• ಮುಖಪುಟ
  • ಸಿನಿಮಾ
  • ದೇಗುಲ ಸರಣಿ
  • ರಾಜಕೀಯ
  • ಭಾಷೆ
  • ಸಾಹಿತ್ಯ
  • ಪರಿಸರ
  • ರಂಗ ಕಲೆ
  • ಮಾಧ್ಯಮ
  • ಪ್ರವಾಸ
  • ಜೀವನಶೈಲಿ
  • ನನ್ನ ಬಗ್ಗೆ
  • ಸಂಪರ್ಕಿಸಿ

ಕಾಸರಗೋಡು ಕನ್ನಡಿಗರ ಹುದ್ದೆ ಕಸಿಯಲು ಹುನ್ನಾರ…!..?

ಇತ್ತೀಚೆಗಷ್ಟೆ ಕಾಸರಗೋಡು ಕನ್ನಡಿಗರ ಹಿತರಕ್ಷಣಾ ಸಮಿತಿ ನಿಯೋಗದವರು ಕೇರಳ ಮುಖ್ಯಮಂತ್ರಿಯನ್ನು ಭೇಟಿಯಾಗಿದ್ದರು. ಶಿಕ್ಷಣ ಇಲಾಖೆ ಸಚಿವ ಮತ್ತು ಕಾರ್ಯದರ್ಶಿಯನ್ನು ಕಂಡಿದ್ದರು. ಇವರೆಲ್ಲರಿಂದ ಮಲೆಯಾಳ ಹೇರಿಕೆಯಾಗುವುದಿಲ್ಲವೆಂಬ ಭರವಸೆ ಹೊತ್ತು ಹಿಂದಿರುಗಿದ್ದರು. ಆದರೆ ನಡೆಯುತ್ತಿರುವುದೆ ಬೇರೆ. ಕಾಸರಗೋಡಿನಿಂದ ಕನ್ನಡ ಸಂಸ್ಕೃತಿ ಹೊರದೂಡಲು ಒಂದಲ್ಲ ಒಂದು ತಂತ್ರ ಮಾಡುತ್ತಲೇ ಇರುವ ಕೇರಳ ಸರಕಾರ ಈಗ ಮತ್ತೊಂದು ಕುತಂತ್ರ ಮಾಡಿದೆ. ಕಾಸರಗೋಡು ಕನ್ನಡಿಗರ ಹುದ್ದೆಗಳನ್ನು ಕಸಿಯುವ ಹುನ್ನಾರ ನಡೆಸಿದೆ.
ಕನ್ನಡ ಶಾಲೆಗಳಲ್ಲಿ ಮಲೆಯಾಳಮ್ ಕಡ್ಡಾಯ ಹೇರಿಕೆ ಮಾಡದಂತೆ ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರಿಗೆ ಆಗ್ರಹ ಪತ್ರ ಸಲ್ಲಿಸುತ್ತಿರುವ ಕಾಸರಗೋಡು ಜಿಲ್ಲಾ ಕನ್ನಡ ಹಿತರಕ್ಷಣಾ ಸಮಿತಿ ನಿಯೋಗ
ಭಾಷಾವಾರು ಪ್ರಾಂತ್ಯ ರಚನೆಯಾದ ಸಂದರ್ಭದಲ್ಲಿ ಅನ್ಯಾಯವಾಗಿ ಕೇರಳಕ್ಕೆ ಕನ್ನಡ ಸಂಸ್ಕೃತಿ ಪ್ರದೇಶ ಕಾಸರಗೋಡು ಸೇರಿತು. ಈ ನಂತರ ಭಾಷಾ ಅಲ್ಪಸಂಖ್ಯಾತ ಪ್ರದೇಶದ ಹಿತದೃಷ್ಟಿಯಿಂದ ಕೆಲವಾರು ನಿಯಮಗಳು ರಚಿಸಲ್ಪಟ್ಟವು. ಕನ್ನಡ ಶಾಲೆ-ಕಾಲೇಜುಗಳನ್ನು ಉಳಿಸಿಕೊಳ್ಳುವುದು, ಪ್ರತಿಯೊಂದು ಸರಕಾರಿ-ಅರೆ ಸರಕಾರಿ ಕಛೇರಿಗಳಲ್ಲಿ, ಸ್ಥಳೀಯ ಸಂಸ್ಥೆ(ನಗರ ಸಭೆ-ಗ್ರಾಮ ಸಭೆ-ಪಟ್ಟಣ ಪಂಚಾಯತ್ ) ಮತ್ತು ಸರಕಾರಿ ಅನುದಾನಿತ ಸಂಘ-ಸಂಸ್ಥೆಗಳಲ್ಲಿ ಕನ್ನಡ ಬಲ್ಲವರನ್ನು ನೇಮಿಸುವುದು. 
ಭಾಷಾವಾರು ಪ್ರಾಂತ್ಯ ರಚನೆ ಸಂದರ್ಭದಲ್ಲಿ ಕಾಸರಗೋಡಿನ ಪ್ರತಿ ಸರಕಾರಿ ಕಚೇರಿಗಳಲ್ಲಿ ಕನ್ನಡಿಗರು ಬಹುಸಂಖ್ಯಾತರಾಗಿದ್ದರು. ಇವರಲ್ಲಿ ಹಲವರನ್ನು ದುರುದ್ದೇಶಪೂರ್ವಕವಾಗಿ ವರ್ಗಾವಣೆ ಮಾಡಲಾಯಿತು. ಇನ್ನು ಉಳಿದವರು ವಯೋ ನಿವೃತ್ತಿಯಾದರು. ಕಣ್ಣೂರು ಜಿಲ್ಲೆಗೆ ಸೇರಿದ್ದ ಕಾಸರಗೋಡನ್ನು ಜಿಲ್ಲೆಯನ್ನಾಗಿ ರಚನೆ ಮಾಡಲಾಯಿತು. ಇದರಿಂದ ಈ ಪ್ರದೇಶದ ಅಭಿವೃದ್ಧಿಯಾಗುತ್ತದೆ ಎಂದು ನಂಬಿಸಲಾಯಿತು. ಆದರೆ ಜಿಲ್ಲಾ ರಚನೆ ಮಾಡಿದ ಉದ್ದೇಶವೇ ಬೇರೆಯಾಗಿತ್ತು. ಜಿಲ್ಲಾ ಕೇಂದ್ರಕ್ಕೆ ಹೆಚ್ಚು ಕಛೇರಿಗಳು ಬರುತ್ತವೆ. ಹುದ್ದೆಗಳು ಜಾಸ್ತಿಯಾಗುತ್ತವೆ. ಇಲ್ಲಿಗೆ ಮಲೆಯಾಳಿಗರನ್ನು ತುಂಬಬಹುದು. ಜಿಲ್ಲಾ ಕೇಂದ್ರವಾದ ನಂತರ ವ್ಯವಹಾರಗಳು ಹೆಚ್ಚುತ್ತವೆ. ಸಹಜವಾಗಿಯೇ ನೆರೆ-ಹೊರೆಯ ಮಲೆಯಾಳಿ ಭಾಷಿಕರು ಇತ್ತ ಆಕರ್ಷಿತವಾಗುತ್ತಾರೆ ಎಂಬುದಾಗಿತ್ತು. ಇದರಂತೆಯೆ ಆಯಿತು. ಸಂಪದ್ಭರಿತ ನಾಡಾದ ಕಾಸರಗೋಡಿಗೆ ಮಲೆಯಾಳ ಭಾಷಿಕರು ಪ್ರವಾಹದಂತೆ ವಲಸೆ ಬರತೊಡಗಿದರು. ಮಲೆಯಾಳೀಕರಣ ಸದ್ದಿಲ್ಲದೇ ನಡೆಯತೊಡಗಿತು.
ಕಾಸರಗೋಡು ಜಿಲ್ಲಾ ಕಚೇರಿ ಸಮುಚ್ಛಯ
ನಿಯಮದಂತೆ ಜಿಲ್ಲಾಧಿಕಾರಿ-ತಹಸಿಲ್ದಾರ್-ಠಾಣಾಧಿಕಾರಿ-ಗ್ರಾಮ ಲೆಕ್ಕಿಗ ಹುದ್ದೆಗಳಿಗೆ ಕನ್ನಡ ಬಲ್ಲಂಥವರೆ ನೇಮಕವಾಗಬೇಕು. ಈ ರೀತಿ ಮಾಡಿದರೆ ಮಲೆಯಾಳೀಕರಣ ಆಗುವುದಿಲ್ಲವೆಂದುಕೊಂಡ ಕೇರಳ ಸರಕಾರ ಇಂಥ ಹುದ್ದೆಗಳಿಗೆ ಕನ್ನಡದ ಗಂಧ-ಗಾಳಿಯೂ ಗೊತ್ತಿಲ್ಲದವರನ್ನು ನೇಮಿಸಿತು. ರಾಜ್ಯ ಸರಕಾರದ 44 ಕ್ಕೂ ಹೆಚ್ಚು ಇಲಾಖೆಗಳ ಕಛೇರಿಗಳು ಕಾಸರಗೋಡು ಜಿಲ್ಲಾ ಕೇಂದ್ರ ಮತ್ತು ತಾಲೂಕು ಕೇಂದ್ರಗಳಲ್ಲಿವೆ. ಇಲ್ಲೆಲ್ಲ ಆಯಾ ಕಚೇರಿಯ ವಹಿವಾಟಿಗೆ ಅನುಗುಣವಾಗಿ ಕನ್ನಡಿಗರನ್ನೇ ದ್ವಿತೀಯ ದರ್ಜೆ ಸಹಾಯಕ(ಗುಮಾಸ್ತರು)ರ ಹುದ್ದೆಗಳಿಗೆ ನೇಮಕಾತಿ ಆಗಬೇಕು. ಆದರೆ ಇಂಥ ಕಾರ್ಯವನ್ನು ಕೇರಳ ಸರಕಾರ ಯೋಜಿತವಾಗಿಯೆ ಮಾಡುತ್ತಿಲ್ಲ.
ಇಂದು ಎಲ್ಲ ಸರಕಾರಿ ಕಚೇರಿಗಳಲ್ಲಿ ಕನ್ನಡ ಬಲ್ಲ ಹುದ್ದೆಗಳು ಖಾಲಿ ಇವೆ. ಇಂಥ ಹುದ್ದೆಗಳಿಗೆ ಅರ್ಜಿ ಕರೆದು ಅರ್ಹರನ್ನು ನೇಮಕ ಮಾಡಿಕೊಳ್ಳಬೇಕು. ಇಂಥ ನೂರಕ್ಕೂ ಹೆಚ್ಚು ಹುದ್ದೆಗಳಿಗೆ ಕೇರಳ ರಾಜ್ಯ ಲೋಕಸೇವಾ ಆಯೋಗ ಅರ್ಜಿಯನ್ನೇನೋ ಕರೆದಿದೆ. ಆದರೆ ಇಲ್ಲಿಯೂ ಕುತಂತ್ರ ಮಾಡಲಾಗಿದೆ. ‘ಕನ್ನಡ ಬಲ್ಲ’ ಹುದ್ದೆಗಳನ್ನು ‘ಕನ್ನಡ-ಮಲೆಯಾಳ ಬಲ್ಲ’ ಹುದ್ದೆಗಳಾಗಿ ಮಾರ್ಪಾಡಿಸಲಾಗಿದೆ. ವಿಷಯದ ಆಳ ಗೊತ್ತಿಲ್ಲದವರಿಗೆ ಅದು ಕೇರಳ ರಾಜ್ಯ ಹೀಗೆ ಮಾಡಿದರೆ ತಪ್ಪೇನು ಎಂದು ಅನಿಸಬಹುದು. ಆದರೆ ಪ್ರತಿಯೊಂದು ಸರಕಾರಿ ಕಚೇರಿಗಳಲ್ಲಿ ಕೇರಳ ಮಾತೃಭಾಷೆ ಮಂದಿ ಬಹುಸಂಖ್ಯಾತವಾಗಿದ್ದಾರೆ. ಇಲ್ಲಿಗೆ ತಮ್ಮ ತಮ್ಮ ವ್ಯವಹಾರಗಳ ಸಲುವಾಗಿ ತೆರಳುವ ಕನ್ನಡಿಗರು ಮಲೆಯಾಳ ಗೊತ್ತಿಲ್ಲದೇ ಪಾಡು ಪಡಬೇಕಾಗುತ್ತದೆ. ಈ ದೃಷ್ಟಿಯನ್ನಿಟ್ಟುಕೊಂಡೆ ಪ್ರತಿಯೊಂದು ಸರಕಾರಿ ಕಚೇರಿಯಲ್ಲಿ ಕನ್ನಡ ಬಲ್ಲಂಥವರನ್ನು ನೇಮಕ ಮಾಡಿಕೊಳ್ಳಬೇಕೆಂಬ ನಿಯಮ ಕನ್ನಡಿಗರ ಒತ್ತಾಸೆಯಿಂದಲೇ ರಚನೆಯಾಗಿತ್ತು. ಇಂಥ ನಿಯಮಗಳ ಬಗ್ಗೆ ಕೇರಳ ಸರಕಾರಕ್ಕೆ ಜಾಣ ಮರೆವು !
ತಿರುವಂತನಪುರದಲ್ಲಿರುವ ಕೇರಳ ಸರಕಾರದ ಸಚಿವಾಲಯ
ಇಂಥ ನೂರಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಗೆ 2011ರ ಅಕ್ಟೋಬರ್ ನಲ್ಲಿ ಲಿಖಿತ ಪರಿಕ್ಷೆ ನಡೆಯಲಿದೆ.  'ಪರೀಕ್ಷಾ ಅಭ್ಯರ್ಥಿಗಳು ನೂರು ಅಂಕಗಳಿರುವ ಪ್ರಶ್ನೆ ಪತ್ರಿಕೆಗಳಿಗೆ ಉತ್ತರ ಬರಿಯಬೇಕು. ಇದರಲ್ಲಿ 20 ಅಂಕಗಳನ್ನು ಇಂಗ್ಲೀಷಿನಿಂದ ಮಲೆಯಾಳಕ್ಕೆ ಭಾಷಾಂತರಕ್ಕಾಗಿ, 20 ಅಂಕಗಳನ್ನು ಇಂಗ್ಲೀಷಿನಿಂದ ಕನ್ನಡಕ್ಕೆ ಭಾಷಾಂತರ ಮಾಡುವುದಕ್ಕಾಗಿ ನಿಗದಿಪಡಿಸಲಾಗಿದೆ. ಇನ್ನುಳಿದ 60 ಅಂಕಗಳಿಗಿನ ಪ್ರಶ್ನೆಗಳೆಲ್ಲವೂ ಇಂಗ್ಲೀಷ್ ಮತ್ತು ಮಲೆಯಾಳದಲ್ಲಿರುತ್ತವೆ’ ಎನ್ನುತ್ತಾರೆ ಬದಿಯಡ್ಕದ ‘ಬಲ್ಪು’ ಸಂಘಟನೆ ಸಂಚಾಲಕ ಸುಂದರ ಬಾರಡ್ಕ.
‘ಬಲ್ಪು’ ಸಂಘಟನೆ ಸಂಚಾಲಕ ಸುಂದರ ಬಾರಡ್ಕ.
 ವಿಷಯ ಹೀಗಿರುವುದರಿಂದಲೇ ಅತ್ಯಧಿಕ ಸಂಖ್ಯೆಯಲ್ಲಿ ಮಲೆಯಾಳಿ ಮಾತೃಭಾಷಿಕರು ಅರ್ಜಿ ಸಲ್ಲಿಸಿದ್ದಾರೆ. ಈ ಹುದ್ದೆಗಳೆಲ್ಲ ನಿರಾಯಾಸವಾಗಿ ಇವರ ಪಾಲಾಗುತ್ತವೆ. ಹೀಗೆ ಆಗಲಿ. ಸರಕಾರಿ ಕಚೇರಿಗಳಿಗೆ ಬರುವ ಕಾಸರಗೋಡು ಕನ್ನಡಿಗರು ಮಲೆಯಾಳ ಗೊತ್ತಿಲ್ಲದ ಕಾರಣ ವಿಲವಿಲನೆ ಒದ್ದಾಡಲಿ. ಹೀಗೆ ಮಾಡಿದರೆ ಅವರು ಮಲೆಯಾಳವನ್ನೆ ಒಪ್ಪಿಕೊಳ್ಳುವ ಸ್ಥಿತಿಗೆ ಬರುತ್ತಾರೆ. ಆಗ ನಿರಾಯಾಸವಾಗಿ ಕನ್ನಡ ಸಂಸ್ಕೃತಿಯನ್ನು ಕಾಸರಗೋಡಿನಿಂದ ಹೊರದಬ್ಬಬಹುದು ಎಂಬುದು ಕೇರಳ ಸರಕಾರದ ಹುನ್ನಾರ.
ಕಾಸರಗೋಡು ಜಿಲ್ಲಾ ಸರಕಾರಿ ಕಚೇರಿಗಳಲ್ಲಿ ಎಷ್ಟು 'ಕನ್ನಡ ಬಲ್ಲ' ಹುದ್ದೆಗಳಿವೆ ಎಂಬ ವಿವರ.
 ‘ಈಗಾಗಲೇ ಕಾಸರಗೋಡಿನ ಸರಕಾರಿ ಕಚೇರಿಗಳಲ್ಲಿ ಕನ್ನಡದಲ್ಲಿ ಯಾವುದೇ ಆದೇಶ-ನಮೂನೆಗಳು ದೊರೆಯುತ್ತಿಲ್ಲ. ಇದರ ಹಿಂದಿನ ಉದ್ದೇಶ ಸ್ಪಷ್ಟವಾಗಿದೆ. ಮಲೆಯಾಳ ಕಲಿಯದಿದ್ದರೆ ಕಾಸರಗೋಡಿನಲ್ಲಿ ಬದುಕಿಲ್ಲ ಎಂಬ ಪರಿಸ್ಥಿತಿ ನಿರ್ಮಾಣ ಮಾಡುವುದೇ ಕೇರಳ ಸರಕಾರದ ಆಲೋಚನೆಯಾಗಿದೆ’ ಹೀಗೆನ್ನುತ್ತಾರೆ ನರೇಶ್. ಇವರು ಕಾಸರಗೋಡು ಜಿಲ್ಲೆ, ಮುಳ್ಳೇರಿಯಾದಲ್ಲಿ ಖ್ಯಾತ ಆಯುರ್ವೇದ ವೈದ್ಯರು.
 
‘ಕನ್ನಡ ಬಲ್ಲ’ ಹುದ್ದೆಗಳನ್ನು ಕನ್ನಡ-ಮಲೆಯಾಳಮ್’ ಬಲ್ಲ ಹುದ್ದೆಗಳಾಗಿ ಮಾರ್ಪಾಡು ಮಾಡಿರುವುದು ನಿಯಮ ಬಾಹಿರ ಮತ್ತು ಭಾಷಾ ಅನೈತಿಕತೆ ಕೂಡ. ಏಕೆಂದರೆ ಕಾಸರಗೋಡು ಕನ್ನಡಿಗರು ಮಲೆಯಾಳ ಓದಲು-ಬರೆಯಲು ಕಲಿತವರಲ್ಲ. ಹೀಗೆ ಕಲಿಯಬೇಕಾದ ಅವಶ್ಯಕತೆಯೂ ಇಲ್ಲ. ಕಾಸರಗೋಡು ಗ್ರಾಮೀಣ ಪ್ರದೇಶದವರ ಅನುಕೂಲಕ್ಕಾಗಿ  ಸರಕಾರಿ ಕಚೇರಿಗಳಲ್ಲಿ ‘ಕನ್ನಡ ಬಲ್ಲ’ ಹುದ್ದೆಗಳಿರಬೇಕಿತ್ತು. ಇನ್ನು ಮುಂದೆ ಇವು ಇರುವುದಿಲ್ಲ. ಹೀಗಾದರೆ ಕಾಸರಗೋಡಿನ ಬಹುಸಂಖ್ಯಾತ ಕನ್ನಡಿಗ ರೈತಾಪಿ ಬಂಧುಗಳ ಕಥೆಯೇನು…?

ಕೇರಳ ಸರಕಾರ ಮತ್ತು ರಾಜ್ಯ ಲೋಕಸೇವಾ ಆಯೋಗದ ಇಂಥ ದುರುದ್ದೇಶಪೂರಿತ ಕ್ರಮದ ವಿರುದ್ಧ ಹೈಕೋರ್ಟಿನಲ್ಲಿ ರಿಟ್ ಅರ್ಜಿ ಹಾಕುವ ಯೋಚನೆ ಬಲ್ಪು ಸಂಘಟನೆಯವರಿಗಿದೆ. ಆದರೆ ಇಷ್ಟೊಂದು ಆರ್ಥಿಕ ಅನುಕೂಲ ಈ ಸಂಘಟನೆಗಿಲ್ಲ. ಆದ್ದರಿಂದ ಕಾಸರಗೋಡಿನ ವಿವಿಧ ಸಂಘಟನೆಗಳವರು  ಸೇರಿ ರಚಿಸಿಕೊಂಡಿರುವ ‘ ಕಾಸರಗೋಡು ಜಿಲ್ಲಾ ಕನ್ನಡ ಹಿತರಕ್ಷಣಾ ಸಮಿತಿ’ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕಿದೆ. ಕೇರಳ ಮುಖ್ಯಮಂತ್ರಿ ನೀಡಿರುವುದು ಹುಸಿ ಭರವಸೆ ಎಂದರಿತು ಕಾನೂನಾತ್ಮಕ ಹೋರಾಟಕ್ಕೆ ಮುಂದಾಗಬೇಕಾಗಿದೆ. ಈ ನಿಟ್ಟಿನಲ್ಲಿ ಬೇಕಾದ ನೆರವು ನೀಡುವ ಮನಸು ಕರ್ನಾಟಕದಲ್ಲಿರುವ ಕನ್ನಡಿಗರಿಗೆ ಸದಾ ಇದೆ. ಈ ಸಂದರ್ಭದಲ್ಲಿ ಸುಮ್ಮನೆ ಇದ್ದರೆ ಪರಿಸ್ಥಿತಿ ಕೈ ಮೀರಿ ಹೋಗುತ್ತದೆ. ಇದೇ ಅಕ್ಟೋಬರ್ ನಲ್ಲಿ ನಡೆಯಲಿರುವ ಪರೀಕ್ಷೆಗೆ ತಡೆಯಾಜ್ಞೆ ತರಲು ನ್ಯಾಯಾಲಯದ ಮೊರೆ ಹೋಗಲೇಬೇಕಿದೆ. ಇಲ್ಲವೇ ಕೇರಳ ಸರಕಾರದಿಂದ ಈ ಸಂಬಂಧ ಸೂಕ್ತ ಆದೇಶ ಪಡೆಯಲು ಒತ್ತಡ ತರಬೇಕಾಗಿದೆ. ತಡ ಮಾಡುವಂತಿಲ್ಲ.

ಈಗಾಗಲೇ ಕನ್ನಡ ಶಾಲೆಗಳಲ್ಲಿ ಕನ್ನಡದ ಗಂಧವೇ ಗೊತ್ತಿಲ್ಲದ ಮಲೆಯಾಳಿ ಅಧ್ಯಾಪಕರುಗಳನ್ನು ಕೇರಳ ಸರಕಾರ ನೇಮಕ ಮಾಡಿದೆ. ಗ್ರಾಮಗಳಿಗೆ ಮಲೆಯಾಳಿ ಹೆಸರುಗಳನ್ನಿಡುವ  ಚಾಳಿ ಮುಂದುವರಿಸುತ್ತಿದೆ. ಈ ಬಗ್ಗೆ ವಿವರವಾಗಿ ಬರಿಯುತ್ತೇನೆ.

5 comments:

  1. ಕನ್ನಡ ಚಳವಳಿ ಸಂಘಟನೆಗಳ ಮೌನ ಅವತಾರ ನೋಡಿ ನನಗೆ ಒಂದು ರೀತಿಯ ವಾಕರಿಕೆ ಬರುತ್ತಿದೆ. ಕೇವಲ ಕಾಸರಗೋಡು ಕನ್ನಡಿಗರಿಂದ ಮಾತ್ರ ಕಾಸರಗೋಡು ಉಳಿಯುವುದಿಲ್ಲ. ನಾವಿಲ್ಲಿ ಕುಳಿತು ಕೀ ಬೋರ್ಡ್ ಕುಟ್ಟಿ ಕನ್ನಡ ಉಳಿಸಿ ಅಂದರೆ ನಡೆಯುವ ಕಾರ್ಯವಲ್ಲ. ಕಾಸರಗೋಡನ್ನು ಸಂಪೂರ್ಣವಾಗಿ ಕೇರಳದ ತೆಕ್ಕೆಗೆ ತೆಗೆದುಕೊಂಡರು ಅಂದರೆ ಹುದ್ದೆ ಮಾತ್ರವಲ್ಲ ಎಲ್ಲವನ್ನೂ ತೆಗೆದುಕೊಂಡರು ಅಂತ ಅರ್ಥ. ಕನ್ನಡ ಚಳವಳಿ ಸಂಘಟನೆಗಳು ಕಾರ್ಯ ತತ್ಪರರಾಗುವ ಅವಶ್ಯಕತೆಯಿದೆ. ಅದು ತುರ್ತಾಗಿ.. ಸಮಯ ಕಳೆದರೆ ಗಂಡಾಂತರ ಖಂಡಿತ. ಇದಕ್ಕೊಂದು ಪರಿಹಾರ ಸಿಗಲಿಲ್ಲ ಅಂದರೆ ನಾವೆಲ್ಲಾ ಇತರ ಭಾಷೆಗಳ ಗುಲಾಮರಾಗುವುದು ಖಂಡಿತಾ. ನಮ್ಮ ಕರ್ನಾಟಕ ಸರಕಾರ ಹಣ ಮಾಡುವು ಭರದಲ್ಲಿ ಕನ್ನಡದ ಮಾನ ಹರಾಜಾಗುವುದು ಅವರಿಗೆ ಕಾಣಿಸುವುದಿಲ್ಲ. ರಾಜಕಾರಣಿಗಳು ಮಾನ ಬಿಟ್ಟವರು. ಆದ್ದರಿಂದ ಇಂತದ್ದೆಲ್ಲ ನಡೆಯುತ್ತಿದೆ.

    ReplyDelete
  2. ಸಂದರ್ಭೋಚಿತ ಲೇಖನ. ಈ ಲೇಖನ ಕಾಸರಗೋಡು ಕನ್ನಡಿಗರೆಲ್ಲರ ಕಣ್ಣು ತೆರೆಸಿ ಹೋರಾಟಕ್ಕೆ ಪ್ರೇರೇಪಿಸಬಹುದು. ನಿಮ್ಮ ಲೇಖನಗಳನ್ನು ಸ್ಥಳೀಯ ಪತ್ರಿಕೆಗಳಿಗೆ ಮತ್ತು ಕನ್ನಡಾಭಿಮಾನಿಗಳಿಗೆ forward ಮಾಡಬಹುದೇ?

    ReplyDelete
  3. 'ವರದಿಗಾರ' ದಲ್ಲಿರುವ ಕನ್ನಡ ಸಂಬಂಧಿ ಲೇಖನಗಳನ್ನು ಇತರೆ ಪತ್ರಿಕೆ/ವೆಬ್ ಸೈಟ್ ಗಳಲ್ಲಿ ಪ್ರಕಟಿಸಲು ನನ್ನ ಒಪ್ಪಿಗೆಯಿದೆ.

    ReplyDelete
  4. che nammalli kannadabhimana sattu hogide ansutte. ello obbabaru..gatti yagi horadta idare..adu aamlajanaka kotta haage sannadagi usiraduttide.

    ReplyDelete
  5. Lekhana uttamavagide.samasyegalu sariyagiye helelpattide. adre, kasaragodina knnadigaru iddabadda shakti upayogisi nadesuva horatakke jayavendu doretitu. magu innobbarinda anyayavagi hodeta tinnuvaga, hettabbeya rakshane mukhya allave? rajakaranada kachata mugidu inyavaga.....!?

    ReplyDelete