ಸಮಕಾಲೀನ ಪ್ರಮುಖ ಘಟನಾವಳಿ, ಅದರಿಂದಾಗುವ ಸಮಸ್ಯೆಗಳ ಬೆಳವಣಿಗೆ ಮುಂದಿಟ್ಟುಕೊಂಡು ಕಥೆ, ಕಾದಂಬರಿ ಬರೆಯುವುದು ಸವಾಲಿನ ಕೆಲಸ. ಇದೊಂದು ರೀತಿ ತಂತಿ ಮೇಲಿನ ನಡಿಗೆಯ ಹಾಗೆ. ರಾಜ್ಯದ ಕರಾವಳಿ ಜಿಲ್ಲೆಯಲ್ಲಾದ ತಲ್ಲಣಗಳನ್ನು ವಸ್ತುವಾಗಿರಿಸಿಕೊಂಡು ಜೋಗಿ ‘ಚಿಕ್ಕಪ್ಪ’ ಬರೆದಿದ್ದಾರೆ. ಆದರೆ ಸವಾಲಿನಲ್ಲಿ ಅವರು ಗೆದ್ದಿದ್ದಾರೆಯೆ… ?
ಕಾದಂಬರಿಯಲ್ಲಿ ಬರುವ ಊರುಗಳ ಹೆಸರು ಕಾಲ್ಪನಿಕವಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಕಥಾನಕದ ಮುಖ್ಯ ಸ್ಥಳ. ಆದರೆ ಬೆಳವಣಿಗೆ ಸುತ್ತಮುತ್ತಲ ಊರುಗಳಲ್ಲಿಯೂ ಘಟಿಸುತ್ತದೆ. ಪಾತ್ರಗಳ ಹೆಸರು ಕಾಲ್ಪನಿಕ ! ಪ್ರತಿ ಊರಿಗೂ ಒಂದು ‘ಮೂಡ್’ ಇರುತ್ತದೆ. ಉಪ್ಪಿನಂಗಡಿ ಲಹರಿಯನ್ನು ಸೊಗಸಾಗಿ ಕಟ್ಟಿಕೊಡುವ ಕಾದಂಬರಿಕಾರ ಹಾಗೆಯೆ ಚಿಕ್ಕಪ್ಪ ಪಾತ್ರಕ್ಕೂ ಪ್ರವೇಶಿಕೆ ಒದಗಿಸುತ್ತಾರೆ.
‘ಇಂಥ ಊರಿಗೆ ಆತ ಕಾಲಿಟ್ಟು, ಅಲ್ಲೆ ಉಳಕೊಳ್ಳಲು ನಿರ್ಧರಿಸಿದ್ದು ಯಾಕೆ ಅನ್ನುವುದು ಸ್ವತಃ ಅವನಿಗೂ ಗೊತ್ತಿರಲಿಲ್ಲ ಎಂದು ಕಾಣುತ್ತದೆ’ ಎನ್ನುತ್ತಾರೆ. ಕಾದಂಬರಿಕಾರನ ಗೊಂದಲ ಇಲ್ಲಿಂದಲೆ ಆರಂಭವಾಗಿದೆ.
‘ಬೆಳದಿಂಗಳು ಅವನ ಎಡಕೆನ್ನೆಯ ಮೇಲೆ ಬಿದ್ದಿತ್ತು. ಆ ಬೆಳಕಲ್ಲಿ ಅವನ ಮುಖ ವಿಚಿತ್ರವಾಗಿ ಹೊಳೆಯುತ್ತಿತ್ತು. ಎಣೆಗೆಪ್ಪು ಬಣ್ಣದ, ಅಷ್ಟೇನೂ ಎತ್ತರವಿಲ್ಲದ ಆತ ಬರೀ ಬನೀನು ಹಾಕಿಕೊಂಡಿದ್ದ. ತದೇಕಚಿತ್ತದಿಂದ ನದಿಯನ್ನು ನೋಡುತ್ತಿದ್ದ’ ಹೀಗೆ ಹೇಳುವ ಮೂಲಕ ಆ ಪಾತ್ರಕ್ಕೆ ಬಹು ಸ್ಪಷ್ಟ ಗುರಿಯಿದೆ. ಹೇಗೆ ತನ್ನ ಕಾರ್ಯ ಸಾಧಿಸಬೇಕು ಎಂಬುವುದರ ಪರಿಕಲ್ಪನೆಯೂ ಇದೆ ಎಂಬುವುದರ ಅರಿವು ಓದುಗರಿಗೆ ಆಗುತ್ತದೆ.
ಚಿಕ್ಕಪ್ಪನ ಸಮಾನಂತಾರ ಪಾತ್ರ ಸೀತಾರಾಮ ಯರ್ಮುಂಜ. ಈ ಪಾತ್ರವನ್ನು ನಿರೂಪಿಸುವುದರಲ್ಲಿಯೂ ಗೊಂದಲ ಕಂಡುಬರುತ್ತದೆ. ‘ಸೀತಾರಾಮ, ಇಡೀ ದಕ್ಷಿಣ ಕನ್ನಡ ಜಿಲ್ಲೆ ಸಾಂಸ್ಕೃತಿಕ ಪರಿಸರವನ್ನು ಆಡಳಿತ ಪಕ್ಷ ಹಾಳುಗೆಡವುತ್ತಿದೆ ಅಂತೆಲ್ಲ ಮಾತನಾಡಿದ್ದ. ಅಂಧಶ್ರದ್ಧೆ, ಕೋಮುವಾದಿ ನಿಲುವು ಮತ್ತು ಮತಾಂಧತೆ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿರುವುದು ಈ ಪ್ರದೇಶದಲ್ಲೆ. ಈಗ ಆಳುತ್ತಿರುವ ಪಕ್ಷಕ್ಕೆ ಜಿಲ್ಲೆ ಪ್ರಯೋಗಶಾಲೆ ಆಗಿಬಿಟ್ಟಿದೆ. ಮತಾಂಧತೆಯನ್ನು ಹೊಡೆದಟ್ಟುವ ಉಪಾಯಗಳು ನಮಗಿನ್ನೂ ಗೊತ್ತಿಲ್ಲದ ಹೊತ್ತಲ್ಲಿ, ಇಲ್ಲಿ ಅದನ್ನೆ ಬಿತ್ತಿ ಬೆಳೆಯಲಾಗುತ್ತಿದೆ ಎಂದು ಸೀತಾರಾಮ ಮಾತನಾಡಿದ್ದ’ ಹೀಗೆ ಹೇಳುವ ಮೂಲಕ ಈತ ಪ್ರಗತಿಪರ, ಜಾತ್ಯತೀತ ನಿಲುವಿನ, ನಿರ್ಭೀತ ವ್ಯಕ್ತಿ ಎಂದು ಚಿತ್ರಿಸುತ್ತಾರೆ.
ತಕ್ಷಣದಲ್ಲಿಯೇ ಓದುಗರಿಗೆ ಕಸಿವಿಸಿ ಆಗುವ ರೀತಿ ‘ಅಲ್ಲಿ ಕಾಣುತ್ತಿದ್ದ ವ್ಯಕ್ತಿ( ಚಿಕ್ಕಪ್ಪ)ಯನ್ನು ನೋಡುತ್ತಿದ್ದ ಹಾಗೆ ಬೆಚ್ಚಿಬಿದ್ದ ಸೀತಾರಾಮ. ಅವನಿಗೆ ತನ್ನ ಮುಖ ಕಾಣಿಸದಿರಲಿ ಎಂದು ಅವನಿಗೆ ತಿರುಗಿ ನಿಂತ. ತಗ್ಗಿದ ದನಿಯಲ್ಲಿ ಇಲ್ಲಿ ಬೇಡ, ನಾವು ಬಸ್ ಸ್ಟ್ಯಾಂಡಿಗೆ ಹೋಗೋಣ. ಅವನು ಈ ಊರಿಗೆ ಯಾವಾಗ ಬಂದ, ಎಷ್ಟು ದಿನದಿಂದ ಇಲ್ಲಿ ಇದ್ದಾನೆ ಎಂದು ಕೇಳಿದ'
ಹೀಗೆ ಚಿಕ್ಕಪ್ಪನಿಗೆ ಹೆದರಿ ನಡುಗಿದ ವ್ಯಕ್ತಿ ಮುಂದೆ ಆತನಿಗೆ ಸಡ್ಡು ಹೊಡೆದು ಊರೂರುಗಳಲ್ಲಿ ಕೋಮುವಾದದ ವಿರುದ್ಧ ಪ್ರಚಾರ ಮಾಡುತ್ತಾನೆ.
ಪತ್ರಕರ್ತ ರಾಧಾಕೃಷ್ಣ ಕಾಮತ್ ಪಾತ್ರವನ್ನು ಚಿತ್ರಿಸುವಾಗ ‘ದುಡಿದು ತಿನ್ನಬೇಕಾದ ಅನಿರ್ವಾಯತೆಯೇನೂ ಇಲ್ಲದ್ದರಿಂದ ರಿಪೋರ್ಟರ್ ಕೆಲಸ ಅವನ ಅಸಡ್ಡಾಳ ಬದುಕಿಗೆ ಹೇಳಿ ಮಾಡಿಸಿದಂತಿತ್ತು’ ಎಂದು ಹೇಳುವ ಮೂಲಕ ಪತ್ರಕರ್ತರು ಅಸಡ್ಡಾಳ ವ್ಯಕ್ತಿತ್ವದವರು ಎಂದು ಅರ್ಥ ಬರುವಂತೆ ಗೇಲಿ ಮಾಡುವುದೇಕೆ ಎಂದು ಅರ್ಥವಾಗುವುದಿಲ್ಲ.
ಕಾಲೇಜು ಅಧ್ಯಾಪಕ, ಲೋಹಿಯಾವಾದಿ ಸುಧೀಂದ್ರ ಗುತ್ತಿ ಪಾತ್ರದ ಬಗ್ಗೆಯೂ ಅವರಿಗೆ ಗೊಂದಲವಿದೆ. ರಾಜ್ಯದ ಪ್ರಮುಖ ಲೋಹಿಯಾವಾದಿಗಳು ಶಿವಮೊಗ್ಗ ಮೂಲದವರು ಎಂಬ ಕಾರಣಕ್ಕೆ ಈ ಪಾತ್ರ ಅದೇ ಮೂಲದ್ದು ಎಂದು ಹೇಳುತ್ತಾರೆ. ಹಣೆಗೆ ಕುಂಕುಮ, ತಿಲಕ ಇಟ್ಟುಕೊಂಡು ಬರುವುದನ್ನು ಈ ಪಾತ್ರ ವಿರೋಧಿಸುವುದು ಪ್ರಗತಿಪರ ಮನಸ್ಥಿತಿ ಎನಿಸುವುದಿಲ್ಲ. ಬದಲಾಗಿ ಹಾಸ್ಯಾಸ್ಪದ ಅನಿಸುತ್ತದೆ. ಕೋಮುವಾದಿ ನಿಲುವುಗಳನ್ನು, ಕ್ರಿಯೆಗಳನ್ನು ವಿರೋಧಿಸುವಿಕೆಯನ್ನು ಕುಂಕುಮ, ತಿಲಕದ ನೆಲೆಯಲ್ಲಿ ನೋಡಲು ಸಾಧ್ಯವಾಗುವುದಿಲ್ಲ. ಅದು ಬಲವಾದ ಕಾರಣಗಳೂ ಆಗುವುದಿಲ್ಲ ಎಂಬುವುದನ್ನು ಕಾದಂಬರಿಕಾರ ಮರೆಯುತ್ತಾರೆ.
ಕಾದಂಬರಿಯಲ್ಲಿ ಎಲ್ಲಿಯೂ ನೇರವಾಗಿ ಹೇಳದಿದ್ದರೂ ರಾಜ್ಯದ ಬಿಜೆಪಿ ಸರ್ಕಾರದ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆದ ಬೆಳವಣಿಗೆಗಳ ಬಗ್ಗೆಯೆ ಕಾದಂಬರಿಕಾರ ಹೇಳುತ್ತಿದ್ದಾರೆ ಎನ್ನುವುದು ತಿಳಿಯುತ್ತದೆ. ನಿರ್ದಿಷ್ಟ ವ್ಯಕ್ತಿಗಳನ್ನು ಪಾತ್ರಗಳಾಗಿ ತರಲು ಯತ್ನಿಸಿದ್ದಾರೆ ಎನ್ನುವುದೂ ಅರಿವಿಗೆ ಬರುತ್ತದೆ.
ಆರಂಭದಲ್ಲಿ ಸೇತುವೆ ಮೇಲೆ ಚಿಕ್ಕಪ್ಪನನ್ನು ನೀನು ಯಾರು ಎಂದು ಪ್ರಶ್ನಿಸುವ ಊರಿನ ಸ್ಥಾಪಿತ ಹಿತಾಸಕ್ತಿ ಶಿವರಾಮ ಶೆಟ್ಟಿ ಪಾತ್ರವೂ ನಂತರ ಕಾಣೆಯಾಗುತ್ತದೆ. ಹಿಂದೂತ್ವವಾದಿ ಪಕ್ಷದ ವಿರೋಧಿ ಪಕ್ಷಕ್ಕೆ ಸೇರಿದ ಇಂಥ ವ್ಯಕ್ತಿಗಳು ಚಿಕ್ಕಪ್ಪ ಅಂಥವರ ಬೆಳವಣಿಗೆಗೆ ಅಷ್ಟು ಸುಲಭವಾಗಿ ಎಡೆ ಮಾಡಿಕೊಡುವುದಿಲ್ಲ.
ಉಗ್ರ ಹಿಂದುತ್ವವಾದಿ ಚಿಕ್ಕಪ್ಪ, ಉಪ್ಪಿನಂಗಡಿ( ದಕ್ಷಿಣ ಕನ್ನಡ ಜಿಲ್ಲೆ ಸಂಕೇತವಾಗಿ ತಂದಿದ್ದಾರೆ) ಪ್ರವೇಶಿಸುವುದಕ್ಕೂ ಮೊದಲೆ ಅಲ್ಲೆ ಹಿಂದೂತ್ವವಾದಿ ಭೂಮಿಕೆ ಸಿದ್ಧಗೊಂಡಿತ್ತು. ಅದನ್ನು ಚಿಕ್ಕಪ್ಪ ಮತ್ತಷ್ಟು ಬೆಳೆಸಿದ ಅಂಶಗಳು ತಿಳಿಯುತ್ತವಾದರೂ ಈ ವಿವರಗಳನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡಲು ಲೇಖಕರು ವಿಫಲವಾಗುತ್ತಾರೆ.
ಚಿಕ್ಕಪ್ಪ, ಉಗ್ರ ಹಿಂದೂತ್ವವಾದವನ್ನು ಬೇರೆಬೇರೆ ಊರುಗಳಲ್ಲಿ ಮೊಳಕೆಯೊಡೆಸಿ, ಬೆಳೆಸುವ ಕಾರ್ಯಕರ್ತ ಎಂದು ಹೇಳಿಸುವ ಲೇಖಕರು ಆತನ ಬೆನ್ನ ಹಿಂದಿರುವ ಸಂಘಟನೆ, ಅದರ ರಾಜಕೀಯ ಗೊತ್ತುಗುರಿಗಳ ಬಗ್ಗೆ ಓದುಗರಿಗೆ ಹೇಳುವ ಗೋಜಿಗೆ ಹೋಗುವುದಿಲ್ಲ. ಪೊಲಿಟಿಕಲ್ ಬಲ ಇಲ್ಲದೆ ಯಾವುದೆ ವಾದಗಳನ್ನು ಜನರ ಮಧ್ಯೆ ಬೆಳೆಸುವುದು ಸುಲಭವಲ್ಲ ಎಂಬ ಹಿನ್ನೆಲೆಯಲ್ಲಿ ನೋಡಿದಾಗ ಚಿಕ್ಕಪ್ಪನ ಪಾತ್ರದ ದುರ್ಬಲ ಪೋಷಣೆ ಅರ್ಥವಾಗುತ್ತದೆ. ಒಂದು ಸಂದರ್ಭದಲ್ಲಿ ಪುತ್ತೂರಿನ ಶಾಸಕರು, ಚಿಕ್ಕಪ್ಪನಿಗೆ ಚುನಾವಣೆ ಸಮೀಪಿಸುತ್ತಿದೆ. ಪಕ್ಷ, ನಿನ್ನನ್ನು ಅಭ್ಯರ್ಥಿಯನ್ನಾಗಿ ಮಾಡಬಹುದು ಎಂದು ಹೇಳುವ ಸನ್ನಿವೇಶ ಬರುತ್ತದಾದರೂ ಈ ಸಂಪರ್ಕ, ಅದರ ಸಾಧ್ಯತೆ, ತಂತ್ರಗಾರಿಕೆಗಳನ್ನ ಕಟ್ಟಿಕೊಡಲು ವಿಫಲರಾಗುತ್ತಾರೆ.
ಕುಂಕುಮ, ತಿಲಕ ವಿರೋಧಿಸಿದ ಕಾರಣಕ್ಕೆ ಜ್ಯೂನಿಯರ್ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಸಂದರ್ಭದಲ್ಲಿ ಕೋಮುವಾದಿಗಳು ನುಗ್ಗಿ ಮಾರಕಾಸ್ತ್ರಗಳಿಂದ ರಕ್ತದೋಕುಳಿ ನಡೆಸಿದ ದುರ್ಘಟನೆಯನ್ನು ತೇಲಿಸಿ ಬರೆಯುವುದು ಆಶ್ಚರ್ಯ, ದಿಗ್ಬ್ರಮೆ ಮೂಡಿಸುತ್ತದೆ. ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಆತಂಕಕ್ಕೆ ಕಾರಣವಾಗುವ, ಎಲ್ಲೆಡೆಯಿಂದ ಪ್ರತಿರೋಧ ವ್ಯಕ್ತವಾಗುವ ಸನ್ನಿವೇಶದ ಬಗ್ಗೆ ಹಗುರ ನಿಲುವು ತಳೆದಂತೆ ಭಾಸವಾಗುತ್ತದೆ.
ಇಂಥ ಸನ್ನಿವೇಶದಲ್ಲಿ ಊರು ಪ್ರವೇಶಿಸುವ ಚಿಕ್ಕಪ್ಪನ ಕಾರ್ಯಸಾಧನೆ ಮಾರ್ಗ ಸುಲಭವಲ್ಲ, ಕೋಮುವಾದದ ನಿಲುವುಳ್ಳ ಸರ್ಕಾರವೂ ಒತ್ತಡದಲ್ಲಿರುತ್ತದೆ. ಇಂಥ ಬೆಳವಣಿಗೆ ನಿಯಂತ್ರಿಸಲು ಮುಂದಾಗುತ್ತದೆ ಎಂಬುದನ್ನು ಮರೆತಿರುವುದು ಸರಿಯಲ್ಲ.
ಅಂತರ್ಧಮೀಯ ಮದುವೆ, ಲವ್ ಜಿಹಾದ್ ಎಂದು ಕೋಮುವಾದಿಗಳು ಭಾವಿಸುವ ಪ್ರಸಂಗಗಳು ಕಾದಂಬರಿಯಲ್ಲಿ ಬರುತ್ತವಾದರೂ ಅದರ ವಿವರಗಳು ಬಲಯುತವಾಗಿಲ್ಲ. ಮಾಳವಿಕಳ ಪ್ರೇಮಿ ರಶೀದ್ ಸಾವಿನ ಸೇಡಿನಿಂದ ನಡೆಯುವ ಮಾರಣಾಂತಿಕ ಹಲ್ಲೆಯಿಂದ ಚಿಕ್ಕಪ್ಪ ಹಾಸಿಗೆ ಹಿಡಿಯುತ್ತಾನೆ. ದೈಹಿಕ ಅಶಕ್ತ ಸ್ಥಿತಿಯಲ್ಲಿಯೂ ಸೇಡು ತೀರಿಸಿಕೊಳ್ಳಲು ತಹತಹಿಸುತ್ತಿರುತ್ತಾನೆ.
ಇಂಥ ಮನಸ್ಥಿತಿಯ ಚಿಕ್ಕಪ್ಪ, ಮಾನವೀಯ ಮೌಲ್ಯದ ಸಂಕೇತದಂತೆ ತರಲಾಗಿರುವ ಡಾ. ರಜಾಕ್ ವ್ಯಕ್ತಿತ್ವದಿಂದ ಬದಲಾಗುತ್ತಾನೆ. ಮಾಳವೀಕಳ ಮಗನ ಮೇಲಿದ್ದ ತಿಲಕ ಒರೆಸುತ್ತಾನೆ. ಕೊನೆಗೆ ಚಿಕ್ಕಪ್ಪನನ್ನು ರಜಾಕ್ ತಮ್ಮೊಂದಿಗೆ ಕರೆದುಕೊಂಡು ಹೋಗುತ್ತಾರೆ ಎನ್ನವುದೆಲ್ಲ ಮತ್ತಷ್ಟು ವಿವರಗಳನ್ನು ಬೇಡುತ್ತವೆ.
ಧರ್ಮದ ಉಗ್ರ ಪ್ರತಿಪಾದಕ, ವೈಯಕ್ತಿಕ ನೆಲೆಯ ಸಹಾನೂಭೂತಿಯಲ್ಲಿ ಕರಗುತ್ತಾನೆ, ಬದಲಾಗುತ್ತಾನೆ ಎಂದು ಬರೆದಿರುವುದು ಕೂಡ ಅಚ್ಚರಿಗೆ ಕಾರಣವಾಗುತ್ತದೆ. ಕಥಾ ತಂತ್ರವೂ ಪರಿಣಾಮಕಾರಿ ಅಲ್ಲ. ಪೊಲೀಸ್ ಇನ್ಸ್ಪೆಕ್ಟರ್ ಚಂದ್ರಣ್ಣ ಮುಖಾಂತರ ಕಾದಂಬರಿಕಾರ ಕಥೆ ಕೇಳುತ್ತಾರೆ. ಆದರೆ ಇಡೀ ಘಟನಾವಳಿಗೆ ಚಂದ್ರಣ್ಣ ಕೂಡ ಪ್ರತ್ಯಕ್ಷ್ಯದರ್ಶಿಯಲ್ಲ.
ನೇರವಾಗಿ ತಾವೇ ಕಂಡಂತೆ ಕಥೆ ಹೇಳದಿರುವ ಯಾವ ಸಂಕಷ್ಟಕ್ಕೆ ಕಾದಂಬರಿಕಾರ ಸಿಲುಕಿದ್ದಾರೋ ಅರ್ಥವಾಗುವುದಿಲ್ಲ. ಪ್ರವೇಶಿಕೆಯಲ್ಲಿ ಅವರು ‘ ಚಿಕ್ಕಪ್ಪ ನಿಮ್ಮನ್ನು ಆವಾಹಿಸಿಕೊಳ್ಳಲಿ, ನೀವು ಅವನಿಂದ ಬಿಡಿಸಿಕೊಳ್ಳಲಿ’ ಎಂದು ಬರೆದಿರುವುದೇಕೆ… ? ಎಂದು ಪ್ರಶ್ನಿಸಬೇಕಾಗುತ್ತದೆ. ಓದುಗರೇಕೆ ಚಿಕ್ಕಪ್ಪನ ಪ್ರಭಾವಳಿಗೆ ಸಿಲುಕಬೇಕು ?
ಸಂಪಾದಕ ರಮಾಕಾಂತ್ ಅವರನ್ನು ಸಂಕೇತವಾಗಿ ತಂದಂತೆ ಕಾಣುತ್ತದೆ. ನನ್ನ ನಾಟಕದಲ್ಲಿ ರಮಾಕಾಂತ್ ತುಘಲಕ್ ಪಾತ್ರ ಮಾಡಿದ್ದ ಎಂದು ಹೇಳಿಸುವುದರ ಮೂಲಕ ಭಾರತೀಯ ಪತ್ರಿಕೋದ್ಯಮ, ದ್ವಂದ್ವ ನೆಲೆಗಟ್ಟಿನಲ್ಲಿದೆ ಎಂದು ಹೇಳುವಂತೆ ಕಾಣುತ್ತದೆ. ಇದೆಲ್ಲ ಪ್ರಮುಖವಾದರೂ ಮತ್ತಷ್ಟು ವಿವರಣೆ ಅಗತ್ಯವಾಗಿತ್ತು.
ಇವೆಲ್ಲದರಿಂದ ಕಥಾನಕದ ಹಂದರ ಮುದುಡಿದೆ. ಇದರ ಪರಿಣಾಮ ಪಾತ್ರಗಳು ಅರಳುವುದಿಲ್ಲ. ಇಡೀ ಘಟನಾವಳಿಗಳನ್ನು ಕಟ್ಟಿಕೊಟ್ಟಿರುವುದು ರೂಪಕವಾಗಿ ಮೈದಳೆದಿಲ್ಲ. ಇದು ಜೋಗಿ ಬರವಣಿಗೆ ಬಗ್ಗೆ ಭರವಸೆ ಇಟ್ಟುಕೊಂಡವರಿಗೆ ನಿರಾಶೆ ಮೂಡಿಸುತ್ತದೆ.
ಈ ಎಲ್ಲ ಕೊರತೆಗಳ ಮಧ್ಯೆಯೂ ಚಿಕ್ಕಪ್ಪ ಕಾದಂಬರಿ, ಪ್ರಸ್ತುತ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಗಮನಾರ್ಹ ಪ್ರಯತ್ನ. ಪೊಲಿಟಿಕಲ್ ಸಿದ್ಧಾಂತ, ಅಜೆಂಡಾಗಳ ಬಗ್ಗೆ ಇಂದಿನ ಬರಹಗಾರರು ನಿರ್ಲಿಪ್ತ ಧೋರಣೆ ತಳೆದಿರುವ ಹಿನ್ನೆಲೆಯಲ್ಲಿ ‘ಬರ್ನಿಂಗ್ ಇಶ್ಯೂ’ ಬಗ್ಗೆ ಹೇಳಲು ಹೊರಟ ಜೋಗಿ ಪ್ರಯತ್ನ ಶ್ಲಾಘನೀಯ….
ಪುಸ್ತಕ ಓದಿ ಪ್ರತಿಕ್ರಿಯಿಸಿದ್ದೀರಿ. ಥ್ಯಾಂಕ್ಸ್. ನಿಮ್ಮ ನೇರವಾದ ಅನಿಸಿಕೆಗಳು ಮುಂದಿನ ಕಾದಂಬರಿಗೆ, ಬರಹಕ್ಕೆ ಎಚ್ಚರದ ಮಾತಿನಂತಿದೆ. ಧನ್ಯವಾದ.
ReplyDeleteನಿಮ್ಮ ಸಹೃದಯ ಪ್ರತಿಕ್ರಿಯೆಗೆ ಧನ್ಯವಾದಗಳು ಜೋಗಿ ಜಿ....
Deletetumba olleya vishleshane..- sandhya
ReplyDelete