• ಮುಖಪುಟ
  • ಸಿನಿಮಾ
  • ದೇಗುಲ ಸರಣಿ
  • ರಾಜಕೀಯ
  • ಭಾಷೆ
  • ಸಾಹಿತ್ಯ
  • ಪರಿಸರ
  • ರಂಗ ಕಲೆ
  • ಮಾಧ್ಯಮ
  • ಪ್ರವಾಸ
  • ಜೀವನಶೈಲಿ
  • ನನ್ನ ಬಗ್ಗೆ
  • ಸಂಪರ್ಕಿಸಿ

ಮನೋದೈಹಿಕ ತುಡಿತ-ಮಿಡಿತ ಅನಾವರಣ

ಭಾರತೀಯ ಸಿನೆಮಾ ರಂಗ ಚಿತ್ರಗಳಲ್ಲಿಯೆ ವಿಶಿಷ್ಟ "ಮಾರ್ಗರಿಟಾ ವಿತ್ ಸ್ಟ್ರಾ" ಕಾರಣ ಇದರ ವಸ್ತು ವಿಷಯ. ಸೆರೆಬ್ರಲ್ ಪಾಲ್ಸಿ* ಪೀಡಿತ ಯುವತಿ ಅನುಭವಿಸುವ ತವಕ ತಲ್ಲಣಗಳನ್ನ ಸಮರ್ಥವಾಗಿ ಹೇಳಲು ಯತ್ನಿಸಿರುವ ಚಿತ್ರ ಇದು. ಆಯ್ಕೆ ಮಾಡಿಕೊಂಡಿರುವ ವಿಷಯ ಸರಳ ಅಲ್ಲ.

'ಸೆರೆಬ್ರಲ್ ಪಾಲ್ಸಿ' ( Cerebral Palsy) ತೊಂದರೆ ಉಳ್ಳವರನ್ನ ಸಮಾಜ ನೋಡುವ ರೀತಿ ಅಸಹಜ. ಇಂಥವರಿಗೆ ಭಾವನೆಗಳೇ ಇಲ್ಲ, ಬುದ್ದಿ ಮಾಂದ್ಯರು, ಚೇತನವೇ ವಿಕಲ ಆದವರು ಎಂಬಂತೆ ನೋಡುತ್ತದೆ. ಇದು ಸಹ ಇಂಥ ಸ್ಥಿತಿ (C.P.) ಉಳ್ಳವರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸದೆ ಇರಲು ಪ್ರಮುಖ ಕಾರಣ.
'ಕಾಮ' ಅದಮ್ಯ, ಅಪಾರ. ಆಕಾಂಕ್ಷಿತ. "ಸೆರೆಬ್ರಲ್ ಪಾಲ್ಸಿ' ಇರುವವರಲ್ಲಿಯೂ ಇರುತ್ತದೆ. ಆದು ಹೇಗೆ ವ್ಯಕ್ತ ಆಗಲು ಯತ್ನಿಸುತ್ತಿರುತ್ತದೆ. ಇಂಥ ಸಂದರ್ಭಗಳಲ್ಲಿ ಇವರು ಹೇಗೆ ತಿರಸ್ಕೃತ ಆಗಿ ಸಂಕಟ ಅನುಭವಿಸುತ್ತಾರೆ ಎನ್ನುವುದನ್ನು ಹಂತ ಹಂತವಾಗಿ ಹೇಳುತ್ತಾ ಹೋಗುತ್ತದೆ.
ಸಿ.ಪಿ. ಇರುವ ಮಗಳು ಲೈಲಾ ಸಾಮಾನ್ಯರಂತೆ ಬದುಕು ಸಾಗಿಸಬೇಕು ಎಂದು ಶಕ್ತಿ ಮೀರಿ ಶ್ರಮಿಸುವ ತಂದೆ-ತಾಯಿ; ಅವರ ದುಮ್ಮಾನ ಕೂಡ ಸಮರ್ಥವಾಗಿ ಚಿತ್ರಣಗೊಂಡಿದೆ. ಆಪ್ತಳಾದ ತಾಯಿಯು ಲೈಲಾಳಲ್ಲಿ ಉಂಟಾಗುವ ಬದಲಾವಣೆ ತುಡಿತಗಳನ್ನು ಶೀಘ್ರ ಗ್ರಹಿಸುವುದಿಲ್ಲ. ಆದರೆ ಈ ಜೀವ ತನ್ನ ತುಡಿತ ಕೇಳಿಸಿಕೊಳ್ಳುವ ಮತ್ತೊಂದು ಜೀವಕ್ಕಾಗಿ ಮಿಡಿಯುತ್ತಿರುತ್ತದೆ. ಮಿತ್ರನೋರ್ವ ಇದ್ದರೂ ಈಕೆ ಹಂಬಲಿಸುವುದು ದೈಹಿಕ ಪರಿಪೂರ್ಣತೆ, ಆರೋಗ್ಯ ಇರುವ ಸಂಗಾತಿಗಾಗಿ.
ವಿದ್ಯಾಭ್ಯಾಸಕ್ಕಾಗಿ ನ್ಯೂಯಾರ್ಕ್ ಯೂನಿವರ್ಸಿಟಿಗೆ ತೆರಳುವ ಲೈಲಾ ಮತ್ತೊಂದು ಹಾದಿಗೆ ಹೊರಳುತ್ತಾಳೆ. ಇಲ್ಲಿ ತನ್ನ ಅದಮ್ಯ ಮಿಡಿತದ ಸೂಕ್ತ ಪರಿಹಾರ ಕಾಣದ ತುಮುಲದ ನಡುವೆ ಸಲಿಂಗ ಕಾಮಿಯಾಗುತ್ತಾಳೆ. ಆದರೀಕೆ ಈ ಸ್ಥಿತಿಗೆ ಶರಣಾಗುವುದಿಲ್ಲ. ಬೈ ಸೆಕ್ಷುವಲ್ ಹಂತದಲ್ಲಿಯೂ ಇರುತ್ತಾಳೆ. ರಜೆ ನಡುವೆ ಸ್ವದೇಶಕ್ಕೆ ಬಂದಿದ್ದಾಗಲೆ ಆಕೆಯ ಬದುಕಿನ ದೊಡ್ಡ ಆಘಾತ ಘಟಿಸುತ್ತದೆ. 


ಸಲಿಂಗ ಸಂಗಾತಿ ಆಗಿ ಮುಂದುವರಿಯಲು ನಿರಾಕರಿಸುತ್ತಾಳೆ ಮತ್ತೆ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಮರಳುವುದನ್ನೂ ನಿರಾಕರಿಸಿ ಬದುಕು ಕಟ್ಟಿಕೊಳ್ಳಲು ನಿರ್ಧರಿಸುತ್ತಾಳೆ. ಆಕೆ ಕೈಗೊಳ್ಳುವುದು ಮಹತ್ವದ ನಿರ್ಧಾರ. ಇಂಥ ನಿರ್ಧಾರಕ್ಕೆ ಆಕೆಯ ಬದುಕಿನ ಹಿನ್ನೆಲೆ ಚಿತ್ರಗಳು ಕಾರಣ ಆಗಿರುತ್ತವೆ.
ನಿರ್ದೇಶಕಿ ಕಥೆ ಹೇಳುವ ರೀತಿಯೆ ವಿಭಿನ್ನ. ಚಿತ್ರದಲ್ಲಿ ವಾಚಾಳಿತನದ ಸನ್ನಿವೇಶಗಳು ಇಲ್ಲ. ಸೆರೆಬ್ರಲ್ ಪಾಲ್ಸಿ ಸಂಕಟದ ಯುವತಿ ಜಗತ್ತನ್ನು ಕೌತುಕದ ಕಣ್ಣಿನಿಂದ ಗ್ರಹಿಸುತ್ತಾ ಹೋಗುವುದನ್ನು ದಾಖಲಿಸುತ್ತಾ ಹೋಗುತ್ತಾರೆ. ಯಾವುದೆ ಸನ್ನಿವೇಶಗಳು ಅಶ್ಲೀಲ ಎನ್ನುವ ಹಂತಕ್ಕೆ ಜಾರದಂತೆ ಜತನ ತೋರಿದ್ದಾರೆ.

ಬಾಯಿ ಮಾತಿನಲ್ಲಿ ಧಾರಾಳ ಅನುಕಂಪ ತೋರುವ ಭಾರತೀಯ ಸಮಾಜ ಹೇಗೆ ವಿಕಲ ಚೇತನರ ಬಗ್ಗೆ ಕಾರುಣ್ಯ ಹೊಂದಿರುವುದಿಲ್ಲ ಎಂಬುವುದನ್ನು ನಿರ್ದೇಶಕಿ ಒಂದೆರಡು ದೃಶ್ಯಗಳಲ್ಲಿಯೆ  ತೀಷ್ಣವಾಗಿ ಹೇಳಿದ್ದಾರೆ. ಕಾಲೇಜು ಕಟ್ಟಡದ ಮಹಡಿಯಲ್ಲಿರುವ ಕ್ಲಾಸ್ ರೂಮಿಗೆ ಲೈಲಾಳನ್ನು ಆಕೆಯ ವ್ಹೀಲ್ ಚೇರ್ ಕಾರ್ ಮುಖಾಂತರ ಅಲ್ಲಿನ ಅಟೆಂಡರ್ಸ್ ಕಷ್ಟದಿಂದ ಹೊತ್ತೊಯ್ಯುತ್ತಾರೆ. ಇದು ಪ್ರತಿದಿನದ ಕಾರ್ಯ. ಕಟ್ಟಡ ವಿನ್ಯಾಸಕಾರರು ವಿಕಲ ಚೇತನ ವಿದ್ಯಾರ್ಥಿಗಳೂ ಕಲಿಯಲು ಬರುತ್ತಾರೆ ಎನ್ನುವುದನ್ನು ದೃಷ್ಟಿಯಲ್ಲಿಟ್ಟುಕೊಂಡಿದ್ದರೆ ಏರು-ಇಳಿಜಾರು ವಿನ್ಯಾಸ ನಿರ್ಮಿಸುತ್ತಾರೆ. ಇಂದು ನೂರಕ್ಕೆ 99ರಷ್ಟು ಶೈಕ್ಷಣಿಕ ಸಂಸ್ಥೆ ಅಥವಾ ಇನ್ಯಾವುದೆ ಸಂಸ್ಥೆಗಳಲ್ಲಿ ವಿಕಲ ಚೇತನರ ಸಹಾಯಕ್ಕಾಗಿ ಇಂಥ ವಿನ್ಯಾಸ ಇರುವುದೇ ಇಲ್ಲ.
ವಿದೇಶದಲ್ಲಿ ಲೈಲಾ ಸಂಚರಿಸಲು ಸಾರ್ವಜನಿಕ ಸಾರಿಗೆ ಅವಲಂಬಿಸಿರುತ್ತಾಳೆ. ಈಕೆ ಮುಂದೆ ನಿಲ್ಲುವ ಬಸ್ಸಿನಿಂದ ಸಲೀಸಾಗಿ ವ್ಹೀಲ್ ಚೇರ್ ಬಳಸಿ ಬಸ್ ಏರಲು ಅನುವಾಗುವಂತೆ ಇಳಿಜಾರು ಹೊರ ಚಾಚುತ್ತದೆ. ಭಾರತೀಯ ಸಾರ್ವಜನಿಕ ಸಾರಿಗೆಗಳಲ್ಲಿ ಇಂಥ ದೃಷ್ಟಿಕೋನ ಇದೆಯೆ ? ಇಂಥ ದೃಶ್ಯಗಳು ನಾವು ಭಾರತೀಯರೆಷ್ಟು ಅಸೂಕ್ಷ್ಮರು ಎಂಬುವುದನ್ನು ನಿರೂಪಿಸುತ್ತದೆ.
ಸೆರೆಬ್ರಲ್ ಪಾಲ್ಸಿ ತೊಂದರೆ ಇರುವ ಯುವತಿ ಪಾತ್ರದಲ್ಲಿ ಕಲ್ಕಿ ಕೊಚ್ಲಿನ್ ಪರಕಾಯ ಪ್ರವೇಶ ಮಾಡಿದ್ದಾರೆ. ಸಲಿಂಗ ಕಾಮ ಪ್ರವೃತ್ತಿ ಇರುವ ಅಂಧ ಯುವತಿ ಪಾತ್ರದಲ್ಲಿ ಸಯಾನಿ ಗುಪ್ತ ಅಭಿನಯ ಸಮರ್ಥ. ತಾಯಿ ಪಾತ್ರಕ್ಕೆ ರೇವತಿ ನ್ಯಾಯ ಒದಗಸಿದ್ದಾರೆ. ಚಿತ್ರದಲ್ಲಿ ಅಭಿನಯಿಸಿರುವ ಎಲ್ಲ ಪಾತ್ರಧಾರಿಗಳ ಬಗ್ಗೆಯೂ ಇದೆ ಮಾತು ಸಲ್ಲುತ್ತದೆ.
ಇಲ್ಲಿ ನಿರ್ದೇಶಕಿ ಶೋನಾಲಿ ಬೋಸ್ ಅವರ ಬಗ್ಗೆ ವಿಶೇಷವಾಗಿ ಹೇಳಬೇಕು. ಸಿನೆಮಾ ಮಾಡಲು ಹಿಂಜರಿಕೆ ಉಂಟು ಮಾಡುವಂಥ ಕಥಾವಸ್ತುವನ್ನು ಇವರು ಕೈಗೆತ್ತಿಕೊಂಡು ಚಿತ್ರಿಸಿರುವ ರೀತಿ ಮನೋಜ್ಞ. . ಇಂಥ ಚಿತ್ರಕಥೆಗಳನ್ನು ಸಿನೆಮಾ ಆಗಿ ಪ್ರೇಕ್ಷಕರ ಮುಂದಿಡುವಾಗ ಎದುರಾಗುವ ಸವಾಲು ಅನೇಕ. ಅವುಗಳನ್ನು ನಿರ್ದೇಶಕಿ ಶೋನಾಲಿ ಬೋಸ್ ಸ್ವೀಕರಿಸಿ ಗೆದ್ದಿದ್ದಾರೆ. ಸಂಗೀತ ನಿರ್ದೇಶಕ ಮಿಕ್ಕಿ ಮ್ಯಾಕ್ಲೇರಿ, ಛಾಯಾಗ್ರಹಣ ಮಾಡಿರುವ ಆ್ಯನೆ ಮಿಶ್ವ, ಸಂಕಲನ ಮಾಡಿರುವ ಮೋನಿಶಾ ಆರ್ ಬಲ್ದವಾ ತಮ್ಮ ತಮ್ಮ ವಿಭಾಗಗಳ ಕೆಲಸವನ್ನು ಕುಸುರಿ ಕಾರ್ಯದ ರೀತಿ ಮಾಡಿದ್ದಾರೆ. 

*ಸೆರೆಬ್ರಲ್ ಪಾಲ್ಸಿ: ಪ್ರಸವ ಪೂರ್ವ ಅಥವಾ ಪ್ರಸವೋತ್ತರ ಹಂತದಲ್ಲಿ ಭ್ರೂಣ/ ಶಿಶುವಿನ ಮೆದುಳಿನ ಅಂಗಾಂಗ ನಿಯಂತ್ರಿಸುವ ಭಾಗಕ್ಕೆ ಧಕ್ಕೆಯಾದರೆ ಸೆರೆಬ್ರಲ್ ಪಾಲ್ಸಿ ಉಂಟಾಗುತ್ತದೆ. ಈ ಹಂತಗಳಲ್ಲಿ ನಾನಾ ಕಾರಣಗಳಿಂದ ಇಂಥ ಸಮಸ್ಯೆ ಉಂಟಾಗುತ್ತದೆ.
ಇಂಥವರಲ್ಲಿ ಸರಾಗ ಅಂಗಾಂಗ ಚಲನೆ ಕಷ್ಟವಾಗುತ್ತದೆ. ಮೌಖಿಕ ಶಕ್ತಿಯೂ ಉತ್ತಮ ಆಗಿರುವುದಿಲ್ಲ. ಇದಕ್ಕೆ ನಾಲಿಗೆ ಸಮರ್ಥವಾಗಿ ಹೊರಳದಿರುವುದು ಕಾರಣ. ಇವೆಲ್ಲದರ ಪರಿಣಾಮ ತಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ಇತರರ ನೆರವಿಲ್ಲದೆ ಮಾಡಿಕೊಳ್ಳುವುದು ಕಡು ಕಷ್ಟ.

*ಮಾರ್ಗರಿಟ ಎನ್ನುವುದು ತಂಪು ಪಾನೀಯ

No comments:

Post a Comment