ರಾಜಕೀಯ ಸರ್ವಾಧಿಕಾರಿ ಹಂಬಲ-ತಹತಹಿಕೆ ಸುತ್ತ ಪ್ರಸನ್ನ ಅವರು ಹೆಣೆದ ನಾಟಕ ‘ತದ್ರೂಪಿ.’ ಮೇಲ್ನೋಟ್ಟಕ್ಕೆ ಸಂತೋಷವಾಗಿರುವಂತೆ ಕಂಡರೂ ಅಂತರಂಗದಲ್ಲಿ ಅನುಕ್ಷಣವೂ ಜೀವಭಯದಿಂದ ತತ್ತರಿಸುವಂಥ ವ್ಯಕ್ತಿಯ ಕಥಾ ವಸ್ತುವಿದು. ಎಲ್ಲ ರೀತಿಯ ರಾಜಕೀಯ ವ್ಯವಸ್ಥೆಗಳಲ್ಲಿಯೂ ಇರುವಂಥ ಇಂಥವರ ಧೋರಣೆಯನ್ನೂ ನಾಟಕ ವಿವರಿಸುತ್ತದೆ. ಸರ್ವಾಧಿಕಾರಿಯನ್ನೆ ಸಮಗ್ರವಾಗಿ ಹೋಲುವ ವ್ಯಕ್ತಿಯನ್ನೆ ಬಂಡವಾಳವಾಗಿ ಮಾಡಿಕೊಳ್ಳುವ ಗುಂಪು ಕೂಡ ಇಲ್ಲಿದೆ. ಆದರೆ ಇದನ್ನೆ ಜನರಲ್ ಹೇಗೆ ತನ್ನ ಅನುಕೂಲಕ್ಕೆ ಬಳಸಿಕೊಳ್ಳುತ್ತಾನೆ ಎಂಬುದು ಕೂಡ ಅನಾವರಣಗೊಳ್ಳುತ್ತಾ ಸಾಗುತ್ತದೆ. ಇವೆಲ್ಲ ವಿವರಗಳನ್ನೂ ಬೆಂಗಳೂರಿನ 'ಸಂಚಯ' ತಂಡ ಸಮರ್ಥವಾಗಿ ರಂಗಾಭಿವ್ಯಕ್ತಿಗೊಳಿಸಿದೆ.
ಪ್ರಸನ್ನ ಅವರ ‘ತದ್ರೂಪಿ’ ಯನ್ನು ಯಥಾವತ್ ಮಾದರಿಯಲ್ಲಿಯೆ ರಂಗದ ಮೇಲೆ ತರುವ ಕಾರ್ಯವನ್ನು ನಿರ್ದೇಶಕ ಜೋಸೆಫ್ ಮಾಡಿಲ್ಲ. ಕರ್ನಾಟಕದ ಸಮಕಾಲೀನ ರಾಜಕೀಯ ಮತ್ತು ಅದರೊಂದಿಗಿನ ಅನೈತಿಕ ನಂಟುಳ್ಳ ಕ್ಷೇತ್ರಗಳನ್ನು ಅನಾವರಣಗೊಳಿಸುವ ಕಾರ್ಯವನ್ನೂ ಮಾಡಿದ್ದಾರೆ. ಈ ಕಾರಣಕ್ಕಾಗಿಯೂ ನಾಟಕ ಕುತೂಹಲಕಾರಿಯಾಗಿ ಸಾಗುತ್ತದೆ.
ಸಮಕಾಲೀನ ರಾಜಕೀಯ ವ್ಯಕ್ತಿಗಳನ್ನು ಕತ್ತಿಗಿಂತಲೂ ಹರಿತವಾದ ವ್ಯಂಗ್ಯಗಳಿಂದ ಚುಚ್ಚುವ ಕಾರ್ಯವನ್ನು ನಾಟಕ ಮಾಡುತ್ತದೆ. ಈ ನಿಟ್ಟಿನಲ್ಲಿ ಪ್ರಸ್ತುತಕ್ಕೆ ತಕ್ಕಂತೆ ಸಂಭಾಷಣೆಯಲ್ಲಿ ಮಾಡಿರುವ ಮಾರ್ಪಾಡುಗಳು ಗಮನ ಸೆಳೆಯುತ್ತವೆ. ‘ ಕೆಲ ಕಾರಣಗಳಿಗಾಗಿ ‘ತದ್ರೂಪಿ’ಯನ್ನು ಯಶಸ್ವಿಯಾಗಿ ರಂಗಾಭಿವ್ಯಕ್ತಿಗೊಳಿಸುವುದು ಕಷ್ಟ. ಡಬ್ಬಲ್ ಆಕ್ಟಿಂಗ್ ಸಿನಿಮಾ ಮಾದರಿಯ ನಾಟಕವಿದು. ಇಂಥ ಪರಿಕಲ್ಪನೆಯನ್ನು ಇಟ್ಟುಕೊಂಡ ನಾಟಕವನ್ನು ಸಂಚಯ ತಂಡ ರಂಗದ ಮೇಲೆ ನಿರೂಪಿಸಿರುವ ರೀತಿ ಮೆಚ್ಚುಗೆ ಮೂಡಿಸುತ್ತದೆ.
ಕೀರ್ತಿಭಾನು ಅವರು ಜನರಲ್ ಪೋಪಟ್ ಪಾತ್ರದಲ್ಲಿ ತನ್ಮಯತೆಯಿಂದ ನಟಿಸಿದ್ದಾರೆ. ಡೈಲಾಗ್ ಒಪ್ಪಿಸುವ ಮತ್ತು ಅದಕ್ಕೆ ತಕ್ಕ ಆಂಗಿಕ ಅಭಿನಯದ ರೀತಿ ಚೆನ್ನಾಗಿದೆ. ತದ್ರೂಪಿ ಪಾತ್ರಧಾರಿ ಕೃಷ್ಣ ಅವರ ನಟನೆ ಕೂಡ ಗಮನ ಸೆಳೆಯುತ್ತದೆ. ಸರ್ವಾಧಿಕಾರಿ ನೆರಳಿನಂತೆ ಇರುವ ಗೊರಂಗ ಪಾತ್ರಧಾರಿ ರಮೇಶ್ ಉಪಾಧ್ಯಯ ಅವರು ಅಭಿನಯದಲ್ಲಿ-ಡೈಲಾಗ್ ಒಪ್ಪಿಸುವುದರಲ್ಲಿ ಪದೇ ಪದೇ ಎಡವುತ್ತಾರೆ. ಇದು ಎದ್ದು ಕಾಣುತ್ತದೆ. ಪೋಷಕ ಪಾತ್ರಗಳಲ್ಲಿ ಮಾಡಿರುವವರ ನಟನೆ ಚೆನ್ನಾಗಿದೆ. ವಜ್ರಮುನಿಯಮ್ಮ ಪಾತ್ರಧಾರಿ ಕೃತ್ತಿಕಾ ರಾವ್ ಸೀಮಿತ ಅವಕಾಶದಲ್ಲಿಯೂ ಮಿಂಚಿದ್ದಾರೆ.
ಸವಾಲಾಗಿರುವ ಮೇಕಪ್ ಜವಾಬ್ದಾರಿಯನ್ನು ರಾಮಕೃಷ್ಣ ಕನ್ನರಪಾಡಿ ಸಮರ್ಥವಾಗಿ ನಿರ್ವಹಿಸಿದ್ದಾರೆ. ಸಂಗೀತ, ಸರಳ ರಂಗ ಸಜ್ಜಿಕೆ ನಿವರ್ಹಣೆ ಚೆನ್ನ. ಬೆಳಕು ಇನ್ನಷ್ಟು ಪರಿಣಾಮಕಾರಿಯಾಗಿರಬೇಕಿತ್ತು. ಆರಂಭದಿಂದ ಅಂತ್ಯದವರೆಗೂ ನಾಟಕ ತೀವ್ರತೆಯನ್ನು ಉಳಿಸಿಕೊಂಡಿದೆ. ಈ ಕಾರಣಕ್ಕಾಗಿ ಎಲ್ಲಿಯೂ ಬೇಸರವಾಗುವುದಿಲ್ಲ. ನಿರ್ದೇಶಕ ಜೋಸೆಫ್ ಅವರ ಶ್ರಮ ಎದ್ದು ಕಾಣುತ್ತದೆ. ಹರಿತವಾದ ಸಂಭಾಷಣೆಗಳಿಂದ ಕಚಗುಳಿಯಿಡುತ್ತಲೇ ಚಿಂತನೆಗೆ ಹಚ್ಚುವ ನಾಟಕವಿದು.
Sir,
ReplyDeleteIts nicely written.