• ಮುಖಪುಟ
  • ಸಿನಿಮಾ
  • ದೇಗುಲ ಸರಣಿ
  • ರಾಜಕೀಯ
  • ಭಾಷೆ
  • ಸಾಹಿತ್ಯ
  • ಪರಿಸರ
  • ರಂಗ ಕಲೆ
  • ಮಾಧ್ಯಮ
  • ಪ್ರವಾಸ
  • ಜೀವನಶೈಲಿ
  • ನನ್ನ ಬಗ್ಗೆ
  • ಸಂಪರ್ಕಿಸಿ

ವಾಸ್ತು ಪ್ರಕಾರ; ವಿಡಂಬನೆಯೊ, ಅಪಹಾಸ್ಯವೊ

ಕಟ್ಟಡ ಕಟ್ಟುವ ವಿಚಾರದಲ್ಲಿ ಭಿನ್ನ ನಂಬಿಕೆಗಳಿವೆ. ಹಲವರು ವಾಸ್ತು ಪ್ರಕಾರವೇ ಕಟ್ಟಬೇಕು ಎನ್ನುತ್ತಾರೆ. ಇನ್ನೂ ಹಲವರು ವಾಸ್ತು ಅನ್ನುವುದು ಇಲ್ಲ, ಮತ್ತಷ್ಟು ಮಂದಿ ಪ್ರಕಾರ ವಾಸ್ತು ಎಂದರೆ ಗಾಳಿ-ಬೆಳಕು ಧಾರಳವಾಗಿ ಇರುವುದು. ಟಿವಿ ವಾಹಿನಿಗಳ ಭರಾಟೆ ಶುರುವಾದ ನಂತರ ಇದರ ಚರ್ಚೆಗೆ ಮತ್ತಷ್ಟು ಕಾವೇರಿದೆ. ಇಂಥ ಸಂರ್ಕೀಣ ವಿಷಯ ಇಟ್ಟುಕೊಂಡು ನಿರ್ದೇಶಕ ಯೋಗರಾಜ್ ಭಟ್ ಅವರು ಪ್ರಸ್ತುತಿ ಪಡಿಸಿರುವ 'ವಾಸ್ತು ಪ್ರಕಾರ' ಸಿನೆಮಾ ವಾಸ್ತು ಸರಿ ಇದೆಯೆ. . . ?


ವಾಸ್ತು ಪುರುಷ ಹೇಳಿರುವಂತೆಯೆ ಮನೆ ಕಟ್ಟಬೇಕು. ಆಗಿದ್ದರೆ ಮಾತ್ರ ಅಲ್ಲಿ ವಾಸಿಸುತ್ತಿರುವ ಸದಸ್ಯರ ತನು-ಮನ ನೆಮ್ಮದಿಯೂ ಚೆನ್ನಾಗಿರುತ್ತದೆ, ಮನೆಯೂ ದೀರ್ಘಕಾಲಿಕ. ಹೀಗೆ ಟಿವಿ ವಾಹಿನಿಗಳಲ್ಲಿಯೂ ಪ್ರತಿಪಾದಿಸುವ ಜ್ಯೋತಿಷಿ (ಟಿ.ಎನ್. ಸೀತಾರಾಮ್) ಶಾಸ್ತ್ರಿ. ಈತನ ಮಗ ಕುಬೇರ ಮಾತ್ರ ಇದಕ್ಕೆ ಉಲ್ಟಾ. ವಾಸ್ತು ವಿಜ್ಞಾನ ಎನ್ನುವುದೆಲ್ಲ ಬೊಗಳೆ; ಇದರ ಹೆಸರು ಹೇಳಿಕೊಂಡು ಹಲವರು ಹೊಟ್ಟೆ ಹೊರೆಯುತ್ತಿದ್ದಾರೆ, ಇಂಥವರು ಶೋಷಕರು ಎನ್ನುವುದು ಈತನ ಪ್ರತಿಪಾದನೆ. ಇದನ್ನೆ ಮುಂದಿಟ್ಟುಕೊಂಡು ಊರಿನಲ್ಲಿ ಆತ ಮಾಡುವ ಕಿತಾಪತಿ ಅಪಾರ. ಅಪ್ಪ-ಮಗನ ಕಿತ್ತಾಟದಲ್ಲಿ ನಲುಗುವ ತಾಯಿ (ಸುಧಾ ಬೆಳವಾಡಿ) 
ಪತಿ-ಮಗನ ಜಗಳ ತಾರಕಕ್ಕೇರಿದಾಗ ತಾಯಿ ಕುಬೇರರನ್ನು ತನ್ನ ಕಿರಿಯ ಸಹೋದರ ಇರುವ ಕಿಬ್ಬರೀಶ್ ಭಾಷೆ ಮಾತನಾಡುವ ವಾಸ್ತೇನಿಯಾ (ಕಾಲ್ಪನಿಕ ದೇಶ)ಕ್ಕೆ ಕಳಿಸಿಕೊಡುತ್ತಾಳೆ. ಶ್ರೀಮಂತ ಸೋದರ ಮಾವ (ಜಗ್ಗೇಶ್)ನಿಂದ ತನಗೆ ಅನುಕೂಲ ಆಗುವ ಬಗ್ಗೆ ಕನಸುಗಳ ಸರಮಾಲೆ ಕಟ್ಟಿಕೊಂಡು ಬರುವ ಕುಬೇರನಿಗೆ ಭ್ರಮ ನಿರಶನ. ಇದ್ದುದ್ದೆಲ್ಲವನ್ನೂ ಕಟ್ಟಿಕೊಂಡು ಮಹಿಳಾ ವಕೀಲೆ (ಪಾರೂಲ್ ಯಾದವ್ ) ಜಗಳಕ್ಕೆ ಬಿದ್ದಿರುವ ಸೋದರ ಮಾವ.
ಸ್ವದೇಶದಲ್ಲಿ ಯಾವ ವಾಸ್ತುವನ್ನು ವಿರೋಧಿಸುತ್ತಿದ್ದನೋ ಅದನ್ನೆ ಹೊಟ್ಟೆಪಾಡಿಗಾಗಿ ವಿದೇಶದಲ್ಲಿ ಮಾವನೊಟ್ಟಿಗೆ ಮಾಡುವ ಸ್ಥಿತಿ ಕುಬೇರನದು. ಗೊತ್ತಿಲ್ಲದ ವಿದ್ಯೆ ಇಟ್ಟುಕೊಂಡು ಕನ್ನಡಿಗ ಕುಟುಂಬವೊಂದನ್ನು ಯಾಮಾರಿಸಲು ಹೋದವನಿಗೆ ಮನೆಯ ಒಡೆಯನ ಮಗಳು (ಐಶಾನಿ ಶೆಟ್ಟಿ). ಈಕೆಯ ತಾಯಿ (ಸುಧಾರಾಣಿ) ತಂದೆ (ಅನಂತನಾಗ್) ಅವರದು ಇನ್ನೊಂದು ಕಥೆ. ಈ ಕಥೆಯೊಳಗೂ ವಾಸ್ತು ಬೆಸೆದುಕೊಳ್ಳುತ್ತದೆ.

ಹೀಗೆಲ್ಲ ಬೆಳೆಯುವ ಕಥೆ ತಾರ್ಕಿಕವಾಗಿ ಯಾವ ಅಂತ್ಯ ಕಾಣುತ್ತದೆ, ಇದನ್ನೆಲ್ಲ ನಿರ್ದೇಶಕ ಯೋಗರಾಜ್ ಭಟ್ ಹೇಗೆ ಪ್ರಸ್ತುತಿ ಪಡಿಸಿದ್ದಾರೆ ಎಂಬುದನ್ನು ಗಮನಿಸಿದರೆ ತೀವ್ರ ನಿರಾಶೆ ಕಾಣುತ್ತದೆ. ಭಟ್ಟರು ಬರೆದ ಈ ಚಿತ್ರಕ್ಕೆ ಬರೆದ ಸಂಭಾಷಣೆಗೆ ಹೇಗೆ ಲಂಗು-ಲಂಗಾಮು ಇಲ್ಲವೋ ಹಾಗೆ ದೃಶ್ಯಗಳಿಗೂ ಅಂಕೆ ಇಲ್ಲ. ಯದ್ವಾ-ತದ್ವಾ ದೃಶ್ಯಗಳು ಬೆಳೆಯುತ್ತಾ ಹೋಗುತ್ತವೆ.
ವಾಸ್ತು ನಂಬಿ ಮನೆಯ ಗೋಡೆಗಳನ್ನು ಕೆಡವಿ ಕಟ್ಟುವುದರ ಬದಲು ಅಲ್ಲಿ ವಾಸಿಸುವ ಸದಸ್ಯರ ಮನಗಳ ನಡುವಿನ ಗೋಡೆ ಕೆಡವಿ ಎನ್ನುವ ಭಟ್ಟರು ಅದಕ್ಕೆ ಪೂರಕವಾಗಿ ಸಿನೆಮಾ ಮುಂದಿಟ್ಟಿಲ್ಲ. ಇದನ್ನು ಗಮನಿಸಿದಾಗ ಇವರು ಚಿತ್ರಕಥೆ ರೂಪಿಸುವುದರಲ್ಲಿ ಪರಿಶ್ರಮ ಪಟ್ಟಿಲ್ಲ ಎನ್ನುವುದಂತೂ ಖಚಿತ ಆಗುತ್ತದೆ. ನಾಯಕಿ ತಾಯಿಯ ಕನಸಿನ ಶಂಕೆ ಮತ್ತು ಅದರ ಅಂತ್ಯ ಆಗುವ ರೀತಿ ಅಂತೂ ಬಾಲಿಶವಾಗಿದೆ. 
ವಾಸ್ತು ಹೆಸರಿನಲ್ಲಿ ನಡೆಯುವ ಕಾರ್ಯಗಳು-ಅಧ್ವಾನಗಳನ್ನು ಹೇಳಲು ಹೋಗಿರುವ ಭಟ್ಟರು ಅವುಗಳನ್ನು ವಿಡಂಬನಾತ್ಮಕವಾಗಿ ಪ್ರೇಕ್ಷಕರ ಮುಂದಿಡುವ ಅವಕಾಶಗಳು ಹೇರಳವಾಗಿದ್ದವು. ಟಿ.ವಿ. ವಾಹಿನಿಗಳು ಟಿ.ಆರ್.ಪಿ. ಗಾಗಿ ನಡೆಸುವ ಜ್ಯೋತಿಷ ಕಾರ್ಯಕ್ರಮಗಳು, ಇಂಥವುಗಳ ಮೂಲಕ ಜನಪ್ರಿಯರಾಗುವ ಜ್ಯೋತಿಷಿಗಳು ಮನೆ ಒಡೆಸುವುದು; ತನ್ಮೂಲಕ ಮನಗಳನ್ನು ಒಡೆಯುವ ವಿಷಯಗಳನ್ನು ವಿಷದವಾಗಿ ಹೇಳಬಹುದಾಗಿತ್ತು. ಚಿತ್ರವೆನೋ ವಾಸ್ತು ನಂಬಬೇಡಿ ಎಂಬ ಧ್ವನಿ ಹೊಂದಿದೆಯಾದರೂ ಹೇಳುವಿಕೆಯಲ್ಲಿ ಕ್ರಮ ಬದ್ಧತೆ ಇಲ್ಲ.
ನಟನೆ:
ಜಗ್ಗೇಶ್ ಲೀಲಾಜಾಲವಾಗಿ ನಟಿಸಿದ್ದಾರೆ. ಭಟ್ಟರ ಸಂಭಾಷಣೆ ಒಪ್ಪಿಸುವಿಕೆಯಲ್ಲಿಯೂ ಅವರು ಯಶಸ್ವಿ. ಆದರೆ ಇದೇ ಮಾತು ರಕ್ಷಿತ್ ಶೆಟ್ಟಿ ವಿಚಾರದಲ್ಲಿ ಉಲ್ಟಾ… ಅನಂತನಾಗ್ ಪಾತ್ರಕ್ಕೆ ಇಲ್ಲಿ ಹೆಚ್ಚು ಪೋಷಣೆ ಇಲ್ಲ. ವಾಸ್ತು ಹೇಳುವ ಜ್ಯೋತಿಷಿಯಾಗಿ ಸೀತಾರಾಮ್ ನಟನೆ ಅಚ್ಚುಕಟ್ಟು. ಸುಧಾರಾಣಿ, ಪಾರೂಲ್ ಯಾದವ್, ಐಶಾನಿ ಶೆಟ್ಟಿ, ಸುಧಾ ಬೆಳವಾಡಿ ಚಿತ್ರದಲ್ಲಿ ಇದ್ದಾರಷ್ಟೆ.

ಕ್ಯಾಮೆರಾ
ಸಂತೋಷ್ ಕ್ಯಾಮೆರಾ ಕೆಲಸ ಗಮನ ಸೆಳೆಯುತ್ತದೆ. ಹರಿಕೃಷ್ಣ ಸಂಗೀತ ಸರಾಸರಿ. ಹಾಡಿನ ಸಾಹಿತ್ಯಕ್ಕೂ ಇದೇ ಮಾತು ಹೇಳಬಹುದು. ಚಿತ್ರದ ಕ್ಯಾಪ್ಟನ್ ಅಂದರೆ ನಿರ್ದೇಶಕ ಯೋಗರಾಜ್ ಭಟ್ಟ ಸಿನೆಮಾದ ಎಲ್ಲ ವಿಭಾಗಗಳನ್ನು (ಚಿತ್ರಕಥೆಯೂ ಸೇರಿದಂತೆ) ಸೂಕ್ತ ರೀತಿ ಸಮನ್ವಯಗೊಳಿಸಿ ಮುಂದಿಡುವಲ್ಲಿ ಸೋತಿದ್ದಾರೆ. " ಮಾತಿನಲ್ಲಿ ಅರಮನೆ ಕಟ್ಟುವ ಕೆಲಸ" ಎಲ್ಲ ಸಂದರ್ಭಗಳಲ್ಲಿಯೂ ಯಶಸ್ವಿ ಆಗುವುದಿಲ್ಲ ಎಂಬುದನ್ನು ಅವರು ಅರಿಯುವ ಅಗತ್ಯ ಇದೆ. ಜೊತೆಗೆ ಔಚಿತ್ಯ ಪ್ರಜ್ಞೆಯನ್ನು ಸಹ ಮರೆಯಬಾರದು. ಇದನ್ನವರು ಮರೆತಿದ್ದಾರೆ ಎನ್ನುವುದಕ್ಕೆ ಒಂದು ಸಣ್ಣ ಉದಾಹರಣೆ ಕುಬೇರ ಹೇಳುವ "ಅವಳಿಗೆ (ನಾಯಕಿ) ಮುಲುಮುಲು, ನನಗೆ ವಿಲವಿಲ" 

4 comments:

  1. ಸಂತೆಯ ಗದ್ದಲದ ಹಾಗೆ ಇರುವ ಹಾಡುಗಳನ್ನೂ ವಿಮರ್ಶಿಸಬೇಕಾಗಿತ್ತು. ತಮಿಳು ಚಿತ್ರಗಳಲ್ಲಿ ಇಂಪಾದ ರಾಗಸಂಯೋಜನೆ ಹಾಗೂ ರಿದಂ ಇರುತ್ತದೆ. ಏನೇನೋ ವಾದ್ಯಗಳ ಅಬ್ಬರ... ಯಾಕೆ ಸಿನಿಮಾ ಮಾಡ್ತಾರೋ...

    ReplyDelete
  2. ಹೌದು... ನೀವು ಹೇಳುವುದು ಸರಿ ಸುಭಾಷಿಣಿ ಹಿರಣ್ಯ ಮೇಡಂ....

    ReplyDelete
  3. Lingaraj RoddanavarSaturday, 04 April, 2015

    ನಾನೂ ಇವತ್ತು ನೋಡಿದೆ. ಕುಮಾರಣ್ಣ ನೀವು ಹೇಳಿದ ಪ್ರತೀ ಸಾಲು ಅಕ್ಷರಶಃ ಸಸರಿಯಾಗಿದೆ. ಮೊದಲ ಸಲ ಭಟ್ಟರ ಪಿಕ್ಚರ್ ನನಗೆ ನಿರಾಶೆ ಮಾಡಿದೆ.... ವಾಸ್ತು, ಜ್ಯೋತಿಷ್ಯ, ಟಿ.ವಿ. ಚಾನಲ್ ಗಳ ಟಿಆರ್ ಪಿ ಭುೂತ ಕುರಿತು ಒಂದೊಳ್ಳೇ ಪಿಕ್ಚರ್ ಮಾಡಬಹುದಾಗಿತ್ತು...

    ReplyDelete
  4. ಗಟ್ಟಿಯಾದ ಚಿತ್ರಕಥೆ ಇಟ್ಟುಕೊಂಡು ಮುಂದುವರಿದಿದ್ದರೆ ಖಂಡಿತ 'ವಾಸ್ತು ಪ್ರಕಾರ' ಉತ್ತಮ ಸಿನೆಮಾ ಆಗುತ್ತಿತ್ತು. ನೀವು ಹೇಳಿದ ವಿಚಾರಗಳ ಬಗ್ಗೆ ಹೆಚ್ಚಿನ ಬೆಳಕು ಚೆಲ್ಲಬಹುದಾಗತ್ತು ಲಿಂಗರಾಜ್...

    ReplyDelete