ಬೆಳ್ಳಂಬೆಳ್ಳಿಗೆ ಎದ್ದು ದಿನಪತ್ರಿಕೆಗಳ ಮುಂದೆ ಕೂತವನಿಗೆ ಕಣ್ಣಿಗೆ ಬಿದ್ದಿದ್ದು ಮುಖ್ಯಮಂತ್ರಿ ಸದಾನಂದ ಗೌಡ್ರು ನೀಡಿದ್ದ ‘ ರಾಜ್ಯದ ಜನತೆಗೆ ಸ್ವಾತಂತ್ರೋತ್ಸವದ ಶುಭಾಶಯಗಳು ‘ ಎಂಬ ಸರಕಾರಿ ಜಾಹಿರಾತು. ’ ಸ್ವಾತಂತ್ರೋತ್ಸವ ‘ ಎಂಬುದು ಕಿರಿಕಿರಿ ನೀಡತೊಡಗಿತು. ಇಂಥ ಪದಗಳ ಬಳಕೆಯನ್ನು ಅನೇಕರು ಮಾಡುತ್ತಾರೆ. ಕಳೆದ 64 ವರ್ಷಗಳಿಂದಲೂ ಇದು ನಡೆದುಕೊಂಡು ಬಂದು 65 ರಲ್ಲಿಯೂ ಮುಂದುವರಿದಿದೆ. ಆದರಿದೆಷ್ಟರ ಮಟ್ಟಿಗೆ ಸಮಂಜಸ…? ಈ ಪ್ರಶ್ನೆಗೆ ನಿಮ್ಮಿಂದ ಉತ್ತರ ಬಯಸಿದ್ದೇನೆ.
ಭಾರತವನ್ನು ಬ್ರಿಟಿಷರ ಕಪಿಮುಷ್ಟಿಯಿಂದ ಬಿಡಿಸಿಕೊಳ್ಳಲು ದ್ವಿ-ಮಾದರಿ ಹೋರಾಟಗಳಾಗಿವೆ. ಹಿಂಸಾತ್ಮಕ-ಅಹಿಂಸಾತ್ಮಕ. ಇದ್ದ ಅನೇಕ ರಾಜ-ಮಹಾರಾಜರುಗಳಲ್ಲಿ ಕೆಲವರಾದರೂ ಘನತೆ ಉಳಿಸಿಕೊಳ್ಳಲು ಬಳಸಿದ್ದು ಶಸ್ತ್ರ ಹೋರಾಟವನ್ನೆ. ಬ್ರಿಟಿಷರ ಒಡೆದಾಳುವ ನೀತಿಯಿಂದ ಇಂಥವರನೇಕರು ಪ್ರಾಣ ಕಳೆದುಕೊಂಡರು. ಸೆರೆ ಸಿಕ್ಕವರನ್ನು ಹೀನಾಯವಾಗಿ ನಡೆಸಿಕೊಂಡರು. ಸುದೀರ್ಘ ಕಾಲ ಸೆರೆಮನೆಗಳಲ್ಲಿಯೆ ಕೊಳೆಸಿ ಪ್ರಾಣ ಬಿಡುವಂತೆ ಮಾಡಿದರು. ಅತ್ಯುಗ್ರವಾಗಿ ಎದುರುತ್ತರ ನೀಡಿದವರನ್ನು ಗಲ್ಲಿಗೇರಿಸಿದರು. ಗುಂಡಿಟ್ಟು ಕೊಂದರು.
1757ರಲ್ಲಿ ರಣಾಂಗಣದಲ್ಲಿ ಸಮರ್ಥ ಉತ್ತರ ನೀಡಿದ ವಂಗದ ನವಾಬ ಸಿರಾಜುದ್ದೌಲನ ಪಡೆ ಪರಾಕ್ರಮಕ್ಕೆ ಬ್ರಿಟಿಷರು ಬೆದರಿರಲೇಬೇಕು. ಈ ಘಟನೆಯಾಗಿ ನೂರು ವರ್ಷಗಳ ನಂತರ ಅಂದರೆ 1857 ರ ಸಿಪಾಯಿ ದಂಗೆಗೆ ಬ್ರಿಟಿಷ್ ನರಿ ಪಡೆ ತತ್ತರಿಸಿದ್ದು ಇತಿಹಾಸದ ಪುಟಗಳಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. ಬ್ರಿಟಿಷ್ ಪ್ರೇರಿತ ಯೋಚನಾ ಸರಣಿಯಿಂದ ಪ್ರೇರಿತರಾದವರು ಇದು ಕೆಲವೇ ಸಿಪಾಯಿಗಳ ದಂಗೆ ಎಂದು ಕರೆಯುತ್ತಾರಾದರೂ ವಾಸ್ತವವಾಗಿ ಸಾವಿರಾರು ಸೈನಿಕರು ಸ್ವಯಂಪ್ರೇರಣೆಯಿಂದ ಉಗ್ರ ಹೋರಾಟಕ್ಕಿಳ್ಳಿದರು. ಎಂದಿನ ತಮ್ಮ ಕುತಂತ್ರಗಳಿಂದ ಇದನ್ನು ಚಿವುಟಿದ ಬ್ರಿಟಿಷರಿಂದ ಹಲವಾರು ಸೈನಿಕರು ಕೊಲ್ಲಲ್ಪಟ್ಟರು.
‘ ಸಿಪಾಯಿ ದಂಗೆ’ ಎಂದೇ ಹೆಸರಿತವಾದ ಈ ಘಟನೆ ನಂತರ ವ್ಯವಸ್ಥಿತ ಕ್ರಾಂತಿಕಾರಿ ಚಳವಳಿ ಆರಂಭವಾಯಿತು. ಅದೆಷ್ಟೋ ಮಂದಿ ಅಜ್ಞಾತ ಚಳವಳಿಗಾರರು ಬ್ರಿಟಿಷರ ಸಾಮ್ರಾಜ್ಯ ದಾಹಕ್ಕೆ ಬಲಿಯಾದರು. ಅನೇಕರನ್ನು ಗಲ್ಲಿಗೇರಿಸಿದರು. ಭಗತ್ ಸಿಂಗ್, ಸುಖದೇವ್, ರಾಜಗುರು, ಸೂರ್ಯಸೇನ್, ಉದ್ದಾಮ್ ಸಿಂಗ್, ಖುದಿರಾಮ್ ಬೋಸ್ ಮತ್ತು ಇನ್ನೂ ಅನೇಕ ಕ್ರಾಂತಿಕಾರಿಗಳನ್ನು ಹೆಸರಿಸುತ್ತಲೇ ಹೋಗಬಹುದು. ಇದಲ್ಲದೇ ಇನ್ನೂ ಅನೇಕರನ್ನು ಸಾಯುವವರೆಗೂ, ನರಕವನ್ನೂ ನಾಚಿಸುವ ಕಾರಾಗೃಹಗಳಲ್ಲಿ ಕೊಳೆಯಿಸಿದರು. ಇದಕ್ಕೆ ಸೂಕ್ತ ಉದಾಹರಣೆ ಅಂಡಮಾನ್ ನಿಕೋಬಾರ್ ಸೆಲ್ಯುಲಾರ್ ಜೈಲುಗಳು.
‘ಸುಖ’ ಎಂಬ ಪದವನ್ನೆ ಮರೆತ ಸಾವಿರಾರು ಮಂದಿ ಮನೆಮಠ ತೊರೆದು ಉಗ್ರ ಹೋರಾಟಗಳಲ್ಲಿ ಕರಗಿ ಹೋದರು. ಮರಣ ಅಪ್ಪಿದ ತಂದೆ-ತಾಯಿ-ಬಂಧು ಬಳಗ-ಪತಿ-ಪತ್ನಿ-ಮಕ್ಕಳ ಮುಖವನ್ನೆ ಕೊನೆಯ ಬಾರಿಗೂ ನೋಡಲಾಗದಂಥ ಪರಿಸ್ಥಿತಿಗೆ ಅನೇಕ ಕ್ರಾಂತಿಕಾರಿಗಳು ಒಳಗಾದರು.
ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಭಾರತವನ್ನು ನಿರಂತರವಾಗಿ ಬೆಚ್ಚಿ ಬೀಳಿಸುವಂಥ ದುರ್ಘಟನೆ. ಬ್ರಿಟಿಷ್ ಕ್ರೌರ್ಯದ ಪರಮಾವಧಿಯಿದು. ಶಾಂತಿಯುತವಾಗಿ ಪ್ರತಿಭಟನೆ ದಾಖಲಿಸುತ್ತಿದ್ದವರಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾದರು. ಅನೇಕರು ಶಾಶ್ವತವಾಗಿ ಅಂಗವಿಕಲರಾದರು. ಇಂಥ ಅಮಾನುಷತೆಗೂ ಕ್ರಾಂತಿಕಾರಿಗಳು ಬೆದರಲಿಲ್ಲ. ಬ್ರಿಟಿಷರ ತವರಿನಲ್ಲಿಯೇ ಈ ಹತ್ಯಾಕಾಂಡದ ರೂವಾರಿಗೆ ಗುಂಡಿಕ್ಕಿದ ಖುದಿರಾಮ್ ಬೋಸ್ ನೇಣಿಗೇರುವಾಗಲೂ ರೋಷ ಆರಿರಲಿಲ್ಲ.
1920ರ ನಂತರ 1947ರವರೆಗೂ ಕರಮ್ ಚಂದ್ ಗಾಂಧಿ ನೇತೃತ್ವದಲ್ಲಿ ನಿರಂತರವಾಗಿ ಅಹಿಂಸಾತ್ಮಕ ಚಳವಳಿ ನಡೆಯಿತು. ಮೇಲ್ನೋಟ್ಟಕ್ಕೆ ಇದು ಅಹಿಂಸಾತ್ಮಕ ಎನ್ನಿಸುತ್ತದೆ. ಆದರೆ ಈ ಚಳವಳಿಯಲ್ಲಿ ಪಾಲ್ಗೊಂಡವರೆಲ್ಲರೂ ತಮ್ಮ ದೇಹ-ಮನಸುಗಳ ಮೇಲೆ ಹಿಂಸಾತ್ಮಕತೆಯನ್ನು ವಿಧಿಸಿಕೊಂಡಿದ್ದರು. ಸತತ ಉಪವಾಸ ಮಾಡುವುದು, ಸಮರ್ಪಕವಾಗಿ ಆಹಾರವಿಲ್ಲದೇ ಚಳವಳಿಗಾಗಿ ದುಡಿಯುವುದು. ಕತ್ತಲೆ ಕೋಣೆಗಳಲ್ಲಿ ವರ್ಷಗಟ್ಟಲೆ ಕೊಳೆಯುವುದು, ಬಂಧು-ಬಳಗದಿಂದ ದೂರಾಗಿರುವುದು, ಬ್ರಟಿಷ್ ಪೊಲೀಸರ ಬೂಟಿನೇಟು-ಲಾಠಿಯೇಟು-ಬೆಲ್ಟಿನೇಟುಗಳಿಗೆ ಮೈಯೊಡ್ಡಿ ಚಳವಳಿ ಮಾಡುವುದನ್ನು ಅಹಿಂಸಾತ್ಮಕ ಎಂದು ಒಪ್ಪಿಕೊಳ್ಳುವುದಾದರೂ ಹೇಗೆ. ಇಂಥ ಚಳವಳಿ ಬ್ರಿಟಿಷರಿಗಷ್ಟೆ ಅಹಿಂಸಾತ್ಮಕವಾಗಿರಬಹುದು; ಅಪ್ಯಾಯಮಾನವಾಗಿರಬಹುದು. ಆದರೆ ಭಾರತೀಯರಿಗೆ ಖಂಡಿತ ಅಲ್ಲ.
1946-47ರ ಅವಧಿಯಲ್ಲಿ ಭಾರತೀಯ ನೌಕಪಡೆಯ ದಂಗೆಯಿಂದ ಬ್ರಿಟಿಷ್ ಪ್ರಭುತ್ವ ಥರಗುಟ್ಟಿದೆ. ಒಂದು ಶತಮಾನಗಳಿಂದ ನಿರಂತರ ದುಸ್ವಪ್ನವಾಗಿ ಕಾಡುತ್ತಿದ್ದ ‘ ಸಿಪಾಯಿ ದಂಗೆ’ ಮತ್ತೆ ಅವರ ಎದೆಯನ್ನು ಜಲ್ಲೆನಿಸಿದೆ. ಇಂಥ ಘಟನೆ, ಆಯಾ ಕಾಲಘಟ್ಟದ ಪರಿಸ್ಥಿತಿ ಒತ್ತಡ ಮತ್ತು ಸಾವಿರಾರು ಮಂದಿ ಭಾರತೀಯರ ತ್ಯಾಗ-ಬಲಿದಾನಗಳಿಂದ ದೊರಕಿದ ಸ್ವತಂತ್ರವನ್ನು ನಾವು ಆಚರಿಸುತ್ತಿರುವುದಾದರೂ ಹೇಗೆ….?
ಆಗಸ್ಟ್ 15 ರಂದು ಸಾರ್ವತ್ರಿಕ ರಜಾ ಘೋಷಣೆ, ಪೊಲೀಸ್, ಮಿಲಿಟರಿ-ಅರೆಮಿಲಿಟರಿ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳ ಕವಾಯತು, ನೃತ್ಯಗಳು, ಹಾಡುಗಳು ಇವೆಲ್ಲದರ ಜೊತೆಗೆ ಸಿಹಿ ಹಂಚಿಕೆ. ರಾಷ್ಟ್ರ ಧ್ವಜವಿಡಿದು ವಾಹನಗಳಲ್ಲಿ ಕೇಕೆ ಹಾಕಿಕೊಂಡು ಸಾಗುವುದು, ಇಷ್ಟಲ್ಲದೇ ಪ್ರಜಾ ಪ್ರಭುತ್ವದ ಪ್ರಭುಗಳಾದ ರಾಜಕಾರಣಿಗಳು ತೆರೆದ ಜೀಪಿನಲ್ಲಿ ಕ್ರೀಡಾಂಗಣ ಸುತ್ತಿ ಪಡೆಗಳಿಂದ ಗೌರವ ಸ್ವೀಕರಿಸುವುದು. ಇದೆಲ್ಲ ಏನು ಸೂಚಿಸುತ್ತದೆ…? ಭಾರತ ಸ್ವಾತಂತ್ರದ ಘನತೆಯುತ ಸಂಕೇತವಾದ ರಾಷ್ಟ್ರ ಧ್ವಜಕ್ಕೆ ಪಡೆಗಳು ಗೌರವ ಸಲ್ಲಿಸಿದ ಬಳಿಕ ಸರಕಾರಿ ಮತ್ತು ರಾಜಕೀಯ ಅಧಿಕಾರಸ್ಥರು ಗೌರವ ರಕ್ಷೆ ಸ್ವೀಕರಿಸುವುದು ಕೂಡ ತಪ್ಪು ಸಂಪ್ರದಾಯವಲ್ಲವೆ....?
ನಾವು ದಸರಾ ಆಚರಿಸುತ್ತಿದ್ದೆವೆಯೋ ಅಥವಾ ಸ್ವತಂತ್ರ ಬಂದ ಗಳಿಗೆಗೆ ಅದಕ್ಕೆ ಕಾರಣಕರ್ತರಾದ ಸಾವಿರಾರು ಮಂದಿ ಜ್ಞಾತ-ಅಜ್ಞಾತ ಹುತಾತ್ಮರಿಗೆ ನಮನ-ಶ್ರದ್ಧಾಂಜಲಿ ಸಲ್ಲಿಸುತ್ತಿದೆವೆಯೋ…. ಸ್ವತಂತ್ರ ದೊರೆತಿರುವುದು ಖುಷಿಯ ಸಂಗತಿ. ಆದರೂ ಇದರ ಮೂಲಕ ನೆನಪಿಗೆ ಬರುವ ಶತಮಾನಗಳ ದಾಸ್ಯ; ಇದರ ವಿರುದ್ಧ ಹೋರಾಡಿದವರ ಬಲಿದಾನ, ನೃತ್ಯ ಮಾಡಿ ಸಿಹಿ ಹಂಚಿ, ಪೂರ್ವಾಗ್ರಹಪೀಡಿತ ರಾಜಕೀಯ ಭಾಷಣ ಮಾಡಿ ಸಂಭ್ರಮಿಸುವ ಕ್ಷಣಗಳೇ…?
ಶತಶತಮಾನಗಳ ಕಾಲ ಪರಕೀಯರ ಆಳ್ವಿಕೆಯಲ್ಲಿ ನೊಂದ ಜನ ಸ್ವತಂತ್ರ ಸಿಕ್ಕ ದಿನವನ್ನು ರಜೆ ಮೂಲಕ ವ್ಯಯಿಸುವುದು ಸರಿಯೋ ಅಥವಾ ನಿತ್ಯದ ದುಡಿಮೆ ಸಮಯಕ್ಕಿಂತ ಒಂದೆರಡು ಗಂಟೆ ಹೆಚ್ಚಿಗೆ ದುಡಿಯುವುದು ಸರಿಯೋ… ಧ್ವಜಾರೋಹಣ ಮಾಡಿದ ನಂತರ ಅದಕ್ಕೆ ವಂದಿಸಿ…ಹುತಾತ್ಮರ ಸ್ಮರಣೆ-ಶ್ರದ್ಧಾಂಜಲಿ ನಂತರ ಚದುರಿ ಕೆಲಸ-ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಸರಿಯೋ ಅಥವಾ ಆರೋಪಗಳು-ಸ್ವ ಸಮರ್ಥನೆಗಳ ಭಾಷಣ ಮಾಡುವುದು, ಸಿಹಿ ಹಂಚಿ ಹಾಡು-ಹಸೆ ಹೇಳುತ್ತಾ-ನೃತ್ಯ ಮಾಡುವುದು ಸರಿಯೋ….
ಹುತ್ಮಾತ್ಮರ ಸ್ಮರಣೆ-ಶ್ರದ್ಧಾಂಜಲಿ-ರಾಷ್ಟ್ರದ ಇತಿಹಾಸ ಅವಲೋಕನದ ಮೂಲಕ ಪ್ರತಿ ವರ್ಷ ಎಚ್ಚರಿಸಿಕೊಳ್ಳಬೇಕಾದ ಘಳಿಗೆಯನ್ನು ‘ಸ್ವಾತಂತ್ರೋತ್ಸವ’ ಎಂದರೆ ಗಂಭೀರತೆ ದಕ್ಕುತ್ತದೆಯೆ..?. ಅದರಲ್ಲಿಯೂ ಭಾವಿ ಪ್ರಜೆಗಳಿಗೆ ಅದರ ಮಹತ್ವ ಅರಿವಾಗುತ್ತದೆಯೆ…? 30 ವರ್ಷಕ್ಕೊಂದು ತಲೆಮಾರು ಎನ್ನುತ್ತಾರೆ. ಸ್ವಾತಂತ್ರ ದೊರೆತು 65 ವರ್ಷವಾದ್ದರಿಂದ ಎರಡು ತಲೆಮಾರು ಕಳೆದು ಮೂರನೆಯದು ಆರಂಭವಾಗಿದೆ. ಆದರೆ ಇಡೀ ರಾಷ್ಟ್ರದ ಅಭಿವೃದ್ಧಿ ಮತ್ತು ಕಟ್ಟೆಚ್ಚರ ಪ್ರಾಪ್ತವಾಗಿದೆಯೆ…? ಹಾಗಿದ್ದರೆ ಕಠಿಣ ‘ಜನಲೋಕಪಾಲ್’ ಕಾಯಿದೆ ಜಾರಿಗೆ ಒತ್ತಾಯಿಸಿ ನಮ್ಮನ್ನಾಳುವವರ ವಿರುದ್ಧವೇ ಹೋರಾಟ ಮಾಡುವಂಥ ಸನ್ನಿವೇಶ ನಿರ್ಮಾಣವಾಗುತ್ತಿತ್ತೆ…? ಸ್ವಾತಂತ್ರ ಸಂಗ್ರಾಮದಷ್ಟೆ ಮಹತ್ವಪೂರ್ಣವಾದ ‘ ಭ್ರಷ್ಟಾಚಾರ ವಿರೋಧಿ’ ಚಳವಳಿ ಆರಂಭಿಸುವಂಥ ಅಗತ್ಯ ಬೀಳುತ್ತಿತ್ತೆ…? ಭಾರತೀಯರಾದ ನಾವು ಎಡವುತ್ತಲೇ ಬಂದಿದ್ದೇವೆ ಎನಿಸುವುದಿಲ್ಲವೆ…? ಹೀಗಾದರೆ ಸರಿಯಾಗಿ ನಡೆಯುವುದಾದರೂ ಯಾವಾಗ….?
ತುಂಬಾ ಚೆನ್ನಾಗಿದೆ ಲೇಖನ. ಈಗಿನ ವ್ಯವಸ್ಥೆಗೆ ಸರಿಯಾಗಿದೆ.
ReplyDeleteಧನ್ಯವಾದಗಳು.
ಆಡಂಬರದ ಸೋಗಿನಲ್ಲಿ ಒಂದಷ್ಟು ಖರ್ಚುಮಾಡಿ ಉತ್ಸವಗಳ ಆಚರಿಸೋ ಬದಲು ದೇಶದ ಸ್ವಾತಂತ್ರ್ಯಕ್ಕೊಸ್ಕರ ತಮ್ಮ ಪ್ರಾಣಗಳನ್ನೇ ಅರ್ಪಿಸಿದ ವೀರ ಯೋಧ ನಾಯಕರ ನೆನಪು ಮಾಡಿಕೊಳ್ಳೋ 'ಸ್ವಾತಂತ್ರ್ಯ ದಿನದ ನೆನಕೆ' ಗಳಾಗಲಿ
ReplyDeleteಬದಲಾವಣೆಯ ಗಾಳಿ ಬೀಸಬೇಕಿದೆ.....
ReplyDeletesuper like :) good food for thoughts :)
ReplyDelete