ರಾಷ್ಟ್ರದಲ್ಲಿ ವ್ಯಾಪಕವಾಗಿರುವ ಭ್ರಷ್ಟಾಚಾರ ಹತ್ತಿಕ್ಕಲು ಸಮರ್ಥ ಲೋಕಪಾಲ್ ಬೇಕು. ಇದರಲ್ಲಿ ಎರಡು ಮಾತಿಲ್ಲ. ಈ ನಿಟ್ಟಿನಲ್ಲಿ ಹೋರಾಡುತ್ತಿರುವ ಅಣ್ಣಾ ಹಜಾರೆ ಅಭಿನಂದನೀಯರು. ಆದರೆ ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಬೆಳವಣಿಗೆ ಗಮನಿಸಿದರೆ ಅಣ್ಣಾ ಅವರು ಅನಗತ್ಯ ಹಠಮಾರಿತನ ತೋರುತ್ತಿದ್ದರೆ ಎನಿಸುತ್ತದೆ. ಇಂಥ ಧೋರಣೆ ಹಿಂದೆ ಕಾಣದ ಶಕ್ತಿಗಳ ಕೈವಾಡವಿದೆಯೆ ಎಂಬ ಶಂಕೆ ಒಂದು ಕ್ಷಣವಾದರೂ ಉದ್ಭವಿಸದೇ ಇರದು. ಹಠಮಾರಿತನವೇಕೆ ಅಣ್ಣಾ….?
ರಾಮಲೀಲಾ ಮೈದಾನದಲ್ಲಿ ಅಣ್ಣಾ ಉಪವಾಸ ಸತ್ಯಾಗ್ರಹ ಆರಂಭಿಸಿದ 6ನೇ ದಿನದಿಂದಲೇ ಕೇಂದ್ರ ತನ್ನ ನಿಲುವಿನಲ್ಲಿ ರಾಜಿ ಮಾಡಿಕೊಳ್ಳುತ್ತಾ ಸಾಗಿತು. ಖುದ್ದು ಪ್ರಧಾನಿ ಮಾತುಕಥೆಗೆ ಆಹ್ವಾನ ನೀಡಿದರು. ಆಗಸ್ಟ್ 23ರಂದೇ ಉಪವಾಸ ಸತ್ಯಾಗ್ರಹ ಸ್ಥಗಿತಗೊಳಿಸಲು ಮನವಿ ಮಾಡಿದರು. ಅತ್ಯುತ್ತಮ ಮಸೂದೆ ತರಲು ಬದ್ಧವಾಗಿರುವುದಾಗಿ ತಿಳಿಸಿದರು. ಅಣ್ಣಾ ತಂಡದ ಅರವಿಂದ ಕೇಜ್ರಿವಾಲಾ, ಕಿರಣ್ ಬೇಡಿ ಮತ್ತು ಪ್ರಶಾಂತ್ ಭೂಷಣ್ ಅವರೊಂದಿಗೆ ಕೇಂದ್ರದ ಹಿರಿಯ ಸಚಿವರಾದ ಅರ್ಥ ಸಚಿವ ಪ್ರಣವ್ ಮುಖರ್ಜಿ, ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಅವರು ಚರ್ಚಿಸಿದರು.
ಪ್ರಧಾನ ಮಂತ್ರಿಯನ್ನು ಲೋಕಪಾಲ್ ವ್ಯಾಪ್ತಿಗೆ ತರಲು ಯಾವುದೇ ಅಭ್ಯಂತರವಿಲ್ಲ. ಸಂಸತ್ ಸದಸ್ಯರ ಮೇಲಿನ ಆರೋಪಗಳನ್ನು ಲೋಕಪಾಲ್ ತನಿಖೆಗೆ ವಹಿಸಲು ಸಿದ್ಧ. ಸಿಬಿಐ ಅಂಗವಾಗಿರುವ ಭ್ರಷ್ಟಚಾರ ವಿರೋಧಿ ಘಟಕವನ್ನು ಲೋಕಪಾಲ್ ವಿಚಕ್ಷಣೆ ತರಲು ಒಪ್ಪಿಗೆಯಿದೆ ಎಂಬ ಮಾಹಿತಿಯನ್ನು ಕೇಂದ್ರ ಸರಕಾರ ಅಣ್ಣಾ ತಂಡಕ್ಕೆ ಹೇಳಿತು. ನಾಗರಿಕ ಸನ್ನದು ರಚನೆ, ಕೇಂದ್ರದ ಕಿರಿಯ ಶ್ರೇಣಿ ಅಧಿಕಾರಿಗಳನ್ನು ಲೋಕಾಪಾಲ್ ವ್ಯಾಪ್ತಿಗೆ ತರುವುದು ಮತ್ತು ರಾಜ್ಯಗಳಲ್ಲಿ ಲೋಕಾಯುಕ್ತ ರಚನೆ ಕುರಿತ ವಿಷಯಗಳಲ್ಲಿ ಭಿನ್ನಾಭಿಪ್ರಾಯ ಉಳಿದುಕೊಂಡಿತು. ಆದರೆ ಈ ವಿಷಯಗಳಲ್ಲಿಯೂ ಚರ್ಚೆಯ ಬಾಗಿಲನ್ನು ಕೇಂದ್ರ ಮುಚ್ಚಲಿಲ್ಲ ಎಂಬುದು ಗಮನಾರ್ಹ. ನ್ಯಾಯಾಂಗದ ಮೇಲೆ ಆರೋಪ ಬಂದರೆ ತನಿಖೆ ನಡೆಸುವ ಸಂಬಂಧ ಪ್ರತ್ಯೇಕ ಮಸೂದೆ ಅನುಷ್ಠಾನಗೊಳಿಸುವುದಾಗಿಯೂ ತಿಳಿಸಲಾಯಿತು.
ಚರ್ಚೆಯ ಈ ಹಂತದಲ್ಲಿ ಕೇಂದ್ರ ಒಪ್ಪಿಗೆ ಸೂಚಿಸಿದ ಅಂಶಗಳು ಭಾರಿ ಮಹತ್ವವಿರುವಂಥ ವಿಚಾರಗಳು. ಇಷ್ಟಾದರೂ ಅಣ್ಣಾ ಮತ್ತು ತಂಡ ತನ್ನ ಹಠಮಾರಿತನ ಧೋರಣೆ ಬಿಡಲಿಲ್ಲ. ಆಗಸ್ಟ್ 24ರಂದು ಸಂಜೆ ನವದೆಹಲಿಯಲ್ಲಿ ನಡೆದ ಸರ್ವಪಕ್ಷಗಳ ಸಭೆ ಒಮ್ಮತದ ನಿರ್ಣಯಕ್ಕೆ ಬರಲು ವಿಫಲವಾಯಿತು. ಅಣ್ಣಾ ತಂಡ ರೂಪಿಸಿದ ಜನಲೋಕಪಾಲ್ ಸರ್ವಸಮ್ಮತ ಎಂದು ಬಿಜೆಪಿಯೂ ಸೇರಿದಂತೆ ಯಾವುದೇ ಪಕ್ಷಗಳೂ ಹೇಳಲಿಲ್ಲ. ಸೂಕ್ಷ್ಮ ಸಂದರ್ಭಗಳಲ್ಲಿ ಪ್ರಧಾನ ಮಂತ್ರಿಯನ್ನು ಲೋಕಪಾಲ್ ವ್ಯಾಪ್ತಿಗೆ ಒಳಪಡಿಸಬಾರದು ಎಂದ ಬಿಜೆಪಿಯ ಅರುಣ್ ಜೇಟ್ಲಿ ಯಾವುದು ಸೂಕ್ಷ್ಮ-ಅಸೂಕ್ಷ್ಮ ಎಂದು ನಿರ್ಣಯಿಸುವವರು ಯಾರು, ವಿನಾಯತಿ ಯಾರು ನೀಡಬೇಕು ಎಂಬ ಬಗ್ಗೆ ತುಟಿ ಬಿಚ್ಚಲಿಲ್ಲ. ಸುಷ್ಮಾ ಸ್ವರಾಜ್ ಅವರು ಕೇಂದ್ರ ರೂಪಿಸಿರುವ ಮಸೂದೆ ಸರಿಯಲ್ಲ ಎಂದು ಹೇಳಿದರೆ ಹೊರತು ಅಣ್ಣಾ ತಂಡದ ಜನಲೋಕಪಾಲ್ ಶಕ್ತ ಎಂದೇನೂ ಹೇಳಲಿಲ್ಲ. ಇಷ್ಟಾದರೂ ಸರ್ವಪಕ್ಷಗಳ ಸಭೆ ಒಂದು ವಿಚಾರದಲ್ಲಿ ಒಮ್ಮತಕ್ಕೆ ಬರಲು ಯಶಸ್ವಿಯಾಯಿತು…! ಅದು ಅಣ್ಣಾ ಹಜಾರೆ ಅವರು ತಮ್ಮ ಉಪವಾಸ ಸತ್ಯಾಗ್ರಹ ಸ್ಥಗಿತಗೊಳಿಸಬೇಕು ಎಂಬುದು. ಈ ಸಂದೇಶವನ್ನು ಅಣ್ಣಾ ಅವರಿಗೆ ತಲುಪಿಸಲಾಯಿತು. ಆದರೂ ಅಣ್ಣಾ ಮತ್ತು ತಂಡ ತಮ್ಮ ಧೋರಣೆ ಸಡಿಲಿಸಲಿಲ್ಲ.
ಆಗಸ್ಟ್ 25ರಂದು ಸಂಸತ್ತಿನಲ್ಲಿ ಪ್ರಧಾನ ಮಂತ್ರಿ ಅವರು ಅಣ್ಣಾ ತಂಡದ ಒತ್ತಾಯಗಳನ್ನು ಸಂಪೂರ್ಣ ಪರಿಶೀಲಿಸುವುದಾಗಿ ಮತ್ತು ಸಮರ್ಥ ಲೋಕಪಾಲ್ ಮಸೂದೆ ಮಂಡಿಸುವುಕ್ಕೆ ಕಟಿಬದ್ಧವಾಗಿರುವುದಾಗಿ ತಿಳಿಸಿದರು. ಜೊತೆಗೆ ಅಣ್ಣಾ ಅವರ ಆರೋಗ್ಯದ ಬಗ್ಗೆ ಕಾಳಜಿ ವ್ಯಕ್ತಪಡಿಸಿ ಉಪವಾಸ ಹಿಂದೆಗೆದುಕೊಳ್ಳಲು ಮನವಿ ಮಾಡಿದರು. ಕೇಂದ್ರದ ಮನವಿಯನ್ನು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವ ವಿಲಾಸ್ ರಾವ್ ದೇಶಮುಖ್ ಖುದ್ದು ತಲುಪಿಸಿದರು. ಈ ಬಳಿಕವೂ ಮತ್ತೆ ತೆರಳಿ ಕೇಂದ್ರದ ಲಿಖಿತ ಭರವಸೆಯನ್ನೂ ನೀಡಿದರು. ಆಗಸ್ಟ್ 26 ರಂದು ಸಂಸತ್ತಿನಲ್ಲಿ ಈ ವಿಷಯಗಳನ್ನು ತೆಗೆದುಕೊಳ್ಳುವುದಾಗಿ ತಿಳಿಸಲಾಯಿತು.
ಆಗಸ್ಟ್ 25ರಂದು ಸಂಸತ್ತಿನಲ್ಲಿ ಪ್ರಧಾನ ಮಂತ್ರಿ ಅವರು ಅಣ್ಣಾ ತಂಡದ ಒತ್ತಾಯಗಳನ್ನು ಸಂಪೂರ್ಣ ಪರಿಶೀಲಿಸುವುದಾಗಿ ಮತ್ತು ಸಮರ್ಥ ಲೋಕಪಾಲ್ ಮಸೂದೆ ಮಂಡಿಸುವುಕ್ಕೆ ಕಟಿಬದ್ಧವಾಗಿರುವುದಾಗಿ ತಿಳಿಸಿದರು. ಜೊತೆಗೆ ಅಣ್ಣಾ ಅವರ ಆರೋಗ್ಯದ ಬಗ್ಗೆ ಕಾಳಜಿ ವ್ಯಕ್ತಪಡಿಸಿ ಉಪವಾಸ ಹಿಂದೆಗೆದುಕೊಳ್ಳಲು ಮನವಿ ಮಾಡಿದರು. ಕೇಂದ್ರದ ಮನವಿಯನ್ನು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವ ವಿಲಾಸ್ ರಾವ್ ದೇಶಮುಖ್ ಖುದ್ದು ತಲುಪಿಸಿದರು. ಈ ಬಳಿಕವೂ ಮತ್ತೆ ತೆರಳಿ ಕೇಂದ್ರದ ಲಿಖಿತ ಭರವಸೆಯನ್ನೂ ನೀಡಿದರು. ಆಗಸ್ಟ್ 26 ರಂದು ಸಂಸತ್ತಿನಲ್ಲಿ ಈ ವಿಷಯಗಳನ್ನು ತೆಗೆದುಕೊಳ್ಳುವುದಾಗಿ ತಿಳಿಸಲಾಯಿತು.
ಸಂಸತ್ತಿನಲ್ಲಿ ವಿಪಕ್ಷ ನಾಯಕಿ ಸುಷ್ಮಾ ಸ್ವರಾಜ್ ಕೂಡ ಉಪವಾಸ ಸತ್ಯಾಗ್ರಹ ನಿಲ್ಲಿಸುವಂತೆ ಅಣ್ಣಾ ಅವರಿಗೆ ಮನವಿ ಮಾಡಿದರು. ಇವೆಲ್ಲಕ್ಕಿಂತಲೂ ಮಿಗಿಲಾಗಿ ಲೋಕಸಭಾ ಅಧ್ಯಕ್ಷರಾದ ಮೀರಾ ಕುಮಾರ್ ಅವರು ತಮ್ಮ ಕುರ್ಚಿಯಿಂದ ಎದ್ದು ನಿಂತು ಅಣ್ಣಾ ಅವರ ಬದ್ಧತೆ ಶ್ಲಾಘಿಸಿದರು. ಉಪವಾಸ ಸತ್ಯಾಗ್ರಹ ನಿಲ್ಲಿಸುವಂತೆ ಮನವಿ ಮಾಡಿದರು. ಈ ಎಲ್ಲ ಮಾಹಿತಿಗಳು ಸರಸರನೆ ಅಣ್ಣಾ ಅವರಿಗೆ ತಲುಪುತ್ತಿದದ್ದು ಸ್ಪಷ್ಟವಾಗುತ್ತಿತ್ತು. ಆದರೆ ಈ ಬಳಿಕ ಮಾತನಾಡಿದ ಅಣ್ಣಾ ಉಪವಾಸ ಸತ್ಯಾಗ್ರಹ ನಿಲ್ಲಿಸುವುದಿಲ್ಲವೆಂದು ಘೋಷಿಸಿದರು.
ಸರ್ವಪಕ್ಷಗಳ ಸಭೆ ನಂತರ ಸಂಸತ್ತು ಒಕ್ಕೊರಲಿನಿಂದ ಮನವಿ ಮಾಡಿಕೊಂಡ ನಂತರವೂ ಅಣ್ಣಾ ಮತ್ತು ತಂಡ ತಮ್ಮ ಧೋರಣೆಗೆ ಅಂಟಿಕೊಂಡಿರುವುದು ಏನನ್ನು ತೋರಿಸುತ್ತದೆ. ಇವರು ಪ್ರಜಾಪ್ರಭುತ್ವದ ಅತ್ಯುನ್ನತ ಸಂಸ್ಥೆಯಾದ ಸಂಸತ್ತಿನ ಮೇಲೆ ಸವಾರಿ ಮಾಡಲು ಹೊರಟಿದ್ದಾರೆಂದೆ ತಾನೆ. ಇಂಥ ನಡೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಂಟಕಕಾರಿಯಲ್ಲವೆ. ಕೇಂದ್ರ ತಗ್ಗಿದ ನಂತರವೂ ಗುದ್ದುತ್ತಲೇ ಇರುವ ಅಣ್ಣಾ ಮತ್ತು ತಂಡದ ನಿಲುವು ನೋಡಿದರೆ ಇವರ ಹಿಂದೆ ಕಾಣದ ಶಕ್ತಿಗಳ ಕೈವಾಡವಿರಬಹುದು ಎಂಬ ಅನುಮಾನ ವ್ಯಕ್ತವಾಗುತ್ತದೆಯಲ್ಲವೆ….?
Satyavada maatu Kumara avare...
ReplyDeleteನಿಮ್ಮ ಹಿಂದೆ ಕಾಣದ ಶಕ್ತಿಗಳ 'ಕೈ'ವಾಡವಿರಬಹುದು ಎಂಬ ಅನುಮಾನ ವ್ಯಕ್ತವಾಗುತ್ತದೆ.
ReplyDelete@ ವಿವೇಕ್, ನೀವು ' ' ಮಾಡಿರುವುದು ಅರ್ಥವಾಗುತ್ತದೆ. ನಾನು ಬರೆದಿರುವ 'ಅಣ್ಣಾ ಬೆಂಬಲಕಕ್ಕೆ ಕಾಲೇಜು ವಿದ್ಯಾರ್ಥಿಗಳು' ' ಇನ್ನೂ ಬ್ರಿಟಿಷ್ ಆಡಳಿತದ ಹ್ಯಾಂಗೋವರ್ ' ಲೇಖನಗಳನ್ನು ಓದಿದರೆ ನನ್ನ ಮನೋಭಾವ ನಿಮಗೆ ಅರ್ಥವಾಗಬಹುದು. ನನ್ನ ಮತ ಸಮರ್ಥ ಲೋಕಪಾಲ್ ಪರ. ಆದರಿದು ಪ್ರಜಾಪ್ರಭುತ್ವದ ಉನ್ನತ ಸಂಸ್ಥೆಯಾದ ಸಂಸತ್ತಿಗೆ ಉತ್ತರದಾಯಿ ಆಗಿರಬೇಕು. 'ಅಣ್ಣಾ ಹಠಮಾರಿತನವೇಕೆ ' ಲೇಖನಕ್ಕೆ ಕಾರಣವಾದ ಅಂಶಗಳನ್ನು ಅಲ್ಲಿಯೆ ವಿವರಿಸಿದ್ದೇನೆ. ನನ್ನಲ್ಲಿ ಮೂಡಿದ ಪ್ರಶ್ನೆಗಳನ್ನು ಎತ್ತಿದ್ದೇನೆ. ಪ್ರತಿಕ್ರಿಯೆ ನೀಡಿರುವುದಕ್ಕೆ ಧನ್ಯವಾದ. ಸಂವಾದ ಸಾಗಲಿ......
ReplyDeleteಕೆಲವು ವಿಚಾರಗಳು ನನ್ನ ಮನಸ್ಸಿಗೆ ಬರುತ್ತಿವೆ :
ReplyDelete೧. ಅಣ್ಣಾ ಚಳುವಳಿಗೆ ಸರಕಾರ ಬಗ್ಗಿತು ಎನ್ನುತ್ತೀರಿ. ಇದು ನಿಜವೇ? ಅಣ್ಣಾ ಹಠಮಾರಿತನ ತೋರಿದ್ದು ಮೊದಲ ಪಟ್ಟೇನಲ್ಲ ಎಂದು ಗಮನಿಸಬೇಕಾಗುತ್ತದೆ. ಈ ಮೊದಲೇ ಅಣ್ಣಾ ಟೀಮ್ ಲೋಕ್ಪಾಲ್ ಮಸೂದೆ ಕಮಿಟಿಯಲ್ಲಿದ್ದವರು. ಸರಕಾರಕ್ಕೆ ಬಧ್ಧತೆಯಿದ್ದಿದ್ದರೆ ಆಗ ಅವರನ್ನು ಅಕಾಮೊಡೇಟ್ ಮಾಡಬೇಕಿತ್ತು. ಆಗ ಹಠಮಾರಿತನ ತೋರಿದ್ದು ಸರಕಾರ. ವಿರೋಧ ಪಕ್ಷಗಳನ್ನೂ ಈ ಕಮಿಟಿಯಿಂದ ಹೊರಗಿಡಲಾಯಿತು. ಇನ್ನು ಬಾಬಾ ಚಳುವಳಿಯನ್ನೂ ದಮನಿಸಲಾಯಿತು. ಇಷ್ಟೆಲ್ಲ ಮಾಡಿದ ಸರಕಾರ ಕೊನೆಯ ಕ್ಷಣದಲ್ಲಿ ಎಲ್ಲಾ ಷರತ್ತುಗಳಿಗೆ ಒಪ್ಪಿತು ಎಂದರೆ ಅರ್ಥವೇನು? ಅಣ್ಣಾ ಹಠಮಾರಿತನವೇ ಸರಕಾರ ಮಣಿಯಲು ಕಾರಣ ಎನ್ನಬೇಕಷ್ಟೇ ಹೊರತಾಗಿ ಸರಕಾರದ ಸ್ವ ಇಚ್ಚೆಯಿಂದಲ್ಲ ಎಂದು ವೇದ್ಯವಾಗುತ್ತದೆ. ಆದ್ದರಿಂದ ಅಣ್ಣಾ ಹಠಮಾರಿತನ ತೋರಿದ್ದು ಹೌದು, ಆದರೆ ಅದರಿಂದ ಒಳ್ಳೆಯದಾಯಿತೇ ಹೊರತು ಕೆಟ್ಟದ್ದೇನೂ ಆಗಲಿಲ್ಲ ಎಂದು ತಿಳಿಯುತ್ತದೆ.
೨. ಇನ್ನು ಅಣ್ಣಾ ಟೀಮಿನ ಪ್ರಜಾಪ್ರಭುತ್ವ ವಿರೋಧಿ ಧೋರಣೆ ಬಗ್ಗೆ. ಈ ಬಗ್ಗೆ ಅಣ್ಣಾ ಟೀಮ್ ಈಗಾಗಲೇ ಸ್ಪಷ್ಟನೆ ನೀಡಿದೆ. ಸ್ವತ ಅರವಿಂದ ಕೇಜ್ರಿವಾಲ್ ಇದನ್ನು ಸ್ಪಷ್ಟಪಡಿಸಿದ್ದಾರೆ. ಅವರದೇ ಮಾತಿನಲ್ಲಿ ಹೇಳುವುದಾದರೆ ಕೇವಲ ೫ ವರ್ಷಕ್ಕೊಮ್ಮೆ ಪ್ರತಿನಿಧಿಗಳನ್ನು ಆರಿಸಿ ಕಳಿಸುವುದೇ ಪ್ರಜಾಪ್ರಭುತ್ವ ಅಲ್ಲ. ಇದು ಅಂಬೇಡ್ಕರ್ ಮುಂದಾಳುತ್ವದಲ್ಲಿ ರಚಿಸಿದ ಸಂವಿಧಾನದ ಆಶಯವೂ ಅಲ್ಲ. ಯಾವಾಗ ಆರಿಸಿ ಕಳಿಸಿದ ಪ್ರತಿನಿಧಿಗಳು ತಾವು ಪ್ರಮಾಣ ವಚನ ಸ್ವೀಕರಿಸುವ ಸಂವಿಧಾನದ ಆಶಯಕ್ಕೇ ವಿರುಧ್ಧವಾಗಿ ನಡೆಯುತ್ತಾರೋ ಆಗ ಅದು ಪ್ರಜಾಪ್ರಭುತ್ವ ಎಂದು ಕರೆಯಲ್ಪಡುವುದೇ ಇಲ್ಲ. ಪ್ರಜಾಪ್ರಭುತ್ವವೇ ಇಲ್ಲವೆಂದಾದ ಮೇಲೆ ಪ್ರಜಾಪ್ರಭುತ್ವಕ್ಕೆ ಚ್ಯುತಿ ಬರುವ ಪ್ರಶ್ನೆ ಎಲ್ಲಿದೆ? ಹಾಗೆ ನೋಡಿದರೆ ದೀರ್ಘಾವಧಿಯಲ್ಲಿ ಈ ಚಳುವಳಿಯಿಂದಾಗಿ ಪ್ರಜಾಪ್ರಭುತ್ವ ಬಲವಾಗಲಿದೆಯೇ ಹೊರತು ನಿಶ್ಯಕ್ತಿ ಗೊಳ್ಳುವುದು ದೂರದ ಮಾತು. ಅಲ್ಲದೇ ಪ್ರಜಾಪ್ರಭುತ್ವದಲ್ಲಿ ಸಂಸತ್ತೇ ಅತ್ಯುನ್ನತ ಎನ್ನುವುದೂ ತಪ್ಪು. ಪ್ರಜಾಪ್ರಭುತ್ವದಲ್ಲಿ ಪ್ರಜೆಯೇ ಅತ್ಯುನ್ನತ. ಪ್ರಜೆಗಳ ಆಶಯ ಮತ್ತು ಸಂಸತ್ತಿನ ಆಶಯ ಭಿನ್ನವಾದಲ್ಲಿ ಆಗ ಸಂಸತ್ತಿನ ಆಶಯವನ್ನು ಕಡೆಗಣಿಸಿ, ಪ್ರಜೆಗಳ ಆಶಯವನ್ನು ಎತ್ತಿ ಹಿಡಿಯುವುದು ಅನಿವಾರ್ಯವಾಗುತ್ತದೆ.