• ಮುಖಪುಟ
  • ಸಿನಿಮಾ
  • ದೇಗುಲ ಸರಣಿ
  • ರಾಜಕೀಯ
  • ಭಾಷೆ
  • ಸಾಹಿತ್ಯ
  • ಪರಿಸರ
  • ರಂಗ ಕಲೆ
  • ಮಾಧ್ಯಮ
  • ಪ್ರವಾಸ
  • ಜೀವನಶೈಲಿ
  • ನನ್ನ ಬಗ್ಗೆ
  • ಸಂಪರ್ಕಿಸಿ

ಕಾದಲ್ ಕಣ್ಮಣಿ ಒಂದು ಮಧುರ ಆಲಾಪ

ಹೊರಗೆ ಮಳೆ ಸ್ವರ, ಒಳಗೆ ಹಿಂದೂಸ್ತಾನಿ ರಾಗ ಸುಸ್ವರ. ಕೈಯಲ್ಲಿ ಸ್ಟ್ರಾಂಗ್ ಕಾಫಿ; ಪಕ್ಕದಲ್ಲಿ ಹದವಾಗಿ ಕಾರ ಬೆರೆತ ಗೋಡಂಬಿ ವ್ಹಾವ್ ಅನಿಸುತ್ತೆ ಅಲ್ವ. ಕಾದಲ್ ಕಣ್ಮಣಿ ಸಿನೆಮಾ ನೋಡಿದಾಗ ಇಂಥದ್ದೆ ಭಾವ ಮೂಡುತ್ತೆ. ವರ್ತಮಾನದ ಒಂದು ವಿಷಯ ಆಯ್ಕೆ ಮಾಡಿ, ಕುಸುರಿ ಕಾರ್ಯದ ಹಾಗೆ ವಿವರಗಳನ್ನು ಒಡಮೂಡಿಸಿ  ದೃಶ್ಯಕಾವ್ಯ ಹೊಮ್ಮುವಂತೆ ಮಾಡುವುದು ದೊಡ್ಡ ಸವಾಲು. 

ಸಮಕಾಲೀನ ಜಗತ್ತು ಒಂದೇ ಹೂರಣ ಹೊಂದಿರುವ ಎರಡು ಬೇರೆಬೇರೆ ವಿಷಯಗಳಿಗೆ ಸಾಕ್ಷಿಯಾಗಿದೆ. ಒಂದು ಸಾಂಪ್ರದಾಯಿಕ ವಿಧಿ ವಿಧಾನಗಳೊಂದಿಗೆ ವಿವಾಹ ಮೂಲಕ ಎರಡು ದೇಹ/ ಮನಸು ಮಿಲನ ಆಗುವಿಕೆ. ಎರಡನೇಯದು ಮದುವೆ ಆಗದೆಯೂ ಜೊತೆಗಿದ್ದು ಪರಸ್ಪರ ಕಂಫರ್ಟಬಲ್ ಆಗಿರುವಿಕೆ. ಇವುಗಳಲ್ಲಿ ಸಕಾರಾತ್ಮಕ/ ನಕಾರಾತ್ಮಕ ಅಂಶಗಳೂ ಇವೆ. ಯಾವ ಅಂಶ ಹೆಚ್ಚು ಎನ್ನುವುದರ ಮೇಲೆ ಸಂಬಂಧದ ಆಯಸ್ಸು ಆಧಾರಿತ.
ಪ್ರಸ್ತುತ ವಿಷಯ ಇಟ್ಟುಕೊಂಡು ಅದರ ವಿವರಗಳನ್ನು ನಿರ್ದೇಶಕ ಮಣಿರತ್ನಂ ಬಿದರಿ ಕಲೆ ಹಾಗೆ ಪ್ರೇಕ್ಷಕರ ಮುಂದಿಡುತ್ತಾ ಮುನ್ನಡೆಯುತ್ತಾರೆ. ಕಥೆ ಕಸು ಕಳೆದುಕೊಳ್ಳದೆ ಮುಂದುವರಿಯುತ್ತಾ ಹೋಗುತ್ತದೆ. ಹಾಗೆ ಅದರ ಟೆಂಪೊ ಕೂಡ ಏರುತ್ತಾ ಹೋಗುತ್ತದೆ. 
ಇಲ್ಲಿ ಆಯಾ ಜಮಾನ ಪ್ರತಿನಿಧಿಸುವ ಪಾತ್ರಗಳಿವೆ. ಅವುಗಳಿಗೆ ಅವುಗಳದ್ದೆ ಆದ ತವಕ, ತಲ್ಲಣ, ತನ್ಮಯತೆ ಇದೆ. ಇಂದಿನ ಜಮಾನ ಪಾತ್ರಗಳಿಗೆ ಕೊಟ್ಟಷ್ಟೆ ಮಹತ್ವ ಹಿಂದಿನ ಜಮಾನದವರಿಗೂ ದೊರೆತಿದೆ. ಆಯಾ ತಲೆಮಾರುಗಳನ್ನು ಸಮರ್ಥವಾಗಿ ಪ್ರತಿನಿಧಿಸುವ ನಿಟ್ಟಿನಲ್ಲಿ ಪಾತ್ರಧಾರಿಗಳ ಆಯ್ಕೆ ಆಗಿರುವುದು ಎದ್ದು ಕಾಣುತ್ತದೆ.
ಎ.ಕೆ. 47 ಮಾದರಿ ಡೈಲಾಗ್ ಮತ್ತು ಭಾವಗಳನ್ನು ಒಪ್ಪಿಸುವ ಪ್ರಕಾಶ್ ರೈ ಹಿಂದಿನ ಜಮಾನ ಪ್ರತಿನಿಧಿಯಾಗಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರ ನಿರ್ವಹಣೆ ಎಷ್ಟು ಸಹಜ ಎಂದರೆ ರೈ ಹೊರತು ಇನ್ಯಾರಿಗೂ ಅದು ಸಾಧ್ಯ ಆಗುತ್ತಿರಲಿಲ್ಲ ಅನಿಸುತ್ತದೆ. ಇವರ ಪತ್ನಿ ಪಾತ್ರಧಾರಿ ಲೀಲಾ ಸ್ಯಾಮ್ಸನ್ ಮೆಚ್ಚುಗೆ ಪಡೆಯುತ್ತಾರೆ.
ಯುವ ಜನಾಂಗದ ಬಿರುಸು, ಭಾವ ಬಿಂಕಗಳನ್ನು ಸಮರ್ಥವಾಗಿ ಹೊಮ್ಮಿಸಬಲ್ಲ, ತನ್ಮೂಲಕ ಕಥೆ ಬೇಡುವ ಭಾವಗಳನ್ನು ನೋಡುಗರಿಗೆ ದಾಟಿಸಬಲ್ಲ ಸೂಕ್ತ ಆಯ್ಕೆಗಳಾಗಿ ದುಲ್ಕೇರ್ ಸಲ್ಮಾನ್, ನಿತ್ಯಾ ಮೆನನ್ ಇದ್ದಾರೆ. ಪೂರಕ ಪಾತ್ರಧಾರಿಗಳ ಆಯ್ಕೆಯಲ್ಲಿಯೂ ನಿರ್ದೇಶಕ ಜತನ ವಹಿಸಿರುವುದು ಕಾಣುತ್ತದೆ.

ತಾರಾ ಮತ್ತು ಆದಿತ್ಯ ವರದರಾಜನ್ ಎಳಸು ನಾಯಕಿ, ನಾಯಕರಲ್ಲ. ತಾವು ಆಲೋಚಿಸಿದ, ಒಪ್ಪಿದ ಸಂಗತಿಗಳಿಗೆ ಅವರಲ್ಲಿ ಬದ್ಧತೆ ಇದೆ. ಹಳತನ್ನು ತಿರಸ್ಕರಿವವರೂ ಅಲ್ಲ. ಸಾಂಪ್ರದಾಯಿಕ ಮೌಲ್ಯಗಳನ್ನು ಪ್ರತಿನಿಧಿಸುವವರ ಬಗ್ಗೆ ಅವರಿಗೆ ಗೌರವ ಜೊತೆಗೆ ಕಾಳಜಿಯೂ ಇದೆ. ಗಣಪತಿ ಮತ್ತು ಭವಾನಿ ಅವರಿಗೆ ಹೊಸ ಮೌಲ್ಯ ವಿಚಾರಗಳನ್ನು ಪ್ರತಿನಿಧಿಸುವವರ ಬಗ್ಗೆ ಬೆರಗು/ ಅನುಕಂಪ ಇದೆಯೇ ಹೊರತು ತಿರಸ್ಕಾರ ಇಲ್ಲ.
ಪ್ರಸಕ್ತ ಯುವ ಜನಾಂಗ ಪ್ರತಿಪಾದಿಸುವ ಸಂಗತಿಗಳನ್ನ ಗಣಪತಿ ಸುಲಭವಾಗಿ ಒಪ್ಪುವವರಲ್ಲ. ಆದರೆ ಭವಾನಿ ವಿಭಿನ್ನ. ತನ್ನ ಕಾಲ, ವಿಚಾರಗಳೇ ಶ್ರೇಷ್ಠ ಎಂದೇನೂ ಆಕೆ ಭಾವಿಸಿಲ್ಲ. ಹೊಸದನ್ನೂ ಮನ್ನಿಸಬೇಕು ಎಂಬ ಧಾರೆ. ಆದ್ದರಿಂದಲೆ ಆಕೆ ಆದಿತ್ಯ ವರದರಾಜನ್ ಮತ್ತು ತಾರಾ ಇಬ್ಬರನ್ನೂ ಒಪ್ಪಿಕೊಳ್ಳುತ್ತಾರೆ. ಇದರ ಮೂಲಕ ಪುರುಷನಿಗಿಂತ ಮಹಿಳೆ ಶೀಘ್ರ ಪ್ರಗತಿಗಾಮಿ, ಬದಲಾವಣೆಗಳನ್ನು ಸ್ವೀಕರಿಸುವ ಶಕ್ತಿ ಇರುವವಳು ಎಂದು ನಿರ್ದೇಶಕ ಮಣಿರತ್ನಂ ಹೇಳಿದ್ದಾರೆ. ಇಲ್ಲಿ ಭವಾನಿಗೆ ಉಂಟಾಗುವ ಅಲ್ಜೀಮರ್ ಕಾಯಿಲೆ ಕೂಡ ಪಾತ್ರಧಾರಿ !. ಈ ಸಂಕೇತದ ಮೂಲಕ ಹಳೆಯ ಸ್ಮೃತಿಯೇ (ಆಚಾರ-ವಿಚಾರ) ಆದರ್ಶ ಎಂಬುದು ಕ್ರಮೇಣ ಹೇಗೆ ವಿಸ್ಮೃತಿ ಆಗುತ್ತಿದೆ; ಆಗಲಿದೆ, ಆಗಲೇಬೇಕು ಎಂಬುದನ್ನು ಸೂಕ್ಷ್ಮವಾಗಿ ಹೇಳಿದ್ದಾರೆ.
ಚಿತ್ರದಲ್ಲಿ ಬರುವ ಮುಂಬೈ, ಅಲ್ಲಿಯ ಮನೆ, ರಸ್ತೆ, ಲೋಕಲ್ ಟ್ರೈನ್, ಡಬ್ಬಲ್ ಡೆಕ್ಕರ್ ಬಸ್ಸು, ಬುಲೆಟ್ ಮೋಟಾರ್ ಬೈಕ್, ಸಮುದ್ರ ಮತ್ತು ಮಳೆ ಎಲ್ಲವೂ ಸಾಂಕೇತಿಕ. ಇವುಗಳು ಕೂಡ ಮಾತನಾಡುತ್ತವೆ. ಸಣ್ಣ ಉದಾಹರಣೆ ಕೊಡುವುದಾದರೆ ಬುಲೆಟ್ ಇಲ್ಲಿ ಬಿರುಸಿಗೆ; ಮಳೆ, ಗೊಂದಲ, ಅಳಿದುಳಿದ ಸಂಶಯ ಕೊಳೆ ತೊಳೆಯುವ ಸಂಕೇತಗಳಾಗಿ ಕಾಣಿಸಿಕೊಂಡಿವೆ.  

ಇಷ್ಟೆಲ್ಲ ಸಂಗತಿ ಒಡಮೂಡಿಸಲು ಸ್ಕ್ರಿಫ್ಟ್ ಸಶಕ್ತ ಆಗಿರಲೇಬೇಕು. ಇಂಥ ಚಿತ್ರಕಥೆಯನ್ನು ಸ್ವತಃ ಮಣಿರತ್ನಂ ರಚಿಸಿದ್ದಾರೆ. ಇದರ ಪ್ರತಿಯೊಂದು ಸಣ್ಣಸಣ್ಣ ವಿವರಗಳನ್ನೂ ಅವರು ಗಮನಿಸಿದ್ದಾರೆ ಎಂದು ಸಿನೆಮಾ ನೋಡುಗರಿಗೆ ಮನದಟ್ಟಾಗುತ್ತದೆ. ಕಥೆ ಕೇಳುವುದು ಮಹಾನಗರಿಯನ್ನು. ಇದಕ್ಕಾಗಿ ಮುಂಬೈ ಆಯ್ಕೆ ಮಾಡಿಕೊಂಡಿದ್ದಾರೆ. ಅರೆ ಮುಂಬೈ ಹೊರತು ಬೇರೆ ಯಾವ ಮಹಾನಗರಗಳು ಆಗುತ್ತಿರಲಿಲ್ಲವೆ ಎಂದೆನಿಸಿದರೂ ಸಿನೆಮಾ ಹೇಳಲು ಹೊರಟಿರುವ ಸಂಗತಿ ಮನಗಾಣಿಸಲು ಮುಂಬೈ ಹೊರತು ಬೇರೆ ಯಾವ ನಗರಿಯೂ ಸೂಕ್ತ ಆಗುತ್ತಿರಲಿಲ್ಲ ಎಂಬುದು ತಂತಾನೆ ತಿಳಿಯುತ್ತದೆ.

ಪಿ.ಸಿ. ಶ್ರೀರಾಮ್ ಅವರ ಕ್ಯಾಮೆರಾ ಚಿತ್ರಕಥೆ ಸೂಕ್ಷ್ಮತೆ ಅರ್ಥ ಮಾಡಿಕೊಂಡು ಅದರ ಇತಿ-ಮಿತಿಯಲ್ಲಿಯೆ ಮೋಹಕ ಕಸುಬುದಾರಿಕೆ ತೋರಿದೆ. ಎ.ಆರ್. ರೆಹಮಾನ್ ಅವರ ಸಂಗೀತ ಸಂಯೋಜನೆಗೂ ಇದೆ ಮಾತು ಸಲ್ಲುತ್ತದೆ. ಹಾಡುಗಳು ಮತ್ತು ಹಾಡಿಗೆ ಹೊರತಾದ ದೃಶ್ಯಗಳ ಮಹತ್ತನ್ನು ಅವರ ಸಂಗೀತ ಹೆಚ್ಚಿಸಿದೆ. ಸಂಕಲನ ಕಾರ್ಯ ಕೂಡ ದಿ ಬೆಸ್ಟ್. ಕಾದಲ್ ಕಣ್ಮಣಿ ನೋಡುತ್ತಾ ಕುಳಿತರೆ ಎರಡೂ ಕಾಲು ಗಂಟೆ ಕೆಲವೇ ನಿಮಿಷಗಳಂತೆ ಸರಿದು ಹೋಗುತ್ತದೆ.

No comments:

Post a Comment