ್ದಾರಿ ಹೆಚ್ಚು. ಆದರೆ ಸೆಂಚುರಿಗೌಡನ ಮಗ ಗಡ್ಡಪ್ಪ ಬೇಜಾವಬ್ದಾರಿ ಮನುಷ್ಯ. ತತ್ವಜ್ಞಾನಿ ಹಾಗೆ ಮಾತನಾಡಿದರೂ ಅದಕ್ಕೆ ತದ್ವಿರುದ್ಧ ವ್ಯಕ್ತಿತ್ವದವನು. ಸಾಮಾನ್ಯವಾಗಿ ಯಾರಾದರೂ ನಂಬಿಕೆ ಇಟ್ಟರೆ ಅದನ್ನು ಉಳಿಸಿಕೊಳ್ಳಬೇಕಾದ್ದು ಕರ್ತವ್ಯ ಎಂದೇ ಭಾವಿಸಲಾಗುತ್ತದೆ. ಆದರೆ ತಾನು ಇದಕ್ಕೆ ಎರವಾದವನು ಎಂಬುದನ್ನು ಈತ ಆರಂಭದಲ್ಲಿಯೇ ತೋರಿಸಿಕೊಳ್ಳುತ್ತಾನೆ.
ಹೊಲಗಳ ನಡುವಿನ ಹಾದಿಯಲ್ಲಿ ಮದ್ಯ ಕುಡಿಯುತ್ತಾ ನಡೆದುಬರುವ ಈತ ಕೃಷಿಕೆಲಸದಲ್ಲಿ ತೊಡಗಿಸಿಕೊಂಡಾತನ ಬಳಿ ಒಂದು ಬೀಡಿ ಕೇಳುತ್ತಾನೆ. ಆತ ದೊಡ್ಡಮನಸಿನಿಂದ 'ಸೈಕಲಿಗೆ ನೇತುಹಾಕಿರುವ ತನ್ನ ಬಟ್ಟೆಯಲ್ಲಿದೆ ತೆಗೆದುಕೋ' ಎನ್ನುತ್ತಾನೆ ಜೇಬಿಗೆ ಕೈ ಹಾಕುವ ಗಡ್ಡಪ್ಪ ಬೀಡಿಯನ್ನಷ್ಟೇ ತೆಗೆದುಕೊಳ್ಳುವುದಿಲ್ಲ. ಅಲ್ಲಿ ಕಂಡ ದುಡ್ಡಿನಿಂದ 100 ರೂ. ಅನ್ನು ನಿರ್ವಿಕಾರವಾಗಿ ಎಗರಿಸುತ್ತಾನೆ. ತಾನು ನಂಬಿಕೆಗೆ ಎರವಾದವನು ಎಂಬುದನ್ನು ಈತ ಮುಂದೆಯೂ ತೋರ್ಪಡಿಸುತ್ತಾನೆ.
ಈತನ ಮನಸಿನ ನಿರಂತರ ಹೊಯ್ದಾಟ, ತಳಮಳಗಳನ್ನು ಸಮರ್ಥವಾಗಿ ಚಿತ್ರಿಸಲಾಗಿದೆ. 'ನಿಮ್ಮಪ್ಪ ಸತ್ತು ಹೋಗಿದ್ದಾನೆ' ಎಂದು ರೈತಾಪಿಗಳು ಕೂಗಿ ಹೇಳಿದಾಗ 'ಆಯ್ತು' ಎಂದು ತಣ್ಣಗೆ ಪ್ರತಿಕ್ರಿಯಿಸುವ ಈತ ತನ್ನೊಳಗೆ ಅಷ್ಟೇ ತಣ್ಣಗಿಲ್ಲ. ಊರಿಗೆ ವಿರುದ್ಧ ದಿಕ್ಕಿನಲ್ಲಿ ನಡೆಯುತ್ತಾನೆ. ಇದನ್ನು ಬೇರೆಯವರು ಆತನಿಗೆ ನೆನಪಿಸಬೇಕಾಗುತ್ತದೆ. ಊರೊಳಗೆ ಬಾರದೆ ಅಂತ್ಯಕ್ರಿಯೆ ನಡೆಯುವ ಜಾಗಕ್ಕೆ ಬರುವ ಈತ ಅಲ್ಲಿಯೂ ಕೂರಲಾರ. ಎದ್ದು ಬೇರೆಡೆ ಹೋಗುತ್ತಾನೆ. ಅಂತ್ಯ ಸಂಸ್ಕಾರದ ವಿಧಿವಿಧಾನಗಳನ್ನು ಅರೆಬರೆ ಮನಸಿನಿಂದ ಮಾಡುತ್ತಾನೆ. ಅದು ಕೂಡ ಗ್ರಾಮಸ್ಥರ ಒತ್ತಾಯದಿಂದ. ಇದೆಲ್ಲ ಆತ ಅಪ್ಪನ ಮೇಲೆ ಇಟ್ಟ ದ್ವೇಷ ಜೊತೆಗೊತೆಗೆ ಗೊಂದಲ, ತಳಮಳಗಳ ಪ್ರತೀಕವಾಗಿ ಕಾಣುತ್ತದೆ.
ಸೆಂಚುರಿಗೌಡ ತನ್ನ ಕುಟುಂಬದ ಹೊಲ-ಮನೆ-ಗದ್ದೆಗಳನ್ನು ಕಾನೂನುಬದ್ಧವಾಗಿ ಮುಂದಿನ ಪೀಳಿಗೆಗೆ ದಾಟಿಸಿರುವುದಿಲ್ಲ. ಇದು ಈತನ ಮೊಮ್ಮಗ ಅಂದರೆ ಗಡ್ಡಪ್ಪನ ಮಗ ತಮ್ಮಯ್ಯನ ಪೀಕಲಾಟಕ್ಕೆ ಕಾರಣ. ಅಲೆಮಾರಿ, ಅಪ್ಪನಿಂದ ಕೈತಪ್ಪಿ ಹೋಗಬಹುದು ಎಂಬ ಆತಂಕ. ಆಸ್ತಿಯನ್ನು ಹೇಗಾದರೂ ಮಾಡಿ ಮಾರಾಟ ಮಾಡಬೇಕೆನ್ನುವ ಹಪಾಹಪಿಯಲ್ಲಿ ಈತ ಅಪ್ಪ ಬದುಕಿದಂತೆಯೇ ಕಾಗದ ಪತ್ರಗಳಲ್ಲಿ ಆತನನ್ನು ಸಾಯಿಸಿಬಿಡುತ್ತಾನೆ. ತನ್ನಪ್ಪನ ಬೇಜಾವಾಬ್ದಾರಿ ಬಗ್ಗೆ ಪುಂಖಾನುಪುಃಖವಾಗಿ ಮಾತನಾಡುವ ಈತ ತಾನು ತನ್ನ ಮಗನಿಗೆ ನ್ಯಾಯವಾಗಿ ಬರಬೇಕಿದ್ದ ಆಸ್ತಿಯ ಹಕ್ಕುಗಳನ್ನು ಕಿತ್ತುಕೊಳ್ಳುವ ಮೂಲಕ ಬಹುದೊಡ್ಡ ಬೇಜಾಬ್ದಾರಿತನ ಹೊಂದಿದವನು ಎಂದು ಮರೆಯುತ್ತಾನೆ.

ತಮ್ಮಣ್ಣನ ಮಗ ಅಭಿ. ಕಾನೂನಿಗೆ ವಿರುದ್ಧವಾದ ನಡವಳಿಕೆಗಳನ್ನು ಮೈಗೂಡಿಸಿಕೊಂಡವನು. ಈತ ಕೃತ್ಯವೊಂದರಲ್ಲಿ ತೊಡಗಿರುವಾಗಲೇ ಕುರಿಗಾಯಿ ಯುವತಿಯೊಬ್ಬಳನ್ನು ನೋಡುತ್ತಾನೆ. ಅವಳನ್ನು ದೈಹಿಕವಾಗಿ ಪಡೆಯಬೇಕೆಂಬ ಉದ್ದೇಶ ಹೊಂದಿ ಸಫಲನೂ ಆಗುತ್ತಾನೆ.
ಆದರೆ ಈತನ ಅಪ್ಪ ತನ್ನ ಗುರಿಯಲ್ಲಿ ಸಫಲನಾಗುವುದಿಲ್ಲ. ತಾನೇ ಸೃಷ್ಟಿಸಿದ್ದ ಸುಳ್ಳಿನ ಜಾಲ ಈತನ ಅಪ್ಪ ಮರಳಿ ಪ್ರತ್ಯಕ್ಷ್ಯವಾಗುವುದರೊಟ್ಟಿಗೆ ಹರಿಯುತ್ತದೆ. ಭಾರಿ ಬಡ್ಡಿಯ ಬಲೆಯಲ್ಲಿ ತಾನಾಗಿ ಸಿಲುಕಿಕೊಂಡ ಈತನ ಅಧಃಪತನವೂ ಆರಂಭವಾಗುತ್ತದೆ. ಜೊತೆಗೆ ತನಗರಿವಿಲ್ಲದಂತೆ ಈತ ತನ್ನ ಕುಟುಂಬದ ಸದಸ್ಯರನ್ನೂ ಇದರ ವರ್ತುಲಕ್ಕೆ ಎಳೆದುಕೊಳ್ಳುತ್ತಾನೆ.
ಒಂದೇ ಕುಟುಂಬದ ನಾಲ್ಕು ತಲೆಮಾರಿನ ವ್ಯಕ್ತಿಗಳು ಅಪಮೌಲ್ಯದ ವರ್ತುಲದೊಳಗೆ ಗಿರಕಿ ಹೊಡೆಯುತ್ತಾ ಸಾಗುವುದನ್ನು ಚಿತ್ರ ಸೂಕ್ಷ್ಮವಾಗಿ, ಕೆಲವೊಮ್ಮೆ ವಿಷದವಾಗಿ ಚಿತ್ರಿಸುತ್ತದೆ. ಮಗನಿಂದಲೇ ಸೆಂಚುರಿಗೌಡನ ನೀಚತನ ಬಯಲಾಗುತ್ತದೆ. 'ಸಂಸಾರ ಗುಟ್ಟು, ವ್ಯಾಧಿ ರಟ್ಟು' ಎಂದು ಗ್ರಾಮೀಣರು ಪದೇಪದೇ ಹೇಳುತ್ತಾರೆ. ಆದರೆ ಸಾರ್ವಜನಿಕವಾಗಿ ಹೀಗೆ ತನ್ನಪ್ಪನ ನೀಚತನವನ್ನು ಬಯಲು ಮಾಡುತ್ತಲೇ ತತ್ವಜ್ಞಾನಿಯಂತೆ ಸೋಗು ಹಾಕಿಕೊಂಡ ಗಡ್ಡಪ್ಪ ತನ್ನ ಪರಮ ನೀಚತನವನ್ನೂ ಅನಾವರಣ ಮಾಡಿಕೊಳ್ಳುತ್ತಾನೆ. ಹೀಗೆ ಮಾಡುವುದಕ್ಕೂ ಆತನದೇ ಆದ ಒಳಕಾರಣಗಳಿವೆ. ಒಂದು ಕುರಿಗಾಹಿ ಗುಂಪಿನ ಅದರಲ್ಲಿಯೂ ಅಲ್ಲಿಯ ಮಹಿಳೆಯರ ಅನುಕಂಪ ಗಿಟ್ಟಿಸಿಕೊಳ್ಳುವುದು. 
ತನ್ನಪ್ಪ ಹೆಣ್ಣುಬಾಕತನ ತನ್ನ ಹೆಂಡತಿಯತ್ತಲೂ ಚಾಚಿತ್ತು ಎಂದು ಹೇಳಿ ದಿಗ್ಬ್ರಮೆಗೊಳಿಸುವ ಈತನ ಹೇಳಿಕೆ ನಂತರ ಆಸ್ತಿಗಾಗಿ ತನ್ನ ತಾತನ ತಿಥಿ ದಿನದಂದು ಸಾಮಾಜಿಕ ಮೌಲ್ಯಗಳಿಗೆ, ಒಪ್ಪಿತ ಶಾಸ್ತ್ರಗಳಿಗೆ ವಿರುದ್ಧವಾಗಿ ತನ್ನ ತಲೆ ಬೋಳಿಸಿಕೊಂಡ ತಮ್ಮಣ್ಣನ ಕ್ರಿಯೆ ಆತ ಯಾರಿಗೆ ಜನಿಸಿರಬಹುದು ಎಂಬುದನ್ನು ಸಂಕೇತವಾಗಿ ಹೇಳುವಂತೆ ಕಾಣುತ್ತದೆ. 
'ನಿಂತಲ್ಲಿ ನಿಲ್ಲಲ್ಲಾರೆ, ಕುಳಿತಲ್ಲಿ ಕೂರಲಾರೆ, ತಿರುಗುತ್ತಲೇ ಇರುತ್ತೇನೆ' ಎನ್ನುವ ಗಡ್ಡಪ್ಪ, ಕುರಿಗಾಯಿಗಳ ಗುಂಪಿಗೆ ಸೇರಿಕೊಂಡ ನಂತರ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಾನೆ. ಕುರಿಗಾಯಿಗಳ ಜೊತೆ ಹೋಗಿ ಬರುವುದಿಲ್ಲ. ಬದಲಾಗಿ ಅಡುಗೆ ಮಾಡಲು ಕ್ಯಾಂಪಿನಲ್ಲಿಯೇ ಉಳಿದುಕೊಳ್ಳುವ ಮಹಿಳೆಯರೊಟ್ಟಿಗೆ ಉಳಿಯುತ್ತಾನೆ. ಹುಲಿ-ಕುರಿ ಆಟ ಆಡುತ್ತಾ 'ನಾನು ಕುರಿಗಳನೆಲ್ಲ ತಿಂದು ಬಿಡುತ್ತೇನೆ' ಎಂಬ ಈತನ ಮಾತು ಸಂಕೇತದಂದೆ ಧ್ವನಿಸುತ್ತದೆ. ಆತನಪ್ಪನ ನೀಚತನ ಈತನ್ನಲ್ಲಿಯೂ ಅಡಗಿದೆ ಎಂಬುದನ್ನು ಪ್ರತಿಧ್ವನಿಸುತ್ತದೆ.
ತನ್ನಪ್ಪ ಮತ್ತು ತನ್ನ ಹೆಂಡತಿ ಕೂಡುವುದನ್ನು ಕಣ್ಣಾರೆ ಕಂಡರೂ 'ಅಂದೇ ಹೆಂಡತಿ ಮಾಡಿದ ಊಟ ತಿಂದೆ, ಎಚ್ಚರವಾಗಿ ನೋಡಿದರೆ ಆಕೆ ಬಾವಿಗೆ ಬಿದ್ದು ಸತ್ತಿದ್ದಳು' ಎಂಬ ಈತನ ಹೇಳಿಕೆಯನ್ನು ನಂಬಲು ಆಗುವುದಿಲ್ಲ. ಈತ ನಿರ್ವಿಕಾರ ಚಿತ್ತದವನೆನಲ್ಲ. ಹೆಂಡತಿಯನ್ನು ಈತನೇ ಕೊಂದಿರುವ ಸಾಧ್ಯತೆಗಳೇ ಹೆಚ್ಚು.
ಆಡು-ಕುರಿ ಕೊಟ್ಟಿಗೆಯಲ್ಲಿ ಕಾವೇರಿಯನ್ನು ದೈಹಿಕವಾಗಿ ಹೊಂದುವ ಅಭಿ ಕೂಡ ಹುಲಿಯ ಕ್ರೌರ್ಯದ ಪ್ರತಿರೂಪವಾಗಿ ಕಾಣುತ್ತಾನೆ. ಆತ ಮದುವೆಯಾಗಬಹುದು ಎಂಬ ಆಶೆಯನ್ನಿಟ್ಟುಕೊಂಡೆ ಸಮಾಗಮಕ್ಕೆ ತಿರೋಧಿಸದವಳ ಮಾತಿಗೆ ಈತ ಯಾವುದೇ ಪ್ರತಿಕ್ರಿಯೆ ತೋರಿಸುವುದಿಲ್ಲ.
ಈ ಸಿನೆಮಾ ನಿರ್ದೇಶಕ ರಾಮ್ ರೆಡ್ಡಿ ಹಲವೊಮ್ಮೆ ನೇರವಾಗಿಯೂ, ಪ್ರಬಲ ಸಂಕೇತಗಳ ಮೂಲಕವೂ ಈ ನಾಲ್ಕು ತಲೆಮಾರು ಒಪ್ಪಿತ ಮೌಲ್ಯಗಳ ತಿಥಿಯನ್ನು ಹೇಗೆ ಸಾಂಗವಾಗಿ ನೇರವೇರಿಸಿದ್ದಾರೆ ಎಂಬುದನ್ನು ಹೇಳುವ ರೀತಿ ಕೌತುಕ ಮೂಡಿಸುತ್ತದೆ. ಒಂದೇ ಮೋಟಾರ್ ಬೈಕಿನಲ್ಲಿ ಗಡ್ಡಪ್ಪ, ತಮ್ಮಣ್ಣ, ಅಭಿ ಸಾಗುತ್ತಿರುತ್ತಾರೆ. ಇವರ ಹಿಂದೆ ಗುದ್ದಲಿ ನೇತುಹಾಕಿಕೊಂಡಿರುತ್ತದೆ. ಇದು ಮೌಲ್ಯಗಳಿಗೆ ಮಣ್ಣು ಎಳೆಯುವ ರೀತಿ ಹೇಳುವಂತೆ ಭಾಸವಾಗುತ್ತದೆ. ಗಡ್ಡಪ್ಪ ಆಡುವ ಹುಲಿ-ಕುರಿ ಆಟವೂ ಸಂಕೇತಪೂರ್ಣವಾಗಿ ಕಾಣುತ್ತದೆ. ಇಂಥ ಶಕ್ತಿಶಾಲಿ ಸಂಕೇತಗಳನ್ನು ನಿರ್ದೇಶಕ ದುಡಿಸಿಕೊಂಡ ಪರಿ ಅನನ್ಯ.
ಹನ್ನೊಂದರಿಂದ ಹನ್ನೆರಡನೇ ದಿನದವರೆಗೂ ಸತ್ತವರ ಆತ್ಮ ಸ್ಥಳದಲ್ಲಿಯೇ ಸುತ್ತುತ್ತಿರುತ್ತದೆ. ಅದನ್ನು ಪಾರಮಾರ್ಥಿಕ ಲೋಕಕ್ಕೆ ಕಳಿಸುವ ಸಲುವಾಗಿ ಕೆಲವು ಕ್ರಿಯೆಗಳನ್ನು ಮಾಡಬೇಕು ಎಂಬುದು ಒಂದು ನಂಬಿಕೆ. ಇಂಥ ಕ್ರಿಯೆ ತಿಥಿ. ಇದರಾರ್ಥ ಆತ್ಮದ ಸುತ್ತುವಿಕೆಯನ್ನು ಅಲ್ಲಿಯೇ ಮುಗಿಸುವುದು. (ಆದರೆ ಇಲ್ಲಿ ಸೆಂಚುರಿಗೌಡನ ಪಾಪದ, ನೀಚತನದ ನೆರಳು ಆತನ ಪೀಳಿಗೆಗಳಿಗೂ ದಾಟುತ್ತಾ ಇದ್ದಲ್ಲಿಯೇ ಸುತ್ತತೊಡಗುತ್ತದೆ. ಇದು ಒಂದು ರೀತಿ ನಹುಷ ಪ್ರಜ್ಞೆ ಮತ್ತು ಅಗಸ್ತ್ಯರ ಶಾಪ ನೆನಪಿಸುತ್ತದೆ) ಇಲ್ಲಿ ಮಾಡುವ ಆಹಾರವನ್ನು ಪೂಜೆ ನಂತರ ಪ್ರಸಾದವಾಗಿ ಸ್ವೀಕರಿಸುತ್ತಾರೆ. ಆದರೆ ಇದು ಬಹುತೇಕ ಹಳ್ಳಿಗರ ದೃಷ್ಟಿಯಲ್ಲಿ ಪ್ರಸಾದವಾಗದೇ ಕೇವಲ ಬಾಡೂಟ ಆಗುತ್ತದೆ. ಇದಕ್ಕಾಗಿ ಅವರು ತಹತಹಿಸುವುದನ್ನು ತೋರಿಸುವುದರ ಮೂಲಕ  ಇಂದಿನ ಅವರ ಮಟ್ಟ ಎತ್ತ ಜಾರಿದೆ ಎಂಬುದನ್ನೂ ಹೇಳುತ್ತಿದ್ದಾರೆ ಎನಿಸುತ್ತದೆ.
ನಿರ್ದೇಶಕ ರಾಮ್ ರೆಡ್ಡಿ ಅವರು ಬರೆದ ಕಥೆಯನ್ನೇ ಆಧರಿಸಿದ ಚಿತ್ರಕಥೆ ಇದು. ಕುಸುರಿ ಕೆಲಸ ಹೊಂದಿರುವ ಕಲೆಯಂತೆ ಇದರ ಚಿತ್ರಕಥೆ ಇದೆ. ಅಷ್ಟು ಜತನವಾಗಿ ಇದನ್ನು ಚಿತ್ರಕಥೆಗಾರರಾದ ಈರೇಗೌಡ, ರಾಮ್ ರೆಡ್ಡಿ ರೂಪಿಸಿದ್ದಾರೆ. ಚಿತ್ರದುದ್ದಕ್ಕೂ ಕ್ಯಾಮೆರಾ ತನ್ನ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದೆ. ಕ್ಯಾಮೆರಾಮೆನ್ ಡೊರನ್ ಟೆಂಪಾರ್ಟ್ ಯಾವ ದೃಶ್ಯಗಳನ್ನು ರಮ್ಯವಾಗಿಸಿ ಚಿತ್ರಕಥೆಗೆ ಭಂಗ ತರುವ ಕೆಲಸ ಮಾಡಿಲ್ಲ. ಇದೇ ಮಾತನ್ನು ಸಂಕಲನ ಕೆಲಸದ ಬಗ್ಗೆಯೂ ಹೇಳಬಹುದು. ಯಾವೊಂದು ದೃಶ್ಯವೂ ಕೂಡ ಅನಗತ್ಯವಾಗಿತ್ತು (ಸಂಭಾಷಣೆಗೂ ಕೂಡ ಇದೇ ಹೆಗ್ಗಳಿಕೆ ಸಲ್ಲುತ್ತದೆ) ಎಂದನ್ನಿಸಿದ ಮಟ್ಟಿಗೆ ಜಾನ್ ಜಿಮ್ಮೆಮ್ಮನ್, ರಾಮ್ ರೆಡ್ಡಿ ಕಾರ್ಯ ನಿರ್ವಹಿಸಿದ್ದಾರೆ. ಇವರ ಕೈಚಳಕದಿಂದ ಸಿನೆಮಾ ಎಲ್ಲಿಯೂ ಬೋರ್ ಹೊಡೆಸದೆ ಸಾಗುತ್ತದೆ.
ಮಂಡ್ಯದ ಆಡುಭಾಷೆಯನ್ನು ಬಹಳ ಚೆನ್ನಾಗಿ ದುಡಿಸಿಕೊಂಡಿದ್ದಾರೆ. ಮೂಲತಃ ಸಿನೆ ಕಲಾವಿದ ವೃತ್ತಿಯವರಲ್ಲದ ಇದೇ ಪರಿಸರದ ಗ್ರಾಮೀಣರು, ಉತ್ತರ ಕರ್ನಾಟಕದಿಂದ ಬಂದ ಅಲೆಮಾರಿ ಕುರಿಗಾಹಿಗಳ ಅಭಿನಯ ಸಹಜವಾಗಿದೆ. ಇದು ಎಷ್ಟರ ಮಟ್ಟಿಗೆ ಎಂದರೆ ಇವರು ನಟಿಸುತ್ತಿದ್ದಾರೆ ಎಂಬ ಭಾವ ಪ್ರೇಕ್ಷಕನಲ್ಲಿ ಮೂಡುವುದಿಲ್ಲ. ಅಪಕ್ವ ಅಥವಾ ಓವರ್ ಆಕ್ಟಿಂಗ್ ಎನ್ನುವಂಥ ಅಂಶಗಳು ಇಲ್ಲಿ ಕಾಣುವುದಿಲ್ಲ. ಇದಕ್ಕಾಗಿ ಚಿತ್ರತಂಡ ಪಟ್ಟಿರುವ ಶ್ರಮ ಪ್ರತಿ ಫ್ರೇಮಿನಲ್ಲಿಯೂ ತಿಳಿಯುತ್ತದೆ.
ಮೌಲ್ಯಗಳ ತಿಥಿ ಬಗ್ಗೆ ಹೇಳುತ್ತಲೇ ಇಂಥ ಮೌಲ್ಯಗಳಿಗೆ ಜೀವ ನೀಡುವ, ಬೆಲೆ ತಂದು ಕೊಡುವ ವ್ಯಕ್ತಿಗಳೂ ಇದ್ದಾರೆ ಎಂಬುದನ್ನು ಕಾವೇರಿ, ಈಕೆಯ ದೊಡ್ಡಪ್ಪ,  ಇವರ ಗುಂಪಿನ ಮಹಿಳೆಯರು,  ಅಂತ್ಯಕ್ರಿಯೆ, ತಿಥಿ ನಡೆಸಿಕೊಡುವ ವ್ಯಕ್ತಿಯ  ಪಾತ್ರಗಳ ಮೂಲಕ ಚಿತ್ರ ಸೂಚ್ಯವಾಗಿ ಹೇಳುತ್ತದೆ.
ಇಂಥ ಅಪರೂಪದ, ಚಿತ್ರ ಕನ್ನಡದಲ್ಲಿ ತೆರೆಕಂಡಿರುವುದು ಮಹತ್ವದ ಅಂಶ. ಇವೆಲ್ಲದರ ಜೊತೆಗೆ ಇಂಥ ಚಿತ್ರಕ್ಕೆ ಬಂಡವಾಳ ಹೂಡಿದ ನಿರ್ಮಾಪಕರು ಕೂಡ ಶ್ಲಾಘನೀಯರು. ಮಸಾಲೆ ಸೂತ್ರಗಳ ಅಂಶಗಳನ್ನು ಮೈಗೂಡಿಸಿಕೊಳ್ಳದ ಚಿತ್ರವನ್ನು ಗೆಲ್ಲಿಸುವುದರ ಮೂಲಕ ಹೊಸ ಅಲೆ ಉತ್ತಮ ಚಿತ್ರಗಳನ್ನು ತಾವು ಪ್ರೋತ್ಸಾಯಿಸುತ್ತೇವೆ ಎಂಬುದನ್ನು ಕನ್ನಡಿಗರೂ ತೋರಿಸಿದ್ದಾರೆ. ಇದು ಬಹು ಮಹತ್ವದ ಅಂಶ.

No comments:

Post a Comment