ತಿರುವಂತನಪುರದ ಅನಂತನ ಅನಂತ ಸಂಪತ್ತು ಸಂಬಂಧ ಇತ್ತೀಚೆಗೆ ಅಷ್ಟಮಂಗಲ ಪ್ರಶ್ನೆ ಪ್ರಕ್ರಿಯೆ ನಡೆಯಿತು. ಅನಂತ ಪದ್ಮನಾಭ ದೇಗುಲ ಮತ್ತು ಅದರ ಸುತ್ತಲಿನ ಘಟನಾವಳಿಗಳ ಸರಣಿ ಬರಿಯಲಾರಂಭಿಸಿದ ಕಾರಣ ಈ ಸಂದರ್ಭದಲ್ಲಿ ಸಾಕಷ್ಟು ಮಂದಿ ಇದರ ಬಗ್ಗೆ ತಿಳಿಸಿ ಎಂದರು. ನನಗೆ ಇಂಥ ಆಚರಣೆ; ನಂತರದ ಫಲಿತಾಂಶಗಳ ಬಗ್ಗೆ ಸಂಬಂಧಿಸಿದವರಿಂದಲೇ ತಿಳಿಯಬೇಕೆಂಬ ಹಂಬಲ. ಇದರಿಂದಾಗಿಯೇ ಕಳೆದ ವಾರ ನಾರಾಯಣ ರಂಗ ಭಟ್ಟರನ್ನು ಕಾಸರಗೋಡು ಮಧೂರಿನ ಅವರ ನಿವಾಸದಲ್ಲಿಯೇ ಭೇಟಿ ಮಾಡಿದೆ. ಅನಂತ ಪದ್ಮನಾಭ ದೇಗುಲದಲ್ಲಿ ಅಷ್ಟಮಂಗಲ ಪ್ರಶ್ನೆ ನಡೆಸಿಕೊಟ್ಟ ಪ್ರಮುಖ ದೈವಜ್ಞರಿವರು.
ಕರ್ನಾಟಕದ ಕರಾವಳಿ ಪ್ರದೇಶ ಮತ್ತು ಕೇರಳದಲ್ಲಿ ಅಷ್ಟಮಂಗಲ ಪ್ರಶ್ನೆ ಪರಿಚಿತ ಆಚರಣೆ. ಆದರಿದು ಎಲ್ಲ ಸಂದರ್ಭಗಳಲ್ಲಿಯೂ ನಡೆಯುವುದಿಲ್ಲ. ತುಂಬ ಜಿಜ್ಞಾಸೆ ಮೂಡಿದಾಗ ಮಾತ್ರ ಇಂಥ ಪ್ರಶ್ನೆ ಕೇಳುವ ಆಚರಣೆ ನಡೆಯುತ್ತದೆ. ರಾಜ-ಮಹಾರಾಜರ ಆಳ್ವಿಕೆ ಘಟ್ಟದಲ್ಲಿ ಪ್ರಮುಖ ದೇಗುಲಗಳಲ್ಲಿ ಪ್ರತಿ ವರ್ಷ ಅಷ್ಟಮಂಗಲ ಪ್ರಶ್ನೆ ಕೇಳಲಾಗುತ್ತಿತ್ತು. ದೇಗುಲ ಕ್ರಿಯೆಗಳು ಸುಗಮವಾಗಿ ನಡೆಯುತ್ತಿದೆಯೇ, ಅಲ್ಲಿರುವಂಥ ನೌಕರರ (ಅರ್ಚಕರು ಮತ್ತು ಮೊಕ್ತೇಸರ ಕೂಡ ಸೇರಿದಂತೆ) ನಡವಳಿ ಹೇಗಿದೆ, ದೇವ ಆಚರಣೆಗಳಲ್ಲಿ ಏನಾದರೂ ದೋಷಗಳಾಗಿದೆಯೇ ಎಂಬುದನ್ನು ಅರಿಯುವುದಕ್ಕಾಗಿ ಈ ರೀತಿ ಮಾಡಲಾಗುತ್ತಿತ್ತು. ದೋಷಗಳು ಕಂಡು ಬಂದರೆ ಅದಕ್ಕೆ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳುತ್ತಿದ್ದರು. ರಾಜರ ಆಳ್ವಿಕೆ ಮುಕ್ತಾಯದ ನಂತರ ದೇಗುಲಗಳಲ್ಲಿ ಇಂಥ ಪ್ರಶ್ನೆ ಪ್ರಕ್ರಿಯೆ ವಿರಳವಾಯಿತು.
![]() |
ದೈವಜ್ಞ ನಾರಾಯಣ ರಂಗ ಭಟ್ಟರು |
ಅನಂತ ಪದ್ಮನಾಭ ದೇಗುಲದಲ್ಲಿ ಸಾಕಷ್ಟು ವರ್ಷಗಳಿಂದ ಇಂಥ ಪ್ರಶ್ನೆ ಪ್ರಕ್ರಿಯೆ ನಡೆದಿರಲಿಲ್ಲ. ನಿಧಿ ಇರುವ ನೆಲ ಮಾಳಿಗೆ ಕೊಠಡಿಗಳನ್ನು ಸುಪ್ರೀಮ್ ಕೋರ್ಟ್ ತೆರೆಸಿದ ನಂತರವೇ ದೇಗುಲದ ಆಡಳಿತ ನೋಡಿಕೊಳ್ಳುತ್ತಿರುವ ಟ್ರಾವೆಂಕೂರು ಟ್ರಾವೆಂಕೂರು ರಾಜಮನೆತನದವರು ಅಷ್ಟಮಂಗಲ ಪ್ರಶ್ನೆ ಪ್ರಕ್ರಿಯೆ ನಡೆಸಲು ಮುಂದಾಗಿದ್ದು. ಬಳಿಕ ಬಂದ ಫಲಿತಾಂಶಗಳನ್ನು ತಿಳಿಯುವ ಮೊದಲು ‘ಅಷ್ಟಮಂಗಲ ಪ್ರಶ್ನೆ’ ಎಂದರೇನು ತಿಳಿಯೋಣ.
![]() |
ಅನಂತ ಪದ್ಮನಾಭ ದೇಗುಲದ ಮುಂದೆ ದೈವಜ್ಞರ ತಂಡ |
‘ಈ ಪ್ರಕ್ರಿಯೆ ನಡೆಯುತ್ತಿದ್ದ ಸಂದರ್ಭದಲ್ಲಿ ‘ದೈವ ಪ್ರಶ್ನೆ’ ನಡೆಯಲಾಗುತ್ತಿದೆ ಎಂದೂ ಕೆಲವರು ಹೇಳುತ್ತಿದ್ದರು. ಆದ್ದರಿದು ‘ದೇವ ಪ್ರಶ್ನೆ’ ದೇವರಿಗೆ ಸಂಬಂಧಿಸಿದ ವಿಚಾರಗಳನ್ನು ತಿಳಿಯುವ ಸಂದರ್ಭದಲ್ಲಿ ಅನುಸರಿಸಲಾಗುವ ಆಚರಣೆಗೆ ಹೀಗೆಂದು ಸಂಬೋಧಿಸಲಾಗುತ್ತದೆ. ಮೂಲಭೂತವಾಗಿ ಇದು ಮತ್ತು ‘ಅಷ್ಟಮಂಗಲ ಪ್ರಶ್ನೆ’ ಎರಡೂ ಒಂದೇ’ ಎನ್ನುತ್ತಾರೆ ದೈವಜ್ಞ( ಪ್ರಶ್ನೆಗಳಿಗೆ ಉತ್ತರಕ್ಕಾಗಿ ಯಾರನ್ನು ಸಂದರ್ಶಿಸುತ್ತೆವೆಯೋ ಅವರೆ ದೈವಜ್ಞರು) ನಾರಾಯಣ ರಂಗ ಭಟ್ಟರು.
‘ಭೂತ-ವರ್ತಮಾನ-ಭವಿಷ್ಯತ್ ಕುರಿತ ವಿಚಾರಗಳನ್ನು ಹೇಳುವುದು. ಇದಕ್ಕಾಗಿ ಅನುಸರಿಸುವ ಜ್ಯೋತಿಷ ಶಾಸ್ತ್ರದ ಎಲ್ಲ ರೀತಿಯ ವಿಧಾನಗಳು ಅಷ್ಟಮಂಗಲದಲ್ಲಿ ಅಡಕವಾಗಿವೆ. ಈ ವಿಧಾನದಲ್ಲಿ ಎಲ್ಲ ರೀತಿಯ ಸಮಸ್ಯೆಗಳಿಗೂ ಉತ್ತರ ಕಂಡುಕೊಳ್ಳಲು ಪ್ರಯತ್ನಿಸಬಹುದು. ದೇವರ ಚೈತನ್ಯ-ಸಾನಿಧ್ಯ ಕುರಿತು ಕಣ್ಣಿಗೆ ಗೋಚರವಾಗದ ವಿಷಯಗಳನ್ನು ಅರಿಯಬಹುದು. ಅನುಷ್ಠಾನ ಮಾರ್ಗ. ಪ್ರಶ್ನಾ ಮಾರ್ಗ ( ಪೂರ್ವಾರ್ಧ ಮತ್ತು ಉತ್ತರಾರ್ಧ) ಗ್ರಂಥಗಳಲ್ಲಿ ಈ ಸಂಬಂಧಿತ ಮಾಹಿತಿಗಳಿವೆ’ ಎನ್ನುತ್ತಾರೆ.
ಅಷ್ಟಮಂಗಲದ ವಿವರಗಳನ್ನು ನೋಡಿದಾಗ ಇದಕ್ಕೆ ಸಂಖ್ಯಾಶಾಸ್ತ್ರವೇ ಬಹುಮುಖ್ಯ ಆಧಾರ ಎನ್ನುವುದು ತಿಳಿಯುತ್ತದೆ. ಇಲ್ಲಿ ಲೆಕ್ಕಾಚಾರವೂ ಪ್ರಮುಖ. ‘ ದೈವಜ್ಞರನ್ನು ಕಂಡು ಕೋರಿಕೆ ಸಲ್ಲಿಸಿದ ಗಳಿಗೆಯಿಂದಲೂ ಲೆಕ್ಕಚಾರ ಆರಂಭವಾಗುತ್ತದೆ. ಇದು ಸಂಖ್ಯಾಶಾಸ್ತ್ರ ಮಾತ್ರವೇ ಅಲ್ಲ; ದೇಹ ಭಾಷೆ ( ಬಾಡಿ ಲಾಂಗ್ವೇಜ್) ಮುಖಾಂತರವೂ ಸಮಸ್ಯೆಗಳನ್ನು ಅರಿಯುವ ವಿಧಾನ.
‘ಬಹುತೇಕರು ವ್ಯಕ್ತಿಯ ಮುಖಲಕ್ಷಣ ನೋಡಿ ಈ ಜ್ಯೋತಿಷ ಹೇಳುತ್ತಾರೆ ಎಂದು ಕೊಳ್ಳುತ್ತಾರೆ. ಆದರೆ ಕವಡೆ, ದೀಪ, ಶಕುನಗಳು, ವ್ಯಕ್ತಿ ಕುಳಿತ ಸ್ಥಳ-ದಿಕ್ಕು, ಆತ/ಆಕೆಯ ಮಾತು, ನೋಡುವ ನೋಟ, ದೇಹ ಭಾಷೆ (ಇದಕ್ಕೆ ಸ್ಪರ್ಶನ ಎನ್ನುತ್ತಾರೆ) ಧರಿಸಿದ ಬಟ್ಟೆ, ಬಂದ ಸಮಯ ಇವೆಲ್ಲವೂ ಪರಿಗಣಿತವಾಗುತ್ತದೆ. ಸ್ಪರ್ಶನವೆಂದರೆ ಬಂದ ವ್ಯಕ್ತಿ ಪ್ರಶ್ನೆ ಕೇಳುವಾಗ ಯಾವ ಭಂಗಿಯಲ್ಲಿ ಕುಳಿತಿದ್ದಾನೆ. ತನ್ನ ದೇಹದ ಯಾವ ಭಾಗಗಳನ್ನು ಪದೇಪದೇ ಮುಟ್ಟುತ್ತಿದ್ದಾನೆ ಎಂಬುದನ್ನೆಲ್ಲ ಸೂಕ್ಷ್ಮವಾಗಿ ಅವಲೋಕಿಸಲಾಗುತ್ತದೆ’ ಎಂದು ವಿವರಿಸುತ್ತಾರೆ ದೈವಜ್ಞ ನಾರಾಯಣ ರಂಗ ಭಟ್ಟರು.
ಮುಂದುವರಿದು ‘ ಎಲ್ಲ ಸಮಸ್ಯೆಗಳಿಗೂ ಸಮಾಧಾನ ಕಂಡುಕೊಳ್ಳಲು ಅಷ್ಟಮಂಗಲ ಪ್ರಶ್ನೆ ಕೇಳಲಾಗುವುದಿಲ್ಲ. ಸ್ಥಳಕ್ಕೆ ತೆರಳಿ ಸಾಕಷ್ಟು ಸಮಯ ಅಲ್ಲಿ ಇದ್ದು ಉತ್ತರ ಹೇಳಬೇಕಾಗುತ್ತದೆ. ಬಂದ ವ್ಯಕ್ತಿಯ ಸಮಸ್ಯೆಗೆ ಅನುಗುಣವಾಗಿ ಯಾವ ರೀತಿಯ ಪ್ರಶ್ನಾ ಮಾರ್ಗ ಸೂಕ್ತ ಎಂದು ವಿವೇಚಿಸಲಾಗುತ್ತದೆ. ‘ತಾತ್ಕಾಲಿಕ ಪ್ರಶ್ನಾ ಮಾರ್ಗ’ ಸೂಕ್ತ ಎನಿಸಿದರೆ ಅದನ್ನೆ ಅನುಸರಿಸಲಾಗುತ್ತದೆ’ ಎಂದು ವಿವರಿಸುತ್ತಾರೆ.
![]() |
ಅಷ್ಟಮಂಗಲ ಪ್ರಶ್ನಾ ಸಂದರ್ಭದಲ್ಲಿ ಬಳಸಲ್ಪಡುವ ಎಂಟು ವಸ್ತುಗಳು |
‘ಅಷ್ಟಮಂಗಲ ಪ್ರಶ್ನಾ ಮಾರ್ಗ’ ಅನುಸರಿಸುವಾಗ ಎಂಟು ವಸ್ತುಗಳು ಮುಖ್ಯವಾಗುತ್ತವೆ. ಕುಂಕುಮ, ಕನ್ನಡಿ, ಹೂ ಅಕ್ಷತೆ (ಭತ್ತ-ಅಕ್ಕಿ ಮಿಶ್ರಣ), ಹಣ್ಣು ತಾಂಬೂಲ ಮತ್ತು ಬಿಳಿ ಬಟ್ಟೆ. ಸಾಮಾನ್ಯವಾಗಿ ಈ ಮಾರ್ಗ ಅನುಸರಿಸುವಾಗ ಒಬ್ಬರಿಗಿಂತ ಹೆಚ್ಚು ಮಂದಿ ದೈವಜ್ಞರು ಇರುತ್ತಾರೆ. ಇಂತಿಷ್ಟೆ ಕಾಲ ಮಿತಿಯೊಳಗೆ ಈ ಮಾರ್ಗದ ಆಚರಣೆ ಮುಗಿಯುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಒಂದೆರಡು ದಿನಗಳಾಗಬಹುದು ಅಥವಾ ಇನ್ನೂ ಹೆಚ್ಚು ದಿನಗಳಾಗಬಹುದು. ಈ ಹಂತಗಳಲ್ಲಿ ಕಂಡು ಬಂದ ವಿಷಯಗಳನ್ನೆಲ್ಲ ವಿಮರ್ಶಿಸಿ-ವಿಶ್ಲೇಷಿಸಿ ಫಲಿತಾಂಶ ತಿಳಿಸುತ್ತಾರೆ.
ಅಷ್ಟಮಂಗಲದ ಬಗ್ಗೆ ವಿವರವಾಗಿ ತಿಳಿದು; ಧನ್ಯವಾದ ಹೇಳಿ ಮೇಲೆದ್ದಾಗ ಬರೋಬ್ಬರಿ ಒಂದೂವರೆ ತಾಸು ಚರ್ಚಿಸಿದ್ದೆವು. ನಾನು ಹೋದ ಸಂದರ್ಭದಲ್ಲಿ ದೂರದೂರಿನಿಂದ ಬಂದ ಕುಟುಂಬವೊಂದು ತಮ್ಮ ಸಮಸ್ಯೆಗಳನ್ನು ತಿಳಿಸಿ ಸಂದೇಹಗಳನ್ನು ಪರಿಹರಿಸಿಕೊಳ್ಳುತ್ತಿದ್ದರು. ಇನ್ನೂ ಕೆಲವರು ಹೊರಗೆ ಕುಳಿತಿದ್ದರು. ಒಳಗಿದ್ದವರು ಹೊರಗೆ ಬಂದ ಬಳಿಕ ನನ್ನನ್ನು ಕರೆದರು. ಹೆಚ್ಚು ಸಮಯವಿಲ್ಲ; ಎರಡೇ ನಿಮಿಷ ಮಾತನಾಡಬಹುದು ಎಂದವರು ಸಂವಾದದಲ್ಲಿ ತೊಡಗಿದಂತೆ ಸುದೀರ್ಘವಾಗಿಯೇ ಮಾತನಾಡಿದರು. ಅಷ್ಟಮಂಗಲದ ಬಗ್ಗೆ ಇನ್ನೂ ಸಾಕಷ್ಟು ವಿಷಯಗಳನ್ನು ತಿಳಿಸಿದರು. ಎಲ್ಲವನ್ನೂ ಇಲ್ಲಿ ವಿವರಿಸಿದರೆ ವಿಷಯ ಕಗ್ಗಂಟು ಎನಿಸಬಹುದು. ಆದ್ದರಿಂದ ಸಂಕ್ಷಿಪ್ತ ಮಾಡಿದ್ದೇನೆ. ಹೊರ ಬರುವ ಸಂದರ್ಭದಲ್ಲಿ ಅವರು ಹೇಳಿದ ಮಾತು ಕಿವಿಯಲ್ಲಿ ಗುಯ್ಹ್ ಗುಡುತ್ತಿದೆ.
ಜ್ಯೋತಿಷಿಗಳು ಎಂದರೆ ಬಹುತೇಕ ಜನ ಮಂತ್ರ-ತಂತ್ರ-ಸಿದ್ದಿಗಳನ್ನೆಲ್ಲ ತಿಳಿದವರು. ಎಂಥದ್ದೆ ಸಮಸ್ಯೆ ಪರಿಹರಿಸಬಲ್ಲರು ಎಂದುಕೊಂಡಿದ್ದಾರೆ. ಆದರೆ ವಾಸ್ತವ ಇದಲ್ಲ. ಜ್ಯೋತಿಷ ಎಂದರೆ ಮಾರ್ಗದರ್ಶನ ಮಾಡುವುದು ಮಾತ್ರ. ಜ್ಯೋತಿಷಿ ಓರ್ವ ಗೈಡ್’
i am sorry to say that the whole rigmarole of ashtamangala prashne is irrelevant. it deserves to be ignored like phala jyatisha.
ReplyDeleteRaitha avare, ondu sala neevu swarna mangala/asta mangala prasne karyakramadalli bhagavahisabeku.
ReplyDeleteDaivajnanannu ahvaanisalu hoguva ebbaru vyaktigalu haakiruva Olachaddi colour kooda avarau(uttara heluvvaru-daivajna alla)heluttaare...
ಯಾವುದೇ ವಿಷಯದ ಬಗ್ಗೆ ಎಲ್ಲರಿಗೂ ಒಂದೇ ಅಭಿಪ್ರಾಯ ಇರುವುದಿಲ್ಲ. ಇರಬೇಕೆಂದು ನಿರೀಕ್ಷಿಸುವುದು ಸೂಕ್ತವೂ ಅಲ್ಲ. ನಮ್ಮ ಅನಿಸಿಕೆಗಳನ್ನು ಹೇಳುವುದಕ್ಕೆ ನಾವು ಸ್ವತಂತ್ರರು. ಚರ್ಚೆಗಳಿಂದ ಸತ್ಯದ ಹೊಂಬೆಳಕು ಮೂಡುತ್ತದೆ ಎಂಬುದು ನನ್ನ ಭಾವನೆ. ಈ ಹಿನ್ನೆಲೆಯಲ್ಲಿ 'ಅನಾಮಧೇಯ' ವಾಗಿ ಕಾಮೆಂಟು ಮಾಡುವುದು ಸರಿ ಎನಿಸುವುದಿಲ್ಲ. ಮುಕ್ತವಾಗಿ ಸಂವಾದಿಸೋಣ. ಇದರಿಂದ ಏನೂ ಆಗದೇ ಇರಬಹುದು. ಆದರೆ ಗೆಳೆತನದ ಪರಿಧಿ ಹಿಗ್ಗುತ್ತಾ ಹೋಗುತ್ತದೆ ಎಂದು ನಂಬುತ್ತೇನೆ. ಸಂವಾದ ಸಾಗಲಿ...
ReplyDelete