ಭಾರತೀಯ ಸಂಸತ್ತಿನ ಇತಿಹಾಸದಲ್ಲಿ ಆಗಸ್ಟ್ 27, 2011 ಅವಿಸ್ಮರಣೀಯ ದಿನ. ‘ಲೋಕಪಾಲ್’’ ಮಸೂದೆ ಬಗ್ಗೆ ಸಂಸತ್ತಿನ ಉಭಯ ಸದಸಗಳಲ್ಲಿಯೂ ಅತ್ಯುತ್ತಮ ಚರ್ಚೆಯಾಯಿತು. ಮಾತನಾಡಿದ ಪ್ರತಿಯೊಬ್ಬರು ಸಮಸ್ಯೆಯ ಮಗ್ಗಲುಗಳ ಮೇಲೆ ತಮ್ಮದೇ ವಿಚಾರಗಳ ಬೆಳಕು ಚೆಲ್ಲಿದರು. ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಸತ್ತು ಪರಮೊಚ್ಚ’ ಎನ್ನುವುದನ್ನು ಮನಗಾಣಿಸಿದರು. ತಕರಾರುಗಳಿಲ್ಲದೆ ಮೂರು ಪ್ರಮುಖ ಸಂಗತಿಗಳನ್ನು ಅಂಗೀಕರಿಸಿದ್ದು ವಿಶೇಷ. ಈ ಮೂಲಕ ಭಾರತೀಯ ಸಂಸತ್ತು ಸಾಮಾಜಿಕ ಪ್ರಜ್ಞೆಯನ್ನು ಮೆರೆದಿದೆ. ಇವೆಲ್ಲದರ ಜೊತೆಗೆ 74 ವರ್ಷದ ಹಿರಿಯ ಜೀವ ಅಣ್ಣಾ ಹಜಾರೆ ಅನಿರ್ದಿಷ್ಟ ಅವಧಿ ಉಪವಾಸ ಸತ್ಯಾಗ್ರಹ ಮುಕ್ತಾಯಗೊಳಿಸುತ್ತಿರುವುದು ಸಹ ಸಂತಸದ ಸಂಗತಿ
ಸಂಸತ್ತಿನಲ್ಲಿ ಇಂದು ‘ಲೋಕಪಾಲ್’ ಮಸೂದೆ ಮೇಲೆ ಚರ್ಚೆ ಆರಂಭವಾಗುವಗುವ ಮುನ್ನ ಆರೋಪ-ಪ್ರತ್ಯಾರೋಪಗಳ ಸುರಿಮಳೆಯಿಂದ ಚರ್ಚೆ ದಿಕ್ಕು ತಪ್ಪಬಹುದೆ ಎಂಬ ಆತಂಕವಿತ್ತು. ವಿಪಕ್ಷ ನಾಯಕಿ ಸುಷ್ಮಾ ಸ್ವರಾಜ್ ಮಾತನಾಡುವಾಗ ಒಂದು ಹಂತದಲ್ಲಿ ಸಿ.ಬಿ.ಐ. ಅನ್ನು ಕಾಂಗ್ರೆಸ್ ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪ ಮಾಡಿದಾಗ ಓ ಇನ್ನು ವಿಷಯ ಹಳಿ ತಪ್ಪಬಹುದು ಎನಿಸಿತು. ಆದರೆ ಇದಕ್ಕೆ ಒಟ್ಟು ಸದನ ಅವಕಾಶ ನೀಡಲಿಲ್ಲ. ಇದರಿಂದಾಗಿ ಸಂಯಮದ ಚರ್ಚೆಗಳು ಸಾಧ್ಯವಾಯಿತು. ರಾಜ್ಯಸಭೆ ಕಲಾಪಕ್ಕಿಂತ ಲೋಕಸಭೆ ಕಲಾಪವನ್ನೇ ವೀಕ್ಷಿಸಿದೆ. ಒಟ್ಟು 27 ಮಂದಿ ಸಂಸದರು ಮಾತನಾಡಿದರು. ಇವರೆಲ್ಲರೂ ತಮ್ಮದೆ ಆದ ರೀತಿಯಲ್ಲಿ ಸಮಸ್ಯೆಯ ಆಯಾಮಗಳನ್ನು ವಿಶ್ಲೇಷಿಸಿದರು.
ಸಂಸದರ ಮಾತಿನಲ್ಲಿ ‘ ಕಾನೂನು ರೂಪಿಸುವ ವಿಷಯದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಸತ್ತೆ ಅಂತಿಮ. ಸಂಸತ್ತಿನ ಹೊರಗಿನಿಂದ ಸಲಹೆಗಳು ಬರಬಹುದು. ಆದರೆ ಅಂತಿಮ ತಿರ್ಮಾನ ಸಂಸದೀಯ ವ್ಯವಸ್ಥೆಯದೇ’ ಎಂಬ ಅಂಶ ಗಮನಾರ್ಹವಾಗಿತ್ತು.
ಸಂಸತ್ತಿನ ಎರಡು ಸದನಗಳಲ್ಲಿಯೂ ಎಂಟು ತಾಸಿಗೂ ಹೆಚ್ಚು ಸಮಯ ಸಂವಾದ ಸಾಗಿತ್ತು. ಆಡಳಿತ ಪಕ್ಷ ಮತ್ತು ವಿಪಕ್ಷಗಳ ನಡುವೆ ಹೆಚ್ಚು ಭಿನ್ನಮತ ಕಾಣದೇ ಇದ್ದಿದ್ದೂ ವಿಶೇಷವೇ. ಅಣ್ಣಾ ಹಜಾರೆ ಅವರ ಮೂರು ಪ್ರಮುಖ ಒತ್ತಾಯಗಳಾದ 1.ನಾಗರಿಕ ಸನ್ನದು ಜಾರಿ 2. ಕೆಳ ಹಂತದ ಅಧಿಕಾರಿ-ಸಿಬ್ಬಂದಿಯನ್ನು ಲೋಕಪಾಲ್ ವ್ಯಾಪ್ತಿಗೆ ತರುವುದು 3. ರಾಜ್ಯಗಳಲ್ಲಿ ಸಮರ್ಥ ಲೋಕಾಯುಕ್ತ ವ್ಯವಸ್ಥೆ ಅಳವಡಿಕೆ ವಿಚಾರಗಳಿಗೆ ಸಂಬಂಧಿಸಿ ಬರಬಹುದಾದ ಪ್ರಾಯೋಗಿಕ ತೊಡಕುಗಳ ಬಗ್ಗೆ ಸಂಸದರು ಸಂದೇಹ ವ್ಯಕ್ತಪಡಿಸಿದರಾದರೂ ಮಸೂದೆಯಲ್ಲಿ ಇವುಗಳ ಅಳವಡಿಕೆಗೆ ತಕರಾರು ತೆಗೆಯಲಿಲ್ಲ ಎಂಬುದು ಗಮನಾರ್ಹ. ಈ ವಿಚಾರದಲ್ಲಿ ಆಡಳಿತ ಪಕ್ಷ ಕಾಂಗ್ರೆಸ್ ಮತ್ತು ಪ್ರಮುಖ ವಿರೋಧ ಪಕ್ಷ ಭಾರತೀಯ ಜನತಾ ಪಾರ್ಟಿ ನಡುವೆ ಒಮ್ಮತ ಮೂಡಿದ ಕಾರಣದಿಂದಲೇ ಸದನದ ನಡವಳಿಕೆಯಲ್ಲಿ ಬಹು ಅಪರೂಪವಾದ ‘ Sence of house’ ಕಾಣಲು ಸಾಧ್ಯವಾಯಿತು. ಈ ಮೂರು ವಿಷಯಗಳಿಗೂ ಸದನದ ಸದಸ್ಯರು ಮೇಜು ತಟ್ಟುವುದರ ಮೂಲಕ ಒಪ್ಪಿಗೆ ಸೂಚಿಸಿ ಸಂಸದೀಯ ಪ್ರಜ್ಞೆ ಮೆರೆದರು. ಸದನದ ಸ್ಥಾಯಿ ಸಮಿತಿಗೆ ಈ ಎಲ್ಲ ವಿಷಯ ವರ್ಗಾವಣೆಯಾಗುತ್ತದೆ. ಅಂತಿಮವಾಗಿ ಮಸೂದೆಗೆ ಸಮಿತಿ ಯಾವ ಸ್ವರೂಪ ದೊರೆಯಬಹುದು ಎಂಬುದು ಕೆಲವೇ ದಿನಗಳಲ್ಲಿ ತಿಳಿಯಲಿದೆ.
ಈ ವಿಷಯ ರಾಮಲೀಲಾ ಮೈದಾನಕ್ಕೆ ಮುಟ್ಟುತ್ತಿದಂತೆ ಅಣ್ಣಾ ಹಜಾರೆ ತಮ್ಮ ಉಪವಾಸ ಸತ್ಯಾಗ್ರಹವನ್ನು ನಾಳೆ ಅಂದರೆ ಆಗಸ್ಟ್ 28ರ ಬೆಳಿಗ್ಗೆ 10ಕ್ಕೆ ಮುಕ್ತಾಯಗೊಳಿಸುತ್ತಾರೆ ಎಂದು ಘೋಷಿಸಿದ್ದು ಕೂಡ ಪ್ರಮುಖ ಸಂಗತಿಯೆ. ಸಂಸತ್ತಿನ ನಿರ್ಣಯ ಮತ್ತು ಪ್ರಧಾನಿ ಪತ್ರವನ್ನು ಕೇಂದ್ರ ಮಂತ್ರಿ ವಿಲಾಸ್ ರಾವ್ ದೇಶ್ ಮುಖ್ ಅವರ ಮೂಲಕ ಅಣ್ಣಾ ಹಜಾರೆ ಅವರಿಗೆ ತಲುಪಿಸುವ ಮೂಲಕ ಕೇಂದ್ರ ಸರಕಾರ ತನ್ನ ಪ್ರಬುದ್ಧತೆ-ಬದ್ಧತೆ ತೋರಿದೆ.
‘ ಇದು ಅರ್ಧ ವಿಜಯ ಮಾತ್ರ; ಪೂರ್ಣ ವಿಜಯ ಇನ್ನೂ ಬಾಕಿಯಿದೆ’ ಎಂದು ಅಣ್ಣಾ ಹಜಾರೆ ಹೇಳಿರುವುದು ಕುತೂಹಲಕಾರಿ. ಇದು ಅಣ್ಣಾ ಅವರ ಮುಂದಿನ ನಡೆಯನ್ನು ಸಾಂಕೇತಿಸುತ್ತದೆ ಅಲ್ಲವೆ…?
No comments:
Post a Comment