• ಮುಖಪುಟ
  • ಸಿನಿಮಾ
  • ದೇಗುಲ ಸರಣಿ
  • ರಾಜಕೀಯ
  • ಭಾಷೆ
  • ಸಾಹಿತ್ಯ
  • ಪರಿಸರ
  • ರಂಗ ಕಲೆ
  • ಮಾಧ್ಯಮ
  • ಪ್ರವಾಸ
  • ಜೀವನಶೈಲಿ
  • ನನ್ನ ಬಗ್ಗೆ
  • ಸಂಪರ್ಕಿಸಿ

ಯೂ ಟರ್ನ್ಗೆ ಆತ್ಮವಿದೆಯೇ…


ಲೂಸಿಯಾ ಸಿನೆಮಾ ಖ್ಯಾತಿಯ ಪವನ್ ಕುಮಾರ್ ನಿರ್ದೇಶನದ 'ಯೂ ಟರ್ನ್' ಸಿನೆಮಾ ನೋಡಿದ ನಂತರ ಈ ಚಿತ್ರದ ವಿಶೇಷತೆ ಏನು ? ಕಥೆ, ಚಿತ್ರಕಥೆ, ನಿರ್ದೇಶನ, ನಟನೆ, ಛಾಯಾಗ್ರಹಣ, ಸಂಕಲನ ? ?? ಅಥವಾ ಇವೆಲ್ಲವೂ ವಿಶೇಷತೆ ಹೊಂದಿರುವ ಅಂಶಗಳೇ… ? ಎಂಬ ಪ್ರಶ್ನೆಗಳು ಮೂಡುತ್ತವೆ.
ನಾನು ಈ ಸಿನೆಮಾ ನೋಡಿ ಒಂದು ವಾರ ಆಯಿತು. ಆಗಿನಿಂದಲೂ ಕೆಲಸದ ನಡುವೆ ತುಸು ಬಿಡುವು ಸಿಕ್ಕಗಲೆಲ್ಲ ಈ ಪ್ರಶ್ನೆ ಧುತ್ತನೆ ಎದುರಾಗುತ್ತಿತ್ತು. ಬಹುಶಃ ಪವನ್ ಕುಮಾರ್ ಅವರಿಗೆ ಲೂಸಿಯಾ ಖ್ಯಾತಿ ಇಲ್ಲದಿರುತ್ತಿದ್ದರೆ ಇಂಥ ಪ್ರಶ್ನೆಗಳು ಎದುರಾಗುತ್ತಿರಲಿಲ್ಲ. ಓರ್ವ ನಿರ್ದೇಶಕನಿಗೆ ಒಂದು ವಿಭಿನ್ನ ಸಿನೆಮಾ ತಂದು ಕೊಡುವ ಹೆಸರು, ಆತನ ಮುಂದಿನ ಸಿನೆಮಾಗಳ ಬಗ್ಗೆ ಪ್ರೇಕ್ಷಕರಲ್ಲಿ ನಿರೀಕ್ಷೆಗಳನ್ನು ಮೂಡಿಸುವುದು ಸಹಜ.
ಈ ಸಿನೆಮಾ ತೆರೆದುಕೊಳ್ಳುವುದೇ ಇಡೀ ಚಿತ್ರದ ಒಟ್ಟು ಹಂದರಕ್ಕೆ ಹೊಂದದ ದೃಶ್ಯ ಮತ್ತು ಮಾತುಗಳ ಮೂಲಕ. ಇದು  ಚಿತ್ರದ ನಿರ್ದೇಶನ ಮತ್ತು ಸಂಕಲನ ಹೇಗಿರಬಹುದು ಎಂದು ತಿಳಿಸುವ ಮುನ್ಸೂಚನೆಯಂತಿದೆ. ' ಅನ್ನ ಬೆಂದಿದೆಯೋ ಇಲ್ಲವೋ ನೋಡಲು ಒಂದು ಅಗುಳು ಹಿಚುಕಿ ನೋಡಿದರೆ ಸಾಕು' ಅಂತಾರಲ್ಲ ಹಾಗೆ.
ಮಹಾನಗರವೊಂದರ ಫ್ಲೈ ಓವರ್ ಮೇಲೆ ಸಾಗುವ ದ್ವಿಚಕ್ರ ವಾಹನ ಸವಾರರು ಏಕೆ ರಸ್ತೆ ವಿಭಜಕ ಕಾಂಕ್ರೀಟ್ ಬ್ಲಾಕುಗಳನ್ನು ಸರಿಸಿ 'ಯೂ ಟರ್ನ್' ತಗೋತ್ತಾರೆ. ಅದಕ್ಕಿರುವ ಕಾರಣಗಳೇನು ? ಇದು ಪತ್ರಿಕೆಯೊಂದರ ವರದಿಗಾರ್ತಿ ರಚನಾಳಿಗೆ ಮೂಡುವ ಪ್ರಶ್ನೆ. ಇದನ್ನೇ ವಸ್ತುವಾಗಿಟ್ಟುಕೊಂಡು ಆಕೆ ವಿಶೇಷ ಲೇಖನ ಮಾಡಲು ಹೊರಡುತ್ತಾಳೆ. ಸಂಚಾರಿ ಸಮಸ್ಯೆಯೊಂದರ ಬೆನ್ನತ್ತಿದ ಅವಳಿಗೆಯೇ ಸಮಸ್ಯೆಗಳು ಬೆನ್ನತ್ತುತ್ತವೆ.
ಸಂಚಾರಿ ನಿಯಮ ಉಲ್ಲಂಘಿಸಿದವನ ಸಂದರ್ಶನ ಮಾಡಲು ಹೋಗಿ ಸಾಧ್ಯವಾಗದೇ ಮನೆಗೆ ಮರಳಿದವಳ ಬೆನ್ನ ಹಿಂದೆಯೇ ಪೊಲೀಸರು ಬಂದಿರುತ್ತಾರೆ. ಈಕೆ ಸಂದರ್ಶನ ಮಾಡಲು ಉದ್ದೇಶಿಸಿದ ವ್ಯಕ್ತಿ ಅಸಹಜ ಸಾವಿಗಿಡಾಗಿರುತ್ತಾನೆ. ಸಹಜವಾಗಿಯೇ ಪೊಲೀಸರಿಗೆ ಈಕೆ ಮೇಲೆ ಅನುಮಾನ. ವಿಚಾರಣೆಯಿಂದ ಈಕೆ ನಿರಪರಾಧಿ ಎಂದು ತಿಳಿಯುತ್ತದೆ. 
ಈ ನಡುವೆ ಅಲ್ಲಿರುವ ಓರ್ವ ಕುತೂಹಲಿ ಯುವ ಪೊಲೀಸ್ ಅಧಿಕಾರಿಗೆ ಈಕೆ ಡೈರಿಯಲ್ಲಿ ಯೂ ಟರ್ನ್ ತೆಗೆದುಕೊಂಡವರೆಂದು ನಮೂದಾಗಿದ್ದ ಹತ್ತು ಮಂದಿ ಬೈಕರ್ಸ್ ಕೂಡ ಸೂಸೈಡ್ ಮಾಡಿಕೊಂಡಿದ್ದ ತಿಳಿದು ದಿಗ್ಬ್ರಮೆ. ಏಕೆ, ಹೇಗೆ ಎಂದು ಪತ್ತೆ ಮಾಡಲು ಹೊರಟ ಪೊಲೀಸ್ ಅಧಿಕಾರಿ, ವರದಿಗಾರ್ತಿಗೆ ವಿಚಿತ್ರ ಎನಿಸುವ ಸಂಗತಿ ತಿಳಿಯುತ್ತದೆ.
ಈ ಬೆಳವಣಿಗೆಗಳನ್ನು ನಿರ್ದೇಶಕ ಕಟ್ಟಿಕೊಡುವ ರೀತಿಯಲ್ಲಿ ವೇಗ ಇಲ್ಲ. ಚಿತ್ರ ತೆವಳುತ್ತಾ ಸಾಗುತ್ತದೆ. ಕಾರಣ ಚಿತ್ರಕಥೆ ಜಾಳುಜಾಳಾಗಿರುವುದು, ಸಂಕಲನದಲ್ಲಿ ಚುರುಕಿಲ್ಲದಿರುವುದು. ಚಿತ್ರದುದಕ್ಕೂ ಅನಗತ್ಯ ದೃಶ್ಯಗಳು ರಾಚುತ್ತಲೇ ಹೋಗುತ್ತವೆ. ಸಮರ್ಥವಾಗಿ ಕತ್ತರಿ (ಸಂಕಲನ) ಬಳಸುವವರ ಕೈಗೆ 'ಯೂ ಟರ್ನ್ ಸಿಕ್ಕಿದ್ದರೆ ಚಿತ್ರದ ಅವಧಿ ಅರ್ಧಕ್ಕೂ ಹೆಚ್ಚು ಇಳಿಕೆಯಾಗುತ್ತಿತ್ತು. ಕ್ಯಾಮೆರಾ ಬಳಕೆಯಾಗಿರುವ ರೀತಿಯಲ್ಲಿಯೂ ವಿಶೇಷ ಅನಿಸುವ ಅಂಶಗಳಿಲ್ಲ. ಫ್ಲೈ ಓವರ್ ತೋರಿಸಲು ಡ್ರೋನ್ ಕ್ಯಾಮೆರಾ ಬಳಸಿರುವುದನ್ನೆ ತೀರಾ ವಿಶೇಷ ಎಂದು ಹೇಳಲು ಸಾಧ್ಯವಿಲ್ಲ. ಸಿನೆಮಾದ ಹಿನ್ನೆಲೆ ಸಂಗೀತ ಕೂಡ ಗಮನ ಸೆಳೆಯುವುದಿಲ್ಲ.
ಚಿತ್ರದುದಕ್ಕೂ ರಾಮ್ ಗೋಪಾಲವರ್ಮ ನಿರ್ದೇಶನ 'ಭೂತ್', ಕನ್ನಡದ ಯಶಸ್ವಿ ಚಿತ್ರ 'ರಂಗೀತರಂಗ'ದ ಛಾಯೆ ಢಾಳಾಗಿ ಎದ್ದು ಕಾಣಿಸುತ್ತದೆ. ಕಥೆಯೊಳಗೆ ಕಾಣದ ನಿಗೂಢತೆಯನ್ನ ಒಂದೆರಡು ಕಲಾ ವಸ್ತುಗಳ ಮೇಲೆ ಕ್ಯಾಮೆರಾವನ್ನು ಪದೇಪದೇ ಹಾಯಿಸುವುದರ ಮೂಲಕ ಕಟ್ಟಿಕೊಡಲು ಪ್ರಯತ್ನಿಸಲಾಗಿದೆ.
ನನಗೆ ಅನಿಸಿದ ಮತ್ತೊಂದು ಸಂಗತಿ ಎಂದರೆ ಇಡೀ ಸಿನೆಮಾದಲ್ಲಿ ಯಾವ ಪಾತ್ರಗಳೂ ಪ್ರೇಕ್ಷಕನ ಮನಸಿನಲ್ಲಿ ಅಚ್ಚುಳಿಯುವುದಿಲ್ಲ. ಕಲಾವಿದರ ಅಭಿನಯದ ವಿಷಯ ಗಮನಿಸಿದರೂ ಉತ್ತಮ ಅಭಿನಯದ ಅಂಶ ಕಾಣುವುದಿಲ್ಲ. ಹೆಚ್ಚು ಕಡಿಮೆ ಚಿತ್ರದ ಪ್ರತಿ ಫ್ರೇಮಿನಲ್ಲಿಯೂ ಇರುವ ರಚನಾ ಪಾತ್ರಧಾರಿ ಶ್ರದ್ಧಾ ಶ್ರೀನಾಥ್ ಅಭಿನಯ ಪೇಲವ. ಇನ್ನು ಆದಿತ್ಯಾ ಪಾತ್ರಧಾರಿ ದಿಲೀಪ್ ರಾಜ್ಗೆ ಅಭಿನಯದ ಅವಕಾಶವೇ ಇಲ್ಲ. ಕಾರಣ ಈ ಪಾತ್ರಕ್ಕೆ ಸ್ಕೋಪ್ ಇಲ್ಲ. 
ನಿಗೂಢವಾಗಿರುವುದನ್ನು ಹೇಳಲು ಹೊರಟ್ಟಿದ್ದೇನೆ ಎಂಬ ಭಾವನೆಯಿಂದಲೇ ನಿರ್ದೇಶನ ಮಾಡಿರುವ ಪವನ್ ಕುಮಾರ್ ಅವರು ಕಲಾವಿದರ ಅಭಿನಯದ ಕಡೆಯೂ ಗಮನ ನೀಡಬೇಕಿತ್ತು. ಇದರರ್ಥ ಅವರು ಅಭಿನಯಿಸಲು ಅವಕಾಶ ದೊರೆಯುವಂತೆ ಮಾಡಬೇಕಿತ್ತು. ಕೇವಲ ದೃಶ್ಯಗಳೇ ನಿಗೂಢತೆ, ರೋಚಕತೆ ಕಟ್ಟಿಕೊಡಲು ಸಾಧ್ಯವಿಲ್ಲ. ಇವೆಲ್ಲದರ ಜೊತೆಗೆ ತರ್ಕ ಎನ್ನುವ ಅಂಶದ ಆತ್ಮವಂತೂ ಚಿತ್ರದಲ್ಲಿ ಕಾಣೆಯಾಗಿದೆ. ಒಟ್ಟಾರೆ ಚಿತ್ರ ತಾಂತ್ರಿಕವಾಗಿ ಉತ್ತಮ ಮಟ್ಟದಾಗಿಲ್ಲ.

No comments:

Post a Comment