ಮೊನ್ನೆ ತಾನೆ ಸ್ವತಂತ್ರ ದಿನದ 65ನೇ ವರ್ಷಾಚರಣೆ ಆಚರಿಸಿದ್ದೇವೆ. ಆದರೆ ವರ್ಷಗಳು ಉರುಳಿವೆ ಹೊರತು ಸರಕಾರಿ ಯಂತ್ರ ಮತ್ತು ರಾಜಕೀಯ ವ್ಯವಸ್ಥೆ ಇನ್ನೂ ಬ್ರಿಟಿಷ್ ಆಡಳಿತದ ಹ್ಯಾಂಗೋವರ್ ಅಥವಾ ಗುಂಗಿನಲ್ಲಿಯೇ ಇದೆ. ನಡೆಯುತ್ತಿರುವ ವಿದ್ಯಮಾನಗಳನ್ನು ನೋಡಿದರೆ ‘ಪ್ರಜಾಪ್ರಭುತ್ವದ ‘ ಅಣಕ ನಡೆಯುತ್ತಿರುವುದು ತಿಳಿಯುತ್ತದೆ. ಇದಕ್ಕೆ ಇತ್ತೀಚಿನ ಸ್ಪಷ್ಟ ನಿದರ್ಶನ ಅಣ್ಣಾ ಹಜಾರೆ ಅಕ್ರಮ ಬಂಧನ….!
1947ರಲ್ಲಿ ರಾಷ್ಟ್ರ ಪರಕೀಯ ಆಡಳಿತದಿಂದ ಮುಕ್ತಿಗೊಂಡ ನಂತರ ಸುವರ್ಣಯುಗ ಆರಂಭಗೊಳ್ಳುತ್ತದೆ ಎಂದು ಬಹುತೇಕ ದೇಶವಾಸಿಗಳು ನೆನಸಿದ್ದರು. ಇತಿಹಾಸದ ಪುಟಗಳನ್ನು ನೋಡಿದಾಗ ಈ ಅಂಶ ಅರಿವಾಗುತ್ತದೆ. ಆಡಳಿತದಲ್ಲಿ ಸುವರ್ಣಯುಗವಿರಲಿ ಅಲ್ಯುಮಿನಿಯಂ ಯುಗವೂ ಆರಂಭಗೊಳ್ಳಲಿಲ್ಲ. ಲಾಲ್ ಬಹದ್ದೂರ್ ಶಾಸ್ರೀ ಅವರು ಪ್ರಧಾನಿಯಾಗಿದ್ದ ಕಿರು ಅವಧಿ ಹೊರತುಪಡಿಸಿದರೆ ಉಳಿದಂತೆ ನಾನಾ ಕಾರಣಗಳಿಗಾಗಿ ರಾಷ್ಟ್ರ ಮಜುಗರಕ್ಕೆ ಒಳಗಾಗಿದೆ. 1975 ರಲ್ಲಿ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿದಾಗ ಸ್ವತಂತ್ರ ಸಂಗ್ರಾಮದ ಕಲಿಗಳನೇಕರು ಬದುಕಿದ್ದರು. ತುರ್ತು ಪರಿಸ್ಥಿತಿ ಹೇರಿಕೆಯಾದಾಗ ಅವರಿಗೆಲ್ಲ ಖಂಡಿತವಾಗಿಯೂ ತಾತ್ವಿಕ ಹೃದಯಾಘಾತವಾಗಿರುತ್ತದೆ. ಸ್ವತಂತ್ರ ಭಾರತದಲ್ಲಿ ಇಂಥ ದುಸ್ಥಿತಿ ಬಂದೊದಗಬಹುದು ಎಂಬ ಕಲ್ಪನೆಯೂ ಅವರಿಗಿರಲಿಲ್ಲ. ಎರಡು ವರ್ಷಗಳ ಕರಾಳ ದಿನಗಳ ಪುಟಗಳನ್ನು ಅವಲೋಕಿಸಿದರೆ ತಳಮಳ ಉಂಟಾಗುತ್ತದೆ.
ಅಂದು ಘೋಷಿತ ತುರ್ತು ಪರಿಸ್ಥಿತಿ ಇದ್ದರೆ ಪ್ರಸ್ತುತ ಅಘೋಷಿತ ತುರ್ತು ಪರಿಸ್ಥಿತಿ ಉಂಟಾಗಿದೆ. 74 ವರ್ಷದ ಗಾಂಧಿವಾದಿ ಅಣ್ಣಾ ಹಜಾರೆಯವರನ್ನು ಅಕ್ರಮವಾಗಿ ಬಂಧಿಸುವುದರ ಮೂಲಕ ದೆಹಲಿ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರ ಇಂಥ ಸ್ಥಿತಿ ಸೃಷ್ಟಿಸಿವೆ. ಇಂಥ ಹೇಯ ಕೃತ್ಯವನ್ನು ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಗೃಹ ಸಚಿವ ಪಿ. ಚಿದಂಬರಂ ಸಮರ್ಥಿಸಿರುವ ರೀತಿ ನೋಡಿದರೆ ರಾಷ್ಟ್ರಕ್ಕೆ ಇನ್ನೆಂಥ ದುಸ್ಥಿತಿ ಬರಬಹುದೋ ಎಂಬ ಆತಂಕ ಉಂಟಾಗಿದೆ. ಭಾರತದ ಆಡಳಿತ ಚುಕ್ಕಾಣಿ ಹಿಡಿದಿರುವ ಇವರಿಬ್ಬರೂ ಏನೇ ಸಮರ್ಥನೆ ನೀಡಿದರೂ ಅಕ್ರಮ ಬಂಧನದ ಹೊಣೆಗಾರಿಕೆ ಅವರ ಹೆಗಲೇರಿದೆ. ತಮ್ಮ ರಾಜಕೀಯ ನಡೆಗಾಗಿ ದೆಹಲಿ ಪೋಲಿಸರನ್ನು ದಾಳಗಳಾಗಿ ಬಳಸಿಕೊಂಡಿರುವ ಇವರು ದೇಶದ್ಯಂತ ಆಕ್ರೋಶ ಭುಗಿಲೆದ್ದರೆ ಮತ್ತೆ ‘ ಎಮರ್ಜೆನ್ಸಿ’ ಹೇರಲು ಹಿಂಜರಿಯುವಂಥವರಲ್ಲ ಎನಿಸುತ್ತದೆ. ಇದಕ್ಕೆ ಪಾರ್ಲಿಮೆಂಟಿನಲ್ಲಿ ಇವರಿಬ್ಬರೂ ನೀಡಿರುವ ಹೇಳಿಕೆಗಳೇ ಮುನ್ನುಡಿಯೆನೋ ಎನಿಸುತ್ತದೆ.
ಅಣ್ಣಾ ಹಜಾರೆ ಅವರ ನೇತೃತ್ವದಲ್ಲಿ ರೂಪುಗೊಂಡ ‘ಜನ ಲೋಕಪಾಲ್’ ಮಸೂದೆ ಬಗ್ಗೆ ಕೇಂದ್ರ ಸರಕಾರದಲ್ಲಿ ವಿಭಿನ್ನ ಅಭಿಪ್ರಾಯವಿದೆ ನಿಜ. (ಹೆಚ್ಚು ಕಡಿಮೆ ಇದೇ ಮನೋಭಾವ ಬಿಜೆಪಿಯೂ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳಿಗೂ ಇದೆ.) ಭಿನ್ನಾಭಿಪ್ರಾಯವಿದೆ ಎಂಬ ಕಾರಣಕ್ಕೆ ಹೋರಾಟದ ಧ್ವನಿಯನ್ನೇ ಅಡಗಿಸಲು ಯತ್ನಿಸುವುದು ಸರಿಯೆ…? ಧರಣಿ ಸತ್ಯಾಗ್ರಹ ನಡೆಸುತ್ತಿದ್ದ ಬಾಬಾ ರಾಮ್ ದೇವ್ ಶಿಬಿರದ ಮೇಲೆ ರಾತ್ರೋರಾತ್ರಿ ದಾಳಿ ನಡೆಸಿಯೂ ದಕ್ಕಿಸಿಕೊಂಡ ಯಶಸ್ಸು(?) ಕೇಂದ್ರ ಸರಕಾರದ ತಲೆ ತಿರುಗಿಸಿದೆಯೆ…? ಈ ಘಟನೆ ನಂತರ ರಾಮದೇವ್ ಧ್ವನಿ ಉಡುಗಿ ಹೋಯಿತು. ಅಣ್ಣಾ ಹಜಾರೆ ಅವರನ್ನೂ ಬಂಧಿಸಿದರೆ ಮತ್ತೆ ಧ್ವನಿಯೇ ಏಳುವುದಿಲ್ಲ ಎಂಬ ಲೆಕ್ಕಾಚಾರ ಈ ಘಟನೆ ಹಿಂದೆ ಇದೆ.
ಪಾರ್ಲಿಮೆಂಟಿನ ಮುಂದೆ ಅಧಿಕಾರಸ್ಥ ರಾಜಕಾರಣಿಗಳು ತಮ್ಮ ಮೂಗಿನ ನೇರಕ್ಕೆ ತಯಾರಿಸಿದ ಮಸೂದೆ ಮಂಡಿಸುವುದಾದರೆ ಅಣ್ಣಾ ಹಜಾರೆ ಅವರ ನೇತೃತ್ವದಲ್ಲಿ ಸಮಿತಿ ರಚಿಸಿ ವರದಿ ಪಡೆಯುವ ನಾಟಕ ಆಡುವ ಅಗತ್ಯವಾದರೂ ಏನಿತು. ನಾಗರಿಕ ಸಮಿತಿಯೊಂದಿಗೆ ಸಭೆ ನಡೆಸಿ ಚರ್ಚಿಸಿಸುವ ಹುಸಿ ಪ್ರಹಸನಗಳನ್ನು ಯಾಕೆ ಪ್ರದರ್ಶಿಸಬೇಕಿತ್ತು….? ನಮ್ಮದೇ ಮಸೂದೆ ಮಂಡಿಸುವವರು ನಾವು ಎಂದು ಮುಂಚಿತವಾಗಿಯೇ ಹೇಳಬಹುದಿತ್ತಲ್ಲವೇ…
‘ಬೀಸುವ ದೊಣ್ಣೆ ತಪ್ಪಿಸಿಕೊಂಡರೆ ಸಾವಿರ ವರ್ಷ ಆಯಸ್ಸು’ ಎಂಬ ಮನೋಭಾವದಿಂದಲೇ ಕೇಂದ್ರ ಸರಕಾರ ಇಂಥ ಹುನ್ನಾರಗಳನ್ನು ಹೂಡಿದೆ ಎಂಬುದು ಸ್ಪಷ್ಟ. ಆದರೆ ಮತ್ತೆ ಆಗ್ರಹವೆಂಬ ಅಸಂಖ್ಯಾತ ದೊಣ್ಣೆಗಳನ್ನು ಬೀಸಲು ರಾಷ್ಟ್ರದ್ಯಂತ ನಾಗರಿಕ ಪಡೆಯೇ ಸಿದ್ದಗೊಂಡಿದೆ. ಈ ಬಾರಿಯೂ ಬಚಾವ್ ಆಗಲು ಸಾಧ್ಯವಿದೆಯೇ…..
No comments:
Post a Comment