ಗಂಡು-ಹೆಣ್ಣಿನ ದೈಹಿಕ ಸಾಂಗತ್ಯಕ್ಕಿಂತಲೂ ಮಾನಸಿಕ ಸಾಂಗತ್ಯ ದೀರ್ಘಕಾಲಿಕ. ವೈವಾಹಿಕ ಸಂಬಂಧದಲ್ಲಿ ಮಧ್ಯ ವಯಸ್ಸು ದಾಟಿದ ನಂತರ ಇವರಿಬ್ಬರ ಸಂಬಂಧ ಮತ್ತಷ್ಟು ಬಿಗಿ ಆಗತೊಡಗುತ್ತದೆ. ಇಂಥ ಹೊತ್ತಿನಲ್ಲಿ ಸಂಗಾತಿ ಇಲ್ಲದಿದ್ದರೆ ಏಕತಾನತೆ ಕಾಡತೊಗುತ್ತದೆ; ಖಿನ್ನತೆ ಆವರಿಸಿಕೊಳ್ಳುತ್ತದೆ. ಬದುಕಿನೆಡೆಗೆ ತುಡಿಯುವ ಪ್ರೀತಿ ಇದ್ದಲ್ಲಿ ವೃದ್ಧಾಪ್ಯದ ಹೊಸ್ತಿಲಿನಲ್ಲಿ ನಿಂತವರ ಬದುಕಿನಲ್ಲಿ ಜೀವನೋತ್ಸಾಹ ಅರಳುವ ಪರಿಯನ್ನು ಹಿಂದಿ ನಾಟಕ 'ಹಮ್-ತುಮ್' ಮಾರ್ಮಿಕವಾಗಿ ಚಿತ್ರಿಸುತ್ತದೆ.
ಶ್ವಾಸಕೋಶ ಸಂಬಂಧಿತ ತೊಂದರೆಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆ. ಅಲ್ಲಿನ ಮುಖ್ಯವೈದ್ಯ ಡಾ. ಸಿಂಗ್. ಮೂಗಿನ ತುದಿ ಕೋಪ ಇರುವ ಸಿಡುಕ. ಆತಿಥ್ಯದ ಗಂಧಗಾಳಿ ಮರೆತವ. ಇದಕ್ಕೆ ಏಕಾಂಗಿ ಜೀವನ ಕೂಡ ಕಾರಣವಾಗಿರುತ್ತದೆ. ರೋಗಿಗಳೊಂದಿಗೆ ಅಗತ್ಯಕ್ಕಿಂತಲೂ ಕಮ್ಮಿ ಮಾತು. ಇನ್ನು ಸೌಹಾರ್ದತೆಯಂತೂ ದೂರ. ಆದರೆ ಈತನ ಬದುಕಿನಲ್ಲಿ ತಂಗಾಳಿ ಹಾಗೆ ಸರಿತಾ ಹಜಾರಿಕಾ ಪ್ರವೇಶ.
ಚಿಕಿತ್ಸೆಗಾಗಿ ದಾಖಲಾದ ಈಕೆ ಬಗ್ಗೆ ಆಸ್ಪತ್ರೆ ಸಿಬ್ಬಂದಿಯದು ದೂರು. ಸರಿತಾ ತಡರಾತ್ರಿಯೂ ಹಾಡುತ್ತಾಳೆ, ಕವಿತೆ ವಾಚಿಸುತ್ತಾಳೆ; ಜೋರಾಗಿ ನಗುತ್ತಾಳೆ ಹೀಗೆ. ತನ್ನ ಆರೋಗ್ಯ ಸ್ಥಿತಿ ವಿಚಾರಿಸಲೆಂದು ಬಂದ ಸರಿತಾಳಿಗೆ ದೂರುಗಳ ಬಗ್ಗೆ ಹೇಳುವ ಡಾ. ಸಿಂಗ್ ವೈಯಕ್ತಿಕವಾಗಿ ಇಂಥ ಪ್ರವೃತ್ತಿಗೆ ತಾನು ವಿರೋಧಿ ಅಲ್ಲ; ಆದರೆ ಆಸ್ಪತ್ರೆ ನಿಯಮಾನುಸಾರ ನಡೆದುಕೊಳ್ಳಬೇಕಾಗುತ್ತದೆ ಎನ್ನುತ್ತಾನೆ. ಅಲ್ಲಿನ ನಿಯಮಾವಳಿಗಳಿಗೆ ತನ್ನಿಂದ ಧಕ್ಕೆ ಆಗಿಲ್ಲ ಎಂದು ಸರಿತಾ ದೃಢವಾಗಿ ಹೇಳುತ್ತಾಳೆ.
ಇದಷ್ಟೆ ಅಲ್ಲ, ಚಹಾ ಸಮಯದಲ್ಲಿ ಕಾಣಲು ಬಂದವರನ್ನು ಕುಳಿತುಕೊಳ್ಳಲು ಹೇಳದ, ಸೌಜನ್ಯಕ್ಕಾಗಿಯಾದರೂ ಚಹಾಕ್ಕೆ ಆಮಂತ್ರಿಸದ ಡಾ. ಸಿಂಗ್ ವರ್ತನೆ ಬಗ್ಗೆ ಬಲವಾಗಿ ಆಕ್ಷೇಪಿಸುತ್ತಾಳೆ. ಅಲ್ಲಿಯ ತನಕ ಯಾರೂ ಈ ರೀತಿ ಆಕ್ಷೇಪ ವ್ಯಕ್ತಪಡಿಸದ ಕಾರಣ ಸಿಂಗ್ ತಬ್ಬಿಬ್ಬು. ಈಕೆಯ ನೇರವಂತಿಕೆ ಆತನನ್ನು ಸೆಳೆಯುತ್ತದೆ. ಕುಳಿತುಕೊಳ್ಳಲು, ಚಹಾ ತೆಗೆದುಕೊಳ್ಳಲು ಆಮಂತ್ರಿಸುತ್ತಾನೆ. ಜೊತೆಗೆ ಆಕೆಗೆ ಕ್ಷಯ ಇಲ್ಲವೆಂದು ದೃಢೀಕರಿಸುತ್ತಾನೆ.
ಈತನಿಗೆ ಕೃತಜ್ಞತೆ ಹೇಳಲೆಂದೆ ಸರಿತಾ ತಿನಿಸು ತಂದುಕೊಂಡುತ್ತಾಳೆ. ಈಕೆಯ ಮಾರ್ದವತೆ ಆತನ ಕಲ್ಲು ಮನಸನ್ನು ಕರಗಿಸ ತೊಡಗುತ್ತದೆ. ಮಾತನಾಡುವಾಗ ಮುಖದ ತುಂಬ ನಿಷ್ಕಪಟ ನಗು, ಕೃತಿಮತೆ ಇಲ್ಲದ ನಿರ್ಭಿಡತೆ ಸೆಳೆಯ ತೊಡಗುತ್ತದೆ. ಪರಸ್ಪರ ವೈಯಕ್ತಿಕ ವಿವರಗಳನ್ನು ಹಂಚಿಕೊಳ್ಳುತ್ತಾರೆ. ಮಧ್ಯ ವಯಸ್ಸಿನ ಈಕೆ ರಂಗಭೂಮಿ ನಟಿ, ಮಗನನ್ನು ಕಳೆದುಕೊಂಡಿರುತ್ತಾಳೆ; ಪತಿ ಮತ್ತೊಬ್ಬಳೆಡೆಗೆ ಆಕರ್ಷಿತನಾದ ಕಾರಣ ದೂರಾಗಿರುತ್ತಾಳೆ, ಆದರೂ ಆತನನ್ನು ದೂರುವುದಿಲ್ಲ. ಅವನ ಒಳ್ಳೆಯ ಗುಣಗಳನ್ನು ಆಗಾಗ ಶ್ಲಾಘಿಸುತ್ತಿರುತ್ತಾಳೆ. ಮಧ್ಯ ವಯಸ್ಕನಾದ ಡಾ. ಸಿಂಗ್ ಕೂಡ ಒಬ್ಬಂಟಿ.
ಸರಿತಾಳ ತುಂಬು ಜೀವನೋತ್ಸಾಹ ಈತನನ್ನು ಆವರಿಸಿಕೊಳ್ಳುತ್ತದೆ. ಆದರೆ ಜೊತೆಯಾಗಿ ಹೊರಗೆ ಸುತ್ತಾಟಕ್ಕೆ ಹೋಗಲು ಹಿಂಜರಿಕೆ. ಕ್ರಮೇಣ ಹಿಂಜರಿಕೆ ಕಿತ್ತೆಸೆದು ಆಕೆಯೊಂದಿಗೆ ಹೊರಗೆ ಹೋಗುತ್ತಾನೆ; ನಗುವುದನ್ನೆ ಮರೆತಂತೆ ಇದ್ದ ಈತನಿಂದ ತುಂಬು ನಗೆ ಹೊಮ್ಮ ತೊಡಗುತ್ತದೆ. ಇಬ್ಬರಿಂದಲೂ ನಗು, ನಗು, ನೃತ್ಯ-ಹಾಡು. ಇಬ್ಬರೂ ಪರಸ್ಪರ ಅಗಲಿರಲಾರದಷ್ಟು ಆತ್ಮೀಯರಾಗುತ್ತಾರೆ.
ಆಸ್ಪತ್ರೆಯಿಂದ ಸರಿತಾ ಬಿಡುಗಡೆ ಆಗುವ ಸಮಯ ಬಂದೇ ಬಿಡುತ್ತದೆ. ಈಕೆಯನ್ನು ತನ್ನ ಮನೆಗೆ ಡಾ. ಸಿಂಗ್ ಅತಿಥಿಯಾಗಿ ಆಹ್ವಾನಿಸುತ್ತಾನೆ. ಈಕೆ ತನ್ನಿಂದ ದೂರ ಆಗುವ ದಿನಗಳನ್ನು ಸಾಧ್ಯವಾದಷ್ಟು ಮುಂದೂಡಬೇಕು ಎನ್ನುವ ತವಕ. ಆದರೆ ತನ್ನ ಪ್ರೀತಿಯನ್ನು ನೇರ ವ್ಯಕ್ತ ಮಾಡಲು ಅಧೈರ್ಯ. ಆದರೆ ತನ್ನಿಂದ ದೂರವಾಗಿದ್ದ ಪತಿ ಶ್ಲಾಘನೆ ಮಾಡುವಾಗ ಡಾ. ಸಿಂಗ್ ಅಸೂಯೆ, ಆಕ್ಷೇಪಣೆ, ಆತನ ಕಣ್ಣುಗಳಲ್ಲಿ ವ್ಯಕ್ತವಾಗುವ ಪ್ರೇಮವನ್ನು ಅರಿತಾ ಅರಿತಿರುತ್ತಾಳೆ. ಆದರೆ ತಾನೇ ಮೊದಲಾಗಿ ಹೇಳಲು ಆಗದ ಚಡಪಡಿಕೆ.
ಈಕೆಯನ್ನು ನಿಲ್ದಾಣಕ್ಕೆ ಕರೆದೊಯ್ಯಲು ಟ್ಯಾಕ್ಸಿ ಬಂದೇ ಬಿಡುತ್ತದೆ. ಒಲ್ಲದ ಮನಸಿನಿಂದಲೆ ಈಕೆಯನ್ನು ಸಿಂಗ್ ಕಳಿಸಿಕೊಡುತ್ತಾನೆ. ಪರಸ್ಪರ ಹಂಬಲಿಸುವ ಈ ಜೀವಗಳು ಒಂದಾಗದೆ ದೂರ ಉಳಿಯುತ್ತಿವೆ ಎಂಬ ವಿಷಾದ ನಮ್ಮನ್ನು ಆವರಿಸಿಕೊಳ್ಳತೊಡಗುತ್ತದೆ. ಇವರಿಬ್ಬರೂ ಒಂದಾಗುವರೆ… ? ಇದನ್ನು ನಾಟಕ ನೋಡಿಯೇ ತಿಳಿದರೆ ಚೆಂದ…
ವಿಶೇಷತೆ:
ಇತ್ತೀಚೆಗೆ ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮದ ಆವರಣದಲ್ಲಿ 'ಅನೇಕ' ಭಾರತೀಯ ನಾಟಕೋತ್ಸವ ನಡೆಯಿತು. ವಿಶ್ವ ರಂಗಭೂಮಿ ದಿನದಂದು 'ಹಮ್=ತುಮ್' ಪ್ರದರ್ಶಿತವಾಯಿತು. ನವ ದೆಹಲಿಯ ಆಕಾರ್ ಕಲಾ ಸಂಗಮ್ ತಂಡದವರು ಸುರೇಶ್ ಭಾರಧ್ವಾಜ್ ನಿರ್ದೇಶನದ ಈ ನಾಟಕ ಪ್ರಸ್ತುತಿ ಪಡಿಸಿದರು.
ರಂಗಭೂಮಿ ತುಂಬಿದಂತೆ ಇರಬೇಕು. ಇಲ್ಲದಿದ್ದರೆ ಖಾಲಿ ಖಾಲಿ ಎನಿಸತೊಡಗಿ ಪ್ರೇಕ್ಷಕರಿಗೆ ಬೋರ್ ಆಗಬಹುದು. ಅದರಲ್ಲಿಯೂ ಒಬ್ಬರು ಅಥವಾ ಇಬ್ಬರು ಪಾತ್ರಧಾರಿಗಳು ಇರುವ ಣಾಟಕದ ಮುಂದೆ ಅಪಾರ ಸವಾಲುಗಳಿರುತ್ತವೆ. ನೋಡುಗರನ್ನು ಸೆಳೆದಿಟ್ಟುಕೊಳ್ಳುವಂತಹ ವಿಶೇಷ ಸಾಮರ್ಥ್ಯ ಇವರಲ್ಲಿ ಇರುವುದು ಅವಶ್ಯಕ. ಸಂಭಾಷಣೆ ಒಪ್ಪಿಸುವಿಕೆ, ಹಾವಭಾವಗಳಲ್ಲಿ ತುಸು ಮಂದಗತಿ ಕಂಡರೂ ನಾಟಕ ಆಕರ್ಷಣೆ ಕಳೆದುಕೊಳ್ಳುತ್ತದೆ.
'ಹಮ್ ತುಮ್' ನಾಟಕದಲ್ಲಿ ಇಬ್ಬರೆ ಪಾತ್ರಧಾರಿಗಳು. ಇಡೀ ವೇದಿಕೆ ಆವರಿಸಿಕೊಳ್ಳುವ ಸರಿತಾ ಪಾತ್ರಧಾರಿ ದಕ್ಷಿಣಾ ಶರ್ಮ ಲವಲವಿಕೆ ನಟನೆಯಿಂದ ಪ್ರೇಕ್ಷಕರ ವಿಶೇಷ ಮನ್ನಣೆಗೆ ಪಾತ್ರರಾಗುತ್ತಾರೆ. ಡಾ. ಸಿಂಗ್ ಪಾತ್ರಧಾರಿ ರಮೇಶ್ ಮನಚಂದರ್ ಅಭಿನಯವೂ ಮೆಚ್ಚುಗೆ ಗಳಿಸುತ್ತದೆ. ಇವರಿಬ್ಬರು ಪಾತ್ರಧಾರಿಗಳು ನಾಟಕದ ಟೆಂಪೊ ಕಿಂಚಿತ್ತೂ ಕುಗ್ಗದಂತೆ ನಿರ್ವಹಣೆ ಮಾಡಿದ್ದಾರೆ. ಪ್ರಸಾದನ, ಬೆಳಕು, ರಂಗ ಸಜ್ಜಿಕೆ ಅಚ್ಚುಕಟ್ಟು. ಇವೆಲ್ಲವನ್ನೂ ಸಂಯೋಜಿಸಿ ಪ್ರಸ್ತುತಿ ಪಡಿಸಿರುವ ನಿರ್ದೇಶಕ ಸುರೇಶ್ ಭಾರಧ್ವಾಜ್ ಪರಿಶ್ರಮ ಎದ್ದು ಕಾಣುತ್ತದೆ.

No comments:
Post a Comment