• ಮುಖಪುಟ
  • ಸಿನಿಮಾ
  • ದೇಗುಲ ಸರಣಿ
  • ರಾಜಕೀಯ
  • ಭಾಷೆ
  • ಸಾಹಿತ್ಯ
  • ಪರಿಸರ
  • ರಂಗ ಕಲೆ
  • ಮಾಧ್ಯಮ
  • ಪ್ರವಾಸ
  • ಜೀವನಶೈಲಿ
  • ನನ್ನ ಬಗ್ಗೆ
  • ಸಂಪರ್ಕಿಸಿ

ಬದುಕಿಗೆ ಹೊಸ ನಿಯಮ !


ಭಾರತೀಯ ಸಮಾಜ, ರೇಪಿಗೆ ಒಳಗಾದ ಸ್ತ್ರೀಯರ ಬಗ್ಗೆ ನಕಾರಾತ್ಮಕ ಪೂರ್ವಾಗ್ರಹಗಳನ್ನು ಹೊಂದಿದೆ. ಇಲ್ಲಿನ ಸಿನೆಮಾ ರಂಗ ಕೂಡ ಇದಕ್ಕೆ ಹೊರತಲ್ಲ. ಚಿತ್ರಕಥೆಯಲ್ಲಿ ಓರ್ವ ಹೆಣ್ಣು ಅತ್ಯಾಚಾರಕ್ಕೆ ಒಳಗಾಗಿದ್ದರೆ ಸಿನೆಮಾ ಮುಕ್ತಾಯದ ವೇಳೆಗೆ ಆಕೆಯನ್ನು ಸಾಯಿಸದೇ ಇದ್ದರೆ ಅವರಿಗೆ ಸಮಾಧಾನವೇ ಆಗುವುದಿಲ್ಲ. ಅಲ್ಲಿಯ ತನಕ ದುಃಖ/ ವಿಷಾದ, ಇದೇ ಛಾಯೆಯ ಹಾಡುಗಳು. ಅಲ್ಲಿಗೆ ಬದುಕೇ ಮುಕ್ತಾಯ ಎನ್ನುವಂತೆ ಇಡೀ ಸಿನೆಮಾ ಕಣ್ಣೀರಿನ ಕಡಲಿನಲ್ಲಿ ತೇಲಿ ಮುಳುಗುತ್ತದೆ. ಇಂಥ ಸಂದರ್ಭದಲ್ಲಿ ಮಲೆಯಾಳ ಭಾಷೆಯ 'ಪುದಿಯ ನಿಯಮಮ್' ( ಹೊಸ ನಿಯಮ) ಗಮನ ಸೆಳೆಯುತ್ತದೆ.
ಗೃಹಿಣಿ ವಾಸುಕಿ ಅಯ್ಯರ್ ಲೂಹಿಸ್ ಆತಂಕ, ಭೀತಿ, ಕಣ್ಣುಗಳಲ್ಲಿ ತುಂಬಿಕೊಂಡ ಭಯ ತೋರಿಸುವುದರೊಂದಿಗೆ ಸಿನೆಮಾ ಆರಂಭಗೊಳ್ಳುತ್ತದೆ. ಶಾಲಾ ವಾಹನದ ನಿರ್ವಾಹಕ, ಶೀಘ್ರ ಬಸ್ ಹತ್ತು ಎಂದು ಹೇಳುತ್ತಾ ಸಹಜವಾಗಿ ತನ್ನ ಮಗಳ ಮೈ ಮುಟ್ಟಿದಾಗ ಆಕೆ ಕೆರಳುತ್ತಾಳೆ. ಬಾಲಕಿಯರನ್ನು ಕರೆದೊಯ್ಯಲು ಮಹಿಳಾ ನಿರ್ವಾಹಕಿಯನ್ನು ಏಕೆ ನೇಮಿಸಿಲ್ಲ; ಪೊಲೀಸ್ ದೂರು ಕೊಡುತ್ತೇನೆಂದು ಕೂಗಾಡುತ್ತಾಳೆ. ಇದು ಉಳಿದ ಪೋಷಕರಿಗೆ ಅಸಹಜವಾಗಿ ಕಾಣುತ್ತದೆ. ಈ ಘಟನೆ ಪ್ರೇಕ್ಷಕರಿಗೆ ಇತ್ತೀಚೆಗೆ ಶಾಲೆಗಳಲ್ಲಿ ಬಾಲಕಿಯರ ಮೇಲೆ ಆಗುತ್ತಿರುವ ಲೈಂಗಿಕ ದೌರ್ಜನ್ಯ ನೆನಪಿಸುತ್ತದೆ. 

ಪತ್ನಿಯ ಅನ್ಯಮನಸ್ಕತೆಗೆ ವಕೀಲ ಲೂಹಿಸ್ ಪೊತೆನ್ ಸಿಟ್ಟಿಗೇಳುವುದಿಲ್ಲ.  ಇವರಿಬ್ಬರೂ ಪರಸ್ಪರ ಪ್ರೀತಿಸಿ ಅಂತರ್ಧಮೀಯ ವಿವಾಹ ಆದವರು. ನೋಡುವ ಕಣ್ಣುಗಳ ಮುಂದೆ ತಾವಿಬ್ಬರೂ ಎಡವಿ ಬೀಳಬಾರದು ಎಂಬ ಭಾವನೆ ಇಬ್ಬರಿಗೂ ಇದೆ. ಮೂಲತಃ ಈತನದು ಶಾಂತ ಮತ್ತು ಸ್ನೇಹ ಸ್ವಭಾವ. ಈ ಗುಣಗಳೆಲ್ಲ ಚಿತ್ರದಲ್ಲಿ ಸಹಜವಾಗಿ ಅನಾವರಣಗೊಳ್ಳುತ್ತದೆ. ಅಡಿಗಡಿಗೆ ಆಕೆಯ ಭೀತಿ, ಆತಂಕ ವ್ಯಕ್ತವಾಗುತ್ತಿದ್ದರೂ ಏಕೆ ಹೀಗೆ, ಕಾರಣ ಏನು ಎಂದು ಹೇಳುವಂತೆ ಈತ ಬಲವಂತ ಮಾಡುವುದಿಲ್ಲ. ತನ್ನಷ್ಟಕ್ಕೆ ಆಕೆ ಸರಿ ಹೋಗುತ್ತಾಳೆ ಎಂಬ ಭಾವನೆಯಿಂದಲೇ ವರ್ತಿಸುತ್ತಾನೆ.
ವಾಸುಕಿ ಅಯ್ಯರ್, ಪ್ರತಿಭಾವಂತ ಕಥಕ್ಕಳಿ ಕಲಾವಿದೆ. ಈಕೆಯ ಕಲಾ ಪ್ರದರ್ಶನ ನೋಡಿದ ಮಹಿಳಾ ಐಪಿಎಸ್ ಅಧಿಕಾರಿ ಪ್ರಭಾವಿತಗೊಳ್ಳುತ್ತಾರೆ. ಅಭಿನಂದನೆಯನ್ನೂ ತಿಳಿಸಿ, ಅವಶ್ಯಕತೆ ಇದ್ದಾಗ ತನ್ನನ್ನು ಸಂಪರ್ಕಿಸುವಂತೆ ತಿಳಿಸುತ್ತಾರೆ. ಇದು ವಾಸುಕಿಯಲ್ಲಿ ಅಡಗಿದ ಬೇಗುದಿ ಹೊರಬೀಳುವಂತೆ ಮಾಡುತ್ತದೆ. ಅವಳ ಭಯ, ಆತಂಕ, ಕಳವಳ ಮತ್ತು ಬೇಗುದಿಯ ಹಿಂದಿನ ಸತ್ಯ ಸ್ಪೋಟಗೊಳ್ಳುವಂತೆ ಮಾಡುತ್ತದೆ.
ಮೂವರು ಪರಿಚಿತ ಪುರುಷರಿಂದ ಈಕೆ ಅತ್ಯಾಚಾರಕ್ಕೀಡಾಗಿರುತ್ತಾಳೆ. ಎಷ್ಟೇ ಪ್ರತಿರೋಧ ಒಡ್ಡಿದರೂ ನಿಷ್ಪಲವಾಗಿರುತ್ತದೆ. ದುರ್ಘಟನೆ ನಂತರ ಆ ಮೂವರೂ ಪರಾರಿಯಾಗುತ್ತಾರೆ. ಈಕೆಯ ದೇಹ ಮತ್ತು ಮನಸಿಗೆ ಗಾಯಗಳಾಗಿರುತ್ತದೆ. ಈ ಸಂದರ್ಭ ಊರಿನಲ್ಲಿ ಇಲ್ಲದ ಪತಿ, ನಂತರ ಮನೆಗೆ ಬಂದಾಗಲೂ ಈಕೆ ತನಗಾದ ಆಘಾತ ವ್ಯಕ್ತಪಡಿಸುವುದಿಲ್ಲ. ಆಗಿರುವ ಗಾಯಗಳಿಗೆ ಬೇರೊಂದು ಕಾರಣ ಹೇಳುತ್ತಾಳೆ.
ಈಕೆಯ ಮನಸು ಸೇಡಿಗಾಗಿ ಕುದಿಯುತ್ತಲೇ ಇರುತ್ತದೆ. ಮಹಿಳಾ ಪೊಲೀಸ್ ಅಧಿಕಾರಿ ಜೊತೆ ತನಗಾದ ಅನ್ಯಾಯ ತಿಳಿಸುವ ಈಕೆ ನ್ಯಾಯಕ್ಕಾಗಿ ನ್ಯಾಯಾಲಯದ ಮುಂದೆ ಹೋಗಲು ಒಪ್ಪುವುದಿಲ್ಲ. ಆದರೆ ಮಾಡಿರುವ ತಪ್ಪಿಗೆ ಆ ಮೂವರಿಗೂ ಶಿಕ್ಷೆಯಾಗಬೇಕು ಎಂದು ಒತ್ತಾಯಿಸುತ್ತಾಳೆ. ಮೂವರ ಮೇಲೂ ಸರದಿಯಂತೆ ಅತೀ ಶೀಘ್ರವಾಗಿ ಸೇಡು ತೀರಿಸಿಕೊಳ್ಳುತ್ತಾಳೆ.
ಈ ಇಡೀ ಬೆಳವಣಿಗೆಗಳನ್ನು ಸ್ವತಃ ಚಿತ್ರಕಥೆ ಬರೆದಿರುವ ನಿರ್ದೇಶಕ ಎ.ಕೆ. ಸಾಜನ್ ಸಂಯಮದಿಂದ ನಿರೂಪಿಸುತ್ತಾರೆ. ಬರ್ಬರವಾಗಿ ಅತ್ಯಾಚಾರಕ್ಕೀಡಾದ ಮಹಿಳೆಯ ತಲ್ಲಣಗಳನ್ನು ಸಮರ್ಥವಾಗಿ ದಾಟಿಸುತ್ತಾರೆ. ಅತ್ಯಾಚಾರದ ದೃಶ್ಯಗಳನ್ನು ಕಟ್ಟಿಕೊಡುವಾಗಲೂ ಅವರು ಎಲ್ಲೆ ಮೀರುವುದಿಲ್ಲ.

ವಾಸುಕಿ ಅಯ್ಯರ್ ತನಗಾದ ಅನ್ಯಾಯವನ್ನು ಕಡೆಗೂ ಲೂಹಿಸ್ ಪೊತೆನ್ ಜೊತೆ ಹಂಚಿಕೊಳ್ಳುವುದಿಲ್ಲ. ತನ್ನ ನೋವನ್ನು ತಾನೇ ನುಂಗಿಕೊಳ್ಳುತ್ತಲೇ ಸೇಡು ತೀರಿಸಿಕೊಳ್ಳುತ್ತಾಳೆ. ಆದರೆ ಈಕೆಗಾಗಿರುವ ಅನ್ಯಾಯ ಲೂಹಿಸ್ಗೆ ತಿಳಿದಿರುತ್ತದೆ. ಆದರೆ ಯಾವ ಹಂತದಲ್ಲಿಯೂ ಆತ ತನಗೆ ವಿಷಯ ಗೊತ್ತಾಗಿದೆ ಎಂದು ತೋರ್ಪಡಿಸುವುದಿಲ್ಲ. ದುರ್ಘಟನೆಗೆ ಮುಂಚೆ ತನ್ನ ವರ್ತನೆ ಹೇಗಿತ್ತೋ ನಂತರವೂ ಅದನ್ನೇ ನಿರ್ವಹಣೆ ಮಾಡುತ್ತಾನೆ. 
ವಿಷಯ ತಿಳಿದೂ ಆತ ಹೇಡಿಯಂತೆ ಸುಮ್ಮನಾದನೇ ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ ಆತ ಹೇಡಿಯಲ್ಲ. 'ಮಾತನಾಡದೇ ಕಾರ್ಯ ಮಾಡುವವನು ರೂಢಿಯೊಳಗುತ್ತಮನು' ಎಂಬಂತೆ ನಡೆದುಕೊಳ್ಳುತ್ತಾನೆ. ಅದು ಹೇಗೆ, ಯಾವ ರೀತಿ ಎಂಬುದು ಕುತೂಹಲದಾಯಕ. ಸಾಧ್ಯವಾದರೆ ಇದನ್ನು ನೋಡಿ ತಿಳಿದುಕೊಳ್ಳುವುದು ಸೂಕ್ತ.

ಭಿನ್ನ ಆಲೋಚನೆ:
ಗೊಂದಲಗಳಿಗೆ ಎಡೆ ನೀಡದ ಚಿತ್ರಕಥೆ ಸಿದ್ಧಪಡಿಸಿರುವ ಸಾಜನ್, ಚಿತ್ರ ನಿರ್ಮಾಣದ ವಿವಿಧ ವಿಭಾಗಗಳನ್ನು ಸಮರ್ಥವಾಗಿ ದುಡಿಸಿಕೊಂಡಿದ್ದಾರೆ. ಎಲ್ಲ ವಿಭಾಗಗಳು ಸಮನ್ವಯದಿಂದ ಕಾರ್ಯ ನಿರ್ವಹಿಸುವಂತೆ ಮಾಡಿರುವುದರಿಂದ ಉತ್ತಮ ಚಿತ್ರವೊಂದು ನಿರ್ಮಾಣಗೊಳ್ಳುವುದು ಸಾಧ್ಯವಾಗಿದೆ. ಸಾಮಾನ್ಯವಾಗಿ ಭಾರತೀಯ ಚಿತ್ರರಂಗದ ಕಥಾ ಲೇಖಕರು, ನಿರ್ದೇಶಕರು ಯೋಚಿಸುವ ಧಾಟಿಗಿಂತ ಭಿನ್ನವಾಗಿ ಸಾಜನ್ ಆಲೋಚನೆ ಮಾಡಿದ್ದಾರೆ. ಪತ್ನಿ ತನಗಾದ ಅನ್ಯಾಯ ತನ್ನಿಂದಲೇ ಸ್ವತಃ ಪತಿಗೂ ತಿಳಿಯದಂತೆ ಎಚ್ಚರ ವಹಿಸುತ್ತಾಳೆ. ಸಿನೆಮಾಗಳ ಸಿದ್ಧ ವ್ಯಾಕರಣದಂತೆ ಆಕೆ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ದುಷ್ಕರ್ಮಿಗಳಿಗೆ ತಕ್ಕ ಪಾಠ ಕಲಿಸುತ್ತಾಳೆ. ಇದೇ ರೀತಿ ಪತಿಯೂ ವಿಷಯ ಗೊತ್ತಾದರೂ ಗೊತ್ತಿಲ್ಲದಂತೆ ಇರುತ್ತಾನೆ. ಇದರಿಂದಾಗಿಯೇ ಇವರಿಬ್ಬರ ಬದುಕಿನ ರೈಲು ಹಳಿಯ ಮೇಲೆ ಸರಾಗವಾಗಿ ಚಲಿಸುತ್ತದೆ. ಈ ಮೂಲಕ ಇವರ ಮಗಳು ಅನಾಥೆಯಾಗುವುದು ತಪ್ಪುತ್ತದೆ.
ಈ ಪಾತ್ರದ ಛಾಯೆಯೇ ಅನನ್ಯ.:
ಮಹಿಳಾ ಪೊಲೀಸ್ ಅಧಿಕಾರಿ ಪಾತ್ರ ಪ್ರವೇಶ ಆಗುವವರೆಗೂ ಮಂದಗತಿಯಲ್ಲಿ ಸಾಗುವ ಸಿನೆಮಾ ನಂತರ ವೇಗ ಪಡೆದುಕೊಳ್ಳುತ್ತದೆ. ಸಾಮಾನ್ಯವಾಗಿ ಮಮ್ಮುಟ್ಟಿ ಸಿನೆಮಾಗಳಲ್ಲಿ ಫೈಟಿಂಗ್, ಹಾಡುಗಳು ಇರುತ್ತವೆ. ಇಲ್ಲಿ ಇವುಗಳು ಇಲ್ಲದಿದ್ದರೂ ಅಭಿಮಾನಿಗಳಿಗೆ ನಿರಾಶೆ ಆಗುವುದಿಲ್ಲ. ಅಂಥ ರೋಚಕ ಎಲಿಮೆಂಟ್ ಮಮ್ಮುಟ್ಟಿ ಅಭಿನಯಿಸಿರುವ ವಕೀಲ ಲೂಹಿಸ್ ಪಾತ್ರಕ್ಕಿದೆ. ಈ ಪಾತ್ರದ ಛಾಯೆಯೇ ಅನನ್ಯ.
ಅಭಿನಯ:
ವಾಸುಕಿ ಅಯ್ಯರ್ ಪಾತ್ರಧಾರಿ ನಯನತಾರ ಅಭಿನಯ ಸಮರ್ಥವಾಗಿದೆ. ಕಣ್ಣುಗಳಲ್ಲಿಯೇ ಎಲ್ಲ ರೀತಿಯ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಪಾತ್ರಕ್ಕೆ ತಕ್ಕಂಥ 'ಬಾಡಿ ಲಾಂಗ್ವೇಜ್' ನಿರ್ವಹಣೆ ಭಾರಿ ಮೆಚ್ಚುಗೆ ಮೂಡಿಸುತ್ತದೆ. ವಿಭಿನ್ನ ಮನೋಭಾವದ ವಕೀಲ ಪಾತ್ರಧಾರಿ ಮಮ್ಮುಟ್ಟಿ ಅಭಿನಯ ಅತ್ಯಂತ ಸಹಜವಾಗಿದೆ. ಇನ್ನುಳಿದ ಪಾತ್ರಧಾರಿಗಳ ಅಭಿನಯ ಕೂಡ ಉತ್ತಮ. ಇದಕ್ಕೆಲ್ಲ ಮುಖ್ಯ ಕಾರಣ ಚಿತ್ರಕಥೆಯಲ್ಲಿ ಮಾಡಿರುವ ಪಾತ್ರ ಪೋಷಣೆ.

ಛಾಯಾಗ್ರಹಣ-ಸಂಗೀತ-ಸಂಕಲನ:
ಕಥೆ ಎಷ್ಟು ಮಟ್ಟಿಗೆ ತನ್ನ ನೆರವು ಕೇಳುತ್ತದೆಯೋ ಅಷ್ಟು ಮಟ್ಟಿಗಿನ ಪಾತ್ರವನ್ನು ಕ್ಯಾಮೆರಾ (ರಾಬಿ ವರ್ಗೀಸ್ ರಾಜ್) ನಿರ್ವಹಿಸಿದೆ. ಅನಗತ್ಯವಾಗಿ ರಮ್ಯತೆಯನ್ನು ತಂದಿಲ್ಲ. ಸಿನೆಮಾದ ಹಿನ್ನೆಲೆ ಸಂಗೀತ (ಗೋಪಿ ಸುಂದರ್) ಇನ್ನಷ್ಟು ಸಮರ್ಪಕವಾಗಿರಬೇಕಿತ್ತು. ಇದೇ ಮಾತನ್ನು ಸಂಕಲನದ (ವಿವೇಕ್ ಹರ್ಷನ್) ಬಗ್ಗೆಯೂ ಹೇಳಬಹುದು. ಕತ್ತರಿ ಕಾರ್ಯ ಇನ್ನೊಂದಿಷ್ಟು ಚುರುಕಾಗಿದ್ದರೆ ಚಿತ್ರಕ್ಕೆ ಮತ್ತಷ್ಟು ವೇಗ ದಕ್ಕುತ್ತಿತ್ತು.
ಅತ್ಯಾಚಾರಕ್ಕೆ ಒಳಗಾದ ಹೆಣ್ಣುಗಳ ಮನಸಿನಲ್ಲಿ ಧೈರ್ಯ, ಆತ್ಮವಿಶ್ವಾಸ ತುಂಬುವಂಥ ಸಿನೆಮಾವೊಂದನ್ನು 'ಅಬಾಮ್ ಮೂವೀಸ್ ವಿಜಿ ಫಿಲ್ಮಸ್ ಇಂಟರ್ನ್ಯಾಷನಲ್' ನಿರ್ಮಾಣ ಮಾಡಿದೆ. ಇಂಥ ಚಿತ್ರಕ್ಕೆ ಬಂಡವಾಳ ಹೂಡಲು ಧೈರ್ಯ ಬೇಕಾಗುತ್ತದೆ. 
ಛಾಯೆ:
ಇಡೀ ಚಿತ್ರದ ಮೇಲೆ ಮಲೆಯಾಳ ಸಿನೆಮಾ 'ದೃಶ್ಯಂ' ಛಾಯೆ ಎದ್ದು ಕಾಣುತ್ತದೆ. ಚಿತ್ರಕಥೆ ಹೆಣೆಯಲು ಅದೇ ಸಿನೆಮಾದ ಯಶಸ್ಸು ಪ್ರೇರಣೆಯಾಗಿರುವುದೂ ತಿಳಿಯುತ್ತದೆ. ದುಷ್ಕರ್ಮಿಗಳಿಗೆ ಸ್ವತಃ ಶಿಕ್ಷೆ ಕೊಟ್ಟು ಪೊಲೀಸ್ ಮತ್ತು ನ್ಯಾಯಾಂಗದ ಕಣ್ಣುಗಳಿಂದ ಪಾರಾಗುವ ಕಥಾನಕ ಹೊಂದಿರುವ ಇಂಥ ಸಿನೆಮಾಗಳು ಭಾರಿ ಯಶಸ್ಸು ಗಳಿಸುತ್ತಿವೆ. ಇದಕ್ಕೆ ಮುಖ್ಯ ಕಾರಣ ವ್ಯವಸ್ಥೆ ಬಗ್ಗೆ ಸಾರ್ವಜನಿಕರಲ್ಲಿ ಮೂಡಿರುವ ಸಿನಿಕತೆ, ಅವಿಶ್ವಾಸವೂ ಕಾರಣವಾಗಿರಬಹುದು. ಇದು ವ್ಯವಸ್ಥೆ ತನ್ನಲ್ಲಿರುವ ಲೋಪ-ದೋಷಗಳನ್ನು ಸರಿಪಡಿಸಿಕೊಳ್ಳಬೇಕೆಂಬ ಎಚ್ಚರಿಕೆ ಗಂಟೆಯೂ ಆಗಿರಬಹುದು.

No comments:

Post a Comment