• ಮುಖಪುಟ
  • ಸಿನಿಮಾ
  • ದೇಗುಲ ಸರಣಿ
  • ರಾಜಕೀಯ
  • ಭಾಷೆ
  • ಸಾಹಿತ್ಯ
  • ಪರಿಸರ
  • ರಂಗ ಕಲೆ
  • ಮಾಧ್ಯಮ
  • ಪ್ರವಾಸ
  • ಜೀವನಶೈಲಿ
  • ನನ್ನ ಬಗ್ಗೆ
  • ಸಂಪರ್ಕಿಸಿ

ಕಾಸರಗೋಡು ಕನ್ನಡ ; ಕೇರಳ ಮುಖ್ಯಮಂತ್ರಿ ಹೇಳಿದೇನು….?

ಇದೇ ಆಗಸ್ಟ್ 22ರಂದು ಕಾಸರಗೋಡಿನಲ್ಲಿ ಕನ್ನಡ ಹಿತರಕ್ಷಣಾ ಸಮಿತಿಯವರ ಭೇಟಿ. ಅಲ್ಲಿನ ಕನ್ನಡ-ಕನ್ನಡಿಗರ ಸ್ಥಿತಿಗತಿ ಬಗ್ಗೆ ಚರ್ಚೆ.  ಕನ್ನಡ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕೆಂದು ಅವರು ಸತತವಾಗಿ ನಡೆಸುತ್ತಿರುವ ಹೋರಾಟ ಅಪಾರ. ಈ ಸಲುವಾಗಿಯೆ ಬೇರೆಬೇರೆ ಹೆಸರಿನ ಕನ್ನಡ ಸಂಘಟನೆಗಳವರು ಒಟ್ಟಾಗಿ ‘ಕಾಸರಗೋಡು ಕನ್ನಡ ಹಿತರಕ್ಷಣಾ ಸಮಿತಿ ರಚಿಸಿಕೊಂಡಿದ್ದಾರೆ. ಈ ಸಮಿತಿಯವರು ಇತ್ತೀಚೆಗೆ 'ಕನ್ನಡಿಗರು ಮಲೆಯಾಳ ಕಡ್ಡಾಯ ಕಲಿಯಲೇಬೇಕೆಂಬ ಆದೇಶ' ಹಿಂಪಡೆಯಲು ಒತ್ತಾಯಿಸಿ ಕೇರಳ ಮುಖ್ಯಮಂತ್ರಿಯನ್ನು ಭೇಟಿಯಾಗಿದ್ದರು. ಮುಖ್ಯಮಂತ್ರಿ ಉಮ್ಮನ್ ಚಾಂಡಿ ಹೇಳಿದಾದರೂ ಏನು…?
ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರಿಗೆ ನ್ಯಾಯಸಮ್ಮತ ಆಗ್ರಹ ಪತ್ರ ಸಲ್ಲಿಸುತ್ತಿರುವ ಕಾಸರಗೋಡು ಕನ್ನಡಿಗರ ನಿಯೋಗ
ಶಾಸಕರಾದ ನೆಲ್ಲಿಕುನ್ನು, ಅಬ್ದುಲ್ ರಜಾಕ್ ಅವರೊಂದಿಗೆ ನಿಯೋಗದ ಸದಸ್ಯರಾದ ಬಿ. ಸುಬ್ಬಯ್ಯ ರೈ, ಕೇಶವ ಪ್ರಸಾದ್ ನಾಣಿತ್ತಲು, ಜಿ.ಕೆ.ಶೆಟ್ಟಿ, ಸಂಜೀವ ರೈ ಕಾಟುಕುಕ್ಕೆ, ರವೀಂದ್ರ ಮಾಸ್ತರ್, ವಕೀಲ ಮುರುಳೀಧರ ಬಳ್ಳೋಕರಾಯರು, ಎಸ್.ವಿ. ಭಟ್, ಸತೀಶ್ ಮಾಸ್ಟರ್ ಮತ್ತು ಸುಭಾಷ್ ಪಟ್ಟಾಜೆ
 ‘ಕಾಸರಗೋಡಿನ ಕನ್ನಡಿಗ ವಿದ್ಯಾರ್ಥಿಗಳು ಮಲೆಯಾಳ ಕಡ್ಡಾಯ ಕಲಿಯಲೇಬೇಕೆಂಬ ಆದೇಶಕ್ಕೆ ಮಣಿದರೆ ಕನ್ನಡ ಸಂಸ್ಕೃತಿಯನ್ನು ಕಳೆದುಕೊಳ್ಳಬೇಕಾಗುತ್ತದೆ. ಇಂಥ ಪರಿಸ್ಥಿತಿ ಉಂಟಾಗದಂತೆ ಕಾಸರಗೋಡಿನ ಕನ್ನಡಿಗರೆಲ್ಲರೂ ಒಂದಾಗಿ ಹೋರಾಟ ನಡೆಸಬೇಕಾದ ಅನಿರ್ವಾಯತೆಯಿದೆ’ ಇದು ಯುವ ವಕೀಲ, ಕಾಂಗ್ರೆಸಿನ ಮುಖಂಡ ಬಿ. ಸುಬ್ಬಯ್ಯ ರೈ ಅವರ  ಮಾತು. ಕೇರಳ ಮುಖ್ಯಮಂತ್ರಿಯನ್ನು ಭೇಟಿಯಾಗಿ ಮುಂದಿನ ನಡೆ ನಿರ್ಧರಿಸುವ ಸಲುವಾಗಿ ಕಾಸರಗೋಡಿನ ಕನ್ನಡ ಅಧ್ಯಾಪಕರ ಭವನದಲ್ಲಿ ನಡೆದ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ಅವರ ಮಾತುಗಳು ಹೋರಾಟದ ಮುಂದಿನ ಹೆಜ್ಜೆಗಳು ಹೇಗಿರಬೇಕು ಎಂಬುದನ್ನು ಖಚಿತವಾಗಿ ವಿವರಿಸುತ್ತಿದ್ದವು.

ವಕೀಲ ಬಿ. ಸುಬ್ಬಯ್ಯ ರೈ
 ಇದೇ ಸಂದರ್ಭದಲ್ಲಿ ಮಾತನಾಡಿದ ಕಾಂಗೈ ಯುವ ಮುಖಂಡ ಕೇಶವ ಪ್ರಸಾದ್ ಅವರದು ಒಗ್ಗಟ್ಟಿನ ಮಂತ್ರ. ಬಿಡಿಬಿಡಿಯಾಗಿ ಹೋರಾಟಕ್ಕೆ ನಿಂತರೆ ಕೇರಳ ರಾಜಕಾರಣಿಗಳು ಇದರ ಫಾಯಿದೆ ತೆಗೆದುಕೊಳ್ಳುತ್ತಾರೆ. ಆದ್ದರಿಂದ ಕಾಸರಗೋಡಿನಲ್ಲಿ ಕನ್ನಡ ಮತ್ತು ಕನ್ನಡ ಸಂಸ್ಕೃತಿ ಉಳಿಯಬೇಕಾದರೆ ಒಂದೇ ವೇದಿಕೆಯಡಿ ಹೋರಾಟಬೇಕಾದ ಅವಶ್ಯಕತೆಯನ್ನು ವಿವರಿಸಿದರು. ಸಭೆಯಲ್ಲಿದ್ದ  ಹಿರಿಯರು ಸಹ ಇವರಿಬ್ಬರ ಮಾತುಗಳಿಗೆ ತಲೆದೂಗಿದರು.
ಯುವ ಮುಖಂಡ ಕೇಶವ ಪ್ರಸಾದ್ ಹಾಗೂ ಮತ್ತಿತರ ಮುಖಂಡರು
  ಕಾಸರಗೋಡು  ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಎಸ್.ವಿ.ಭಟ್ ಅವರು ಮುಖ್ಯಮಂತ್ರಿ ಉಮ್ಮನ್ ಚಾಂಡಿ ಭೇಟಿ ಕಾರ್ಯಕ್ರಮದ ಬಗ್ಗೆ ವಿವರವಾಗಿಯೇ ಹೇಳಿದರು. ಯುವ ರಾಜಕಾರಣಿಗಳಾದ ಬಿ. ಸುಬ್ಬಯ್ಯ ರೈ , ಕೇಶವ ಪ್ರಸಾದ್ ಮತ್ತು ಕಾಸರಗೋಡು ಶಾಸಕ ಎನ್.ಎ. ನೆಲ್ಲಿಕುನ್ನು, ಮಂಜೇಶ್ವರ ಶಾಸಕ ಪಿ.ಕೆ. ಅಬ್ದುಲ್ ರಜಾಕ್ ಅವರ ಸತತ ಪ್ರಯತ್ನಗಳಿರದೇ ಇದ್ದರೆ ಮುಖ್ಯಮಂತ್ರಿಯಿಂದ ಸಕಾರಾತ್ಮಕ ಭರವಸೆ ಪಡೆಯಲು ಆಗುತ್ತಿರಲಿಲ್ಲ ಎಂದರು.

ಕಾಸರಗೋಡಿನಲ್ಲಿ ಮಲೆಯಾಳಮ್ ಅನ್ನು ಬೇರೂರಿಸಬೇಕೆಂದು ಸತತವಾಗಿ ಪ್ರಯತ್ನಿಸುತ್ತಿರುವುದು ರಾಜಕೀಯದವರಿಗಿಂತಲೂ ಅಲ್ಲಿನ ಅಧಿಕಾರಿಶಾಹಿ. ಶಾಸಕರಿಬ್ಬರ ನೇತೃತ್ವದಲ್ಲಿ ಕಾಸರಗೋಡು ಕನ್ನಡ ಹಿತರಕ್ಷಣಾ ಸಮಿತಿ ನಿಯೋಗದೊಂದಿಗೆ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರು ಸಮಾಧಾನವಾಗಿ ಚರ್ಚಿಸಿ, ಕನ್ನಡಿಗರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಕೇರಳ ಶಿಕ್ಷಣ ಇಲಾಖಾ ಕಾರ್ಯದರ್ಶಿ ಶಿವಶಂಕರ್ ಅವರನ್ನು ಕರೆದು ಕನ್ನಡಿಗರ ನಿಯೋಗದೊಂದಿಗೆ ವಿವರವಾಗಿ ಚರ್ಚಿಸಲು ತಿಳಿಸಿದರು. ಶಿಕ್ಷಣ ಖಾತೆ ಸಚಿವ ಅಬ್ದುರಬ್ ಅವರಿಂದಲೂ ನಿಯೋಗಕ್ಕೆ ಸಕಾರಾತ್ಮಕ ಭರವಸೆ ದೊರೆಯಿತು.

ಕಾರ್ಯದರ್ಶಿ ಶಿವಶಂಕರ್, ತಮ್ಮೆದುರು ಕುಳಿತ ಕನ್ನಡ ನಿಯೋಗದ ಸದಸ್ಯರೊಂದಿಗೆ ಮಲೆಯಾಳ ಕಲಿಕೆ ಅತ್ಯವಶ್ಯಕವೆಂದು ಹೇಳಿ ಮನವೊಲಿಸಲು ಪ್ರಯತ್ನಿಸಿದರು. ಈ ನಿಟ್ಟಿನಲ್ಲಿ ಯಾರಿಗೂ ಯಾವುದೇ ತೊಂದರೆ-ಆತಂಕ ಉಂಟಾಗದಂತೆ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು. ಇಂಥ ಮಾತಿನ ಪಟ್ಟುಗಳಿಗೆ ಕನ್ನಡಿಗರು ಸಮರ್ಪಕವಾಗಿ ಪ್ರತಿಪಟ್ಟು ಹಾಕಿದ ನಂತರವೇ ಅವರು ಸುಮ್ಮನಾಗಿದ್ದು. 2011-12ರ ಶೈಕ್ಷಣಿಕ ವರ್ಷದಲ್ಲಿ ಮಲೆಯಾಳ ಕಡ್ಡಾಯ ಕಲಿಕೆಯಿಲ್ಲ. ಮುಂದೆಯೂ ಸಹ ಕನ್ನಡಿಗ ವಿದ್ಯಾರ್ಥಿಗಳಿಗೆ ಅನಾನುಕೂಲವಾಗದ ರೀತಿ ಕ್ರಮ ತೆಗೆದುಕೊಳ್ಳುವುದಾಗಿ ಅವರು ನೀಡಿದ ಭರವಸೆ ಹೊತ್ತ ನಿಯೋಗ ಕಾಸರಗೋಡಿಗೆ ಮರಳಿದೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ವಿ.ಭಟ್ ಮಾತನಾಡುತ್ತಿರುವುದು. ಹಿತರಕ್ಷಣಾ ಸಮಿತಿ ಸಂಚಾಲಕ ಜಿ.ಕೆ.ಶೆಟ್ಟಿ ಚಿತ್ರದಲ್ಲಿದ್ದಾರೆ

‘ಭರವಸೆಯನ್ನು ನಂಬಿ ಕೂರಲು ಸಾಧ್ಯವಿಲ್ಲ. ನಮ್ಮ ಎಚ್ಚರಿಕೆಯಲ್ಲಿ ನಾವಿರಬೇಕು.ಮುಂದೆ ಯಾವ ರೂಪದ ಆದೇಶಗಳು ಬರುತ್ತವೋ ಏನು. ಪ್ರತಿಕೂಲ ಆದೇಶ ಬಾರದಂತೆ ಮುಂಜಾಗ್ರತೆಯಿಂದಿರುವುದು ಸೂಕ್ತ’ ಎಂಬ ಅಭಿಪ್ರಾಯ  ವ್ಯಕ್ತವಾದವು. ಮುಖ್ಯವಾಗಿ ಕಾಸರಗೋಡು ಶಾಸಕ ನೆಲ್ಲಿಕುನ್ನು ಮತ್ತು ಮಂಜೇಶ್ವರ ಶಾಸಕ ಅಬ್ದುಲ್ ರಜಾಕ್ ಅವರ ಸಹಕಾರದ ಬಗ್ಗೆ ಸಭೆಯಲ್ಲಿ ಮುಕ್ತ ಶ್ಲಾಘನೆಯಾಯಿತು. ಈ ಇಬ್ಬರು ಶಾಸಕರ ಮನೆಭಾಷೆ ಮಲೆಯಾಳವಾದರೂ ಸಹ ಕನ್ನಡ ಸಂಸ್ಕೃತಿಯಲ್ಲಿ ಬೆಳೆದವರು. ಇಂಥ ಸಂಸ್ಕೃತಿ ಉಳಿಸಿಕೊಳ್ಳಬೇಕೆಂಬ ಇರಾದೆಯೂ ಇವರಿಗಿದೆ ಎಂಬುದು ಇವರ ಇದುವರಿಗಿನ ನಡವಳಿಕೆಗಳಿಂದ ಗೊತ್ತಾಗಿದೆ.

ಕಾಸರಗೋಡಿನ ಕನ್ನಡಿಗರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವ ಭರವಸೆಯೇನೋ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರಿಂದ ದೊರಕಿದೆ. ಆದರೆ ನಿಜಕ್ಕೂ ಅಲ್ಲಿ ನಡೆಯುತ್ತಿರುವುದೇನು….? ಕೇರಳ ಸರಕಾರದ ಹೆಜ್ಜೆಗಳು ಯಾವ ರೀತಿ ಇವೆ…? ಆತಂಕಕಾರಿಯಾದ ವಿವರಗಳನ್ನು ಮುಂದೆ ನೋಡೋಣ.

2 comments:

  1. ಲೇಖನ ಬಹಳ ಸೊಗಸಾಗಿ ಬಂದಿದೆ .ಕಾರಗೋಡಿನ ಬಗ್ಗೆ ಬಹಳಷ್ಟು ಕಾಳಜಿ ಹೊಂದಿರುವ ರೈತ ಅವರಿಗೆ ಮನದಾಳದ ಕೃತಜ್ಞತೆಗಳು

    ReplyDelete
  2. ಉತ್ತಮ ಲೇಖನ. ಸ್ಥಳಕ್ಕೆ ಭೇಟಿನೀಡಿ ಸಮಸ್ಯೆಗಳನ್ನು ಅಧ್ಯಯನ ನಡೆಸಿ ವರದಿ ವಿಶ್ಲೇಷಣೆ ಪ್ರಕಟಿಸುವ ನಿಮ್ಮ ಕಾಳಜಿ ಅಭಿನಂದನಾರ್ಹ. ಕಾಸರಗೋಡಿನಲ್ಲಿ ಮಲಯಾಳ ಹೇರಿಕೆಯಿಂದ ಕನ್ನಡಕ್ಕೆ ಮಾತ್ರ ಅನ್ಯಾಯವಾಗುವುದಲ್ಲ. ತುಳು,ಕೊಂಕಣಿ.ಮರಾಟಿ,ಉರ್ದು,ಬ್ಯಾರಿ, ಸ್ಥಳೀಯ ಮಲಯಾಳ ಮೊದಲಾದ ಬಹು ಭಾಷೆಗಳು ಸಂಸ್ಕೃತಿಗಳು ಅಳಿದು ಹೋಗಬಹುದು. ಇಲ್ಲಿ ಕನ್ನಡ ಕಲಿತವರು ಕನ್ನಡದ ಜತೆ ತಮ್ಮ ಆಡುನುಡಿಯನ್ನೂ ಉಳಿಸಿಕೊಳ್ಳುತ್ತಾರೆ. ಆದರೆ ಮಲಯಾಳ ಕಲಿಯುತ್ತಿರುವವರು ಅದರ ಪ್ರಭಾವಕ್ಕೊಳಗಾಗಿ ತಾಯಿ ನುಡಿಯನ್ನೇ ಕೀಳರಿಮೆಯಿಂದ ಮರೆಯುತ್ತಿದ್ದಾರೆ. ಕಾಸರಗೋಡು ಪೇಟೆಯಲ್ಲಿ ಮಲಯಾಳ ಮಾತು ಹೆಚ್ಚು ಕೇಳಿಸಬಹುದು. ಆದರೆ ಅದನ್ನು ಆಡುವವರು ತುಳುವರೋ ಕನ್ನಡಿಗರೋ ಬ್ಯಾರಿಗಳೋ ಕೊಂಕಣಿ ಗಳೋ ಆಗಿರಬಹುದು.ಯಾಕೆಂದರೆ ಆಡಳಿತ, ಶೈಕ್ಷಣಿಕ ರಂಗಗಳಲ್ಲೆಲ್ಲ ಮಲಯಾಳ ಹೇರಿಕೆಯಾಗುತ್ತಿರುವಾಗ,ವಲಸೆ ಬರುವ ಮಲಯಾಳಿಗಳು ಸ್ಥಳೀಯ ಭಾಷೆಗಳನ್ನು ಕೀಳಾಗಿ ಕಾಣುವಾಗ ಅಲ್ಪಸಂಖ್ಯಾತ ಭಾಷೆಗಳೆಲ್ಲ ಸಂಕೋಚದಿಂದ ಮುದುಡುತ್ತವೆ.ಕಾಸರಗೋಡಿನಲ್ಲಿ ಕನ್ನಡ ಸಂಸ್ಕೃತಿ ತಾಯಿಯ ಹಾಗೆ ಎಲ್ಲರಿಗೂ ಎಲ್ಲ ಭಾಷೆಗಳಿಗೂ ಅಕ್ಕರೆಯ ರಕ್ಷಣೆ ನೀಡುತ್ತಿದೆ.ಕನ್ನಡ ಉಳಿದರೆ ಮಾತ್ರ ಕಾಸರಗೋಡು ಉಳಿಯಬಹುದು.

    ReplyDelete